ಐಟಿ ದಾಳಿ ಹಿಂದಿದೆಯಾ ರಾಜಕೀಯ ಹುನ್ನಾರ: ಅಲ್ಲಾಡಲಿದೆಯಾ ರಾಕ್​ಲೈನ್​ ಕೋಟೆಯ ಬುನಾದಿ..?

ಕಾಂಗ್ರೆಸ್​ ಶಾಸಕ ಮುನಿರತ್ನ ಅವರ ಸಂಬಂಧಿ ಆಗಿದ್ದೇ ರಾಕ್​ಲೈನ್​ ವೆಂಕಟೇಶ್​ ಅವರಿಗೆ ಶಾಪವಾಯಿತೆ? ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಐಟಿ ದಾಳಿ ನಡೆದಿದೆ ಎನ್ನುವುದೇ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಬಿಸಿ ಚರ್ಚೆ. ನಿಜಕ್ಕೂ ಐಟಿ ದಾಳಿ ಹಿಂದಿನ ಸತ್ಯವೇನು ಗೊತ್ತಾ..?

Anitha E | news18
Updated:January 3, 2019, 4:56 PM IST
ಐಟಿ ದಾಳಿ ಹಿಂದಿದೆಯಾ ರಾಜಕೀಯ ಹುನ್ನಾರ: ಅಲ್ಲಾಡಲಿದೆಯಾ ರಾಕ್​ಲೈನ್​ ಕೋಟೆಯ ಬುನಾದಿ..?
ಕಾಂಗ್ರೆಸ್​ ಶಾಸಕ ಮುನಿರತ್ನ ಅವರ ಸಂಬಂಧಿ ಆಗಿದ್ದೇ ರಾಕ್​ಲೈನ್​ ವೆಂಕಟೇಶ್​ ಅವರಿಗೆ ಶಾಪವಾಯಿತೆ? ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಐಟಿ ದಾಳಿ ನಡೆದಿದೆ ಎನ್ನುವುದೇ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಬಿಸಿ ಚರ್ಚೆ. ನಿಜಕ್ಕೂ ಐಟಿ ದಾಳಿ ಹಿಂದಿನ ಸತ್ಯವೇನು ಗೊತ್ತಾ..?
  • News18
  • Last Updated: January 3, 2019, 4:56 PM IST
  • Share this:
-ಅನಿತಾ ಈ, 

ರಾಕ್​ಲೈನ್​ ನಿಜಕ್ಕೂ ಆದಾಯ ತೆರಿಗೆ ಕಟ್ಟದೆ ವಂಚಿಸಿದ್ದಾರಾ.... ಅಥವಾ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಐಟಿ ದಾಳಿ ನಡೆದಿದೆಯಾ..? ಹೌದು ಈ ಚರ್ಚೆ ಸದ್ಯ ರಾಜಕೀಯ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್,​ ಕಾಂಗ್ರೆಸ್​ ಶಾಸಕ ಮುನಿರತ್ನ ಅವರ ಸಂಬಂಧಿ. ಅಲ್ಲದೆ ಹೆಸರಾಂತ ನಿರ್ಮಾಪಕರೂ ಹೌದು. ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ರಾಕ್​ಲೈನ್​ ಕಾಂಗ್ರೆಸ್​ ಪರ ಅನ್ನೋದು ಹೇಳಬೇಕಾಗಿಲ್ಲ.

ಇನ್ನೇನು ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಆರ್ಥಿಕವಾಗಿ ಬೆಂಬಲ ನೀಡುವವರಲ್ಲಿ ವೆಂಕಟೇಶ್​ ಸಹ ಒಬ್ಬರು ಎನ್ನಲಾಗುತ್ತಿದೆ. ಇದರಿಂದಲೇ ಈ ಐಟಿ ದಾಳಿ ನಡೆಸಲಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ರಾಕ್​ಲೈನ್​ ಬ್ಯ್ರಾಂಡ್​ ಆಗಿ ಬೆಳೆದು ಬಂದ ಹಾದಿ... 

ರಾಕ್​ಲೈನ್​ ವೆಂಕಟೇಶ್​ ಒಬ್ಬ ಸ್ಟಾರ್​ ನಿರ್ಮಾಪಕ. ರಾಕ್​ಲೈನ್​ ಪ್ರೊಡಕ್ಷನ್ಸ್​ ಮಾಲೀಕರಾಗಿರುವ ವೆಂಕಟೇಶ್​ ಕೇವಲ ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳದಲ್ಲೂ ಸಿನಿಮಾ ನಿರ್ಮಾಣ ಮಾಡಿರುವ ಸೆಲೆಬ್ರಿಟಿ ನಿರ್ಮಾಪಕ.

ಕೇವಲ ಸಿನಿಮಾ ನಿರ್ಮಾಣವಲ್ಲದೆ ಹಲವಾರು ಸಿನಿಮಾಗಳಲ್ಲಿ ಅಭಿನಯವನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ ರಾಕ್​ಲೈನ್​. ಕನ್ನಡದ ದಿಗ್ಗಜ ನಟರೊಂದಿಗೆ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ರಾಕ್​ಲೈನ್​ ಹೆಸರು ಈಗ ಬ್ರ್ಯಾಂಡ್​ ಆಗಿ ಬಿಟ್ಟಿದೆ.ಇದನ್ನೂ ಓದಿ: ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ನಿರ್ಮಾಪಕರಾಗಿ ಸ್ಯಾಂಡಲ್​ವುಡ್​ಗೆ ಕಾಲಿಡುವ ಮುನ್ನ ರಾಕ್​ಲೈನ್​ ಕನ್ನಡ ಸಿನಿಮಾಗಳಲ್ಲಿ ಪೋಷಕ ಹಾಗೂ ಖಳನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ನಂತರ ಕಿರುತೆರೆಯಲ್ಲಿ ಧಾರಾವಾಹಿಯ ನಿರ್ಮಾಣಕ್ಕೆ ಕೈ ಹಾಕಿ ಹಂತ ಹಂತವಾಗಿ ಸಿನಿಮಾ ನಿರ್ಮಾಪಕರಾದವರು. ಅದರಲ್ಲೂ ರಿಮೇಕ್​ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದ ವೆಂಕಟೇಶ್​ ಮೊದಲು ತೆಲುಗಿನ 'ಸೀತಾರಾಮಯ್ಯ ಗಾರಿ ಮನವರಾಳು'  ಎಂಬ ಸಿನಿಮಾದ ರೀಮೇಕ್​ ಅನ್ನು ಕನ್ನಡದಲ್ಲಿ 'ಬೆಳ್ಳಿ ಮೋಡಗಳು' ಎಂಬ ಶೀರ್ಷಿಕೆಯಲ್ಲಿ ನಿರ್ಮಿಸಿದರು. ಇದರಲ್ಲಿ ರಮೇಶ್​ ಅವರವಿಂದ್​, ಮಾಲಾಶ್ರೀ ಹಾಗೂ ದೊಡ್ಡಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಆ ಕಾಲಕ್ಕೆ ದೊಡ್ಡ ಹಿಟ್​ ಆಗಿತ್ತು.

ನಂತರ ಕನ್ನಡದ ದಿಗ್ಗಜ ನಟರಾದ ಅಂಬರೀಷ, ವಿಷ್ಣುವರ್ಧನ್​, ಶಿವರಾಜ್​ಕುಮಾರ್​, ಉಪೇಂದ್ರ, ದರ್ಶನ್​, ಸುದೀಪ್​ ದೇರಿದಂತೆ ಸಾಕಷ್ಟು ನಟರಿಗಾಗಿ ಸಿನಿಮಾ ನಿರ್ಮಾಣ ಮಾಡಿದರು. 'ಡಕೋಟ ಎಕ್ಸ್​ಪ್ರೆಸ್​' ಸಿನಿಮಾದಲ್ಲಿ ನಾಯಕನಾಗಿಯೂ ಬಣ್ಣ ಹಚ್ಚಿ ಯಶಸ್ಸು ಕಂಡವರು. ಇದಾದ ನಂತರ ರಾಕ್​ಲೈನ್​  ಸ್ಯಾಂಡಲ್​ವುಡ್​ನಿಂದ ಪರಭಾಷೆ ಸಿನಿಮಾಗಳ ನಿರ್ಮಾಣದತ್ತ ಹೆಜ್ಜೆ ಹಾಕಿದರು.

ಟಾಲಿವುಡ್​ ನಂತರ ಕಾಲಿವುಡ್​ನಲ್ಲೂ ಖಾತೆ ತೆರೆದ ರಾಕ್​ಲೈನ್

2014ರಲ್ಲಿ ಟಾಲಿವುಡ್​ನಲ್ಲಿ 'ಪವರ್​' ಸಿನಿಮಾ ನಿರ್ಮಾಣ ಮಾಡುವ ಮೂಲಕ ತೆಲುಗು ಸಿನಿರಂಗದಲ್ಲೂ ತಮ್ಮ ಖಾತೆ ತೆರೆದರು. ಇದರಲ್ಲಿ ರವಿತೇಜ ನಾಯಕನಾಗಿ ಅಭಿನಯಿಸಿದ್ದರು. ನಂತರ ಸೂಪರ್​ ಸ್ಟಾರ್​ ರಜಿನಿ ಜತೆ ತಮಿಳಿನಲ್ಲಿ 'ಲಿಂಗ' ಸಿನಿಮಾವನ್ನು ನಿರ್ಮಿಸಿದರು. ಇದಾದ ನಂತರ ಪರಭಾಷೆಯ ಸಾಕಷ್ಟು ಸ್ಟಾರ್​ ನಟರ ಸಿನಿಮಾಗಳಲ್ಲಿ  ವೆಂಕಟೇಶ್ ನಿರ್ಮಾಪಕರಾಗಿ ಕೆಲಸ ಮಾಡಿದರು.

ತಮಿಳಿನಲ್ಲಿ ತಲೈವಾ ರಜನಿ ಹಾಗೂ ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ ಜತೆ ಸಿನಿಮಾ ನಿರ್ಮಿಸಿರುವ ರಾಕ್​ಲೈನ್​ ವೆಂಕಟೇಶ್​


ಸಲ್ಲು ಭಾಯಿ ಜತೆ ಬಿ-ಟೌನ್​ನಲ್ಲೂ ಬ್ರ್ಯಾಂಡ್​ ಆದ ರಾಕ್​ಲೈನ್​

ಅಷ್ಟೇ ಅಲ್ಲ ಟಾಲಿವುಡ್​ ನಂತರ 2015ರಲ್ಲಿ ಬಾಲಿವುಡ್​ನಲ್ಲೂ ರಾಕ್​ಲೈನ್​ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದರು. ಅದು ಸಹ ಬಿ-ಟೌನ್​ನ ಬ್ಯಾಡ್​ ಬಾಯ್​ ಹಾಗೂ ನೂರು ಕೋಟಿಯ ಸರದಾರ ಸಲ್ಮಾನ್​ ಖಾನ್​ ಜತೆ ಸಿನಿಮಾ ನಿರ್ಮಾಣ ಮಾಡಲು ಮುಂದಾದರು. ಸಲ್ಮಾನ್​ ಅಭಿನಯದ 'ಭಜರಂಗಿ ಭಾಯಿಜಾನ್​' ಸಿನಿಮಾದಲ್ಲಿ ಸಲ್ಲು ಜತೆ ಸಹ ನಿರ್ಮಾಪಕರಾಗಿದ್ದರು ವೆಂಕಟೇಶ್​. ಇದು ಸಹ ಬಾಕ್ಸಾಫಿಸ್​ನಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಉಪೇಂದ್ರ ಹತ್ತು ವರ್ಷಗಳ ನಂತರ 2010ರಲ್ಲಿ ನಿರ್ದೇಶನ ಮಾಡಲು ಮುಂದಾದ ಸಿನಿಮಾದ ಫೋಟೋಶೂಟ್​ಗಾಗಿ ವೆಂಕಟೇಶ್​ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಮಲಯಾಳಂನಲ್ಲಿ ಮೋಹನ್​ಲಾಲ್​ ಅಭಿನಯದ 'ವಿಲನ್​' ಸಿನಿಮಾವನ್ನೂ ಸಹ ಇದೇ ರಾಕ್​ಲೈನ್​ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಿತ್ತು.

ಇದನ್ನೂ ಓದಿ: ಸಿನಿಮಾ ಜತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ 'ಕೆ.ಜಿ.ಎಫ್'​ ನಿರ್ಮಾಪಕರ ಕರಾಮತ್ತು..!

ದೊಡ್ಮನೆ ಹುಡುಗ ಪುನೀತ್​ ಅಭಿನಯದ 'ನಟ ಸಾರ್ವಭೌಮ' ಸಿನಿಮಾಗೂ ಸಹ ಇದೇ ವೆಂಕಟೇಶ್​ ಅವರೇ ಹಣ ಹೂಡಿದ್ದಾರೆ. ಇದು ಭಾರೀ ಬಜೆಟ್​ನ ಸಿನಿಮಾವಾಗಿದ್ದು, ಅದಕ್ಕಾಗಿ ಹೂಡಲಾಗಿರುವ ಹಣ ಎಲ್ಲಿಂದ ಬಂತು ಎಂದು ಸದ್ಯ ಐಟಿ ಅಧಿಕಾರಿಗಳು ವೆಂಕಟೇಶ್​ ಅವರ ವಿಚಾರಣೆ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೆ ಭಾರತೀಯ ಸಿನಿರಂಗದ ಬಗ್ಗೆ ಇಡೀ ವಿಶ್ವವೇ ಮಾತನಾಡುವಂತೆ ಮಾಡಿದ್ದ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾದ ನಿರ್ಮಾಣದಲ್ಲೂ ರಾಕ್​ಲೈನ್​ ಹೆಸರು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಎಲ್ಲೂ ಸಹ ಅಧಿಕೃತ ಮಾಹಿತಿ ಇಲ್ಲ.

ಆದರೆ ಕನ್ನಡ ಸೇರಿದಂತೆ ಪರಭಾಷೆಗಳ ಸಿನಿಮಾಗಳಲ್ಲೂ ಸಹ ವಿಜಯ ಪತಾಕೆ ನೆಟ್ಟಿರುವ ರಾಕ್​ಲೈನ್​ ವೆಂಕಟೇಶ್​ಗೆ ಈಗ ಐಟಿ ದಾಳಿಯಿಂದ ಸಂಕಟ ಎದುರಾಗಿದೆ. ಈ ಸಮಸ್ಯೆಯಿಂದ ಅವರಿಗೆ ಯಾವ ಮಟ್ಟದಲ್ಲಿ ತೊಂದರೆಯಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

ರಾಕ್​ಲೈನ್​ ಕೋಟೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೆಷ್ಟು...

ಇಂದು ಬೆಳಿಗ್ಗೆಯಿಂದ ನಡೆಯುತ್ತಿರುವ ಐಟಿ ದಾಳಿಯಲ್ಲಿ ನಟ ಹಾಗೂ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರ ಮನೆಯಿಂದ ಎರಡು ಕೆ.ಜಿ.ಯಷ್ಟು ಚಿನ್ನಾಭರಣ, 20 ಕೆ.ಜಿ.ಗೂ ಹೆಚ್ಚು ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆಯಂತೆ. ನೆಲಮಂಗಲ, ದೇವನಹಳ್ಳಿ, ಪೀಣ್ಯ ಬಳಿಯ ಎಕರೆಗಟ್ಟಲೆ ಜಾಗದ ದಾಖಲೆಗಳ ಪರಿಶೀಲನೆ. ಅಷ್ಟೇ ಅಲ್ಲ ಮಕ್ಕಳ ಹೆಸರಲ್ಲಿ ನೂರು ಕೋಟಿ ಮೌಲ್ಯದ ಆಸ್ತಿ ಸಹ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಐಟಿ ಅಧಿಕಾರಿಗಳು 2016-17 ಹಾಗೂ 2018ರ ಆದಾಯ ತೆರಿಗೆಯ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಎಸ್ .ಬಿ. ಐ, ಎಚ್. ಎಸ್. ಬಿ. ಸಿ, ಐ.ಸಿ.ಐ.ಸಿ.ಐ ಬ್ಯಾಂಕ್ ನ ಖಾತೆಗಳ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಒಟ್ಟು ಆರು ಮಂದಿ ಆದಾಯ ತೆರಿಗೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ.

First published: January 3, 2019, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading