News18 India World Cup 2019

ಎನ್. ಮಹೇಶ್​ಗೆ ಸಚಿವ ಸ್ಥಾನ ತೊರೆಯಲು ಪೂರ್ಣ ಮನಸಿರಲಿಲ್ಲವೇ? ಅವರು ರಾಜೀನಾಮೆ ಕೊಡಲು ನಿಜ ಕಾರಣವೇನು?

ಅಚಾನಕ್ಕಾಗಿ ಸಿಕ್ಕ ಶಿಕ್ಷಣ ಖಾತೆ ಸಚಿವ ಪದವಿಯನ್ನು ಬಿಡಲು ಎನ್. ಮಹೇಶ್ ಅವರಿಗೆ ಮನಸಿರಲಿಲ್ಲವಾ? ದಿಢೀರನೇ ರಾಜೀನಾಮೆ ಕೊಡಲು ಏನು ಕಾರಣವಿತ್ತು? ಬಿಎಸ್​ಪಿ ಮುಖಂಡ ಅಶೋಕ್ ಸಿದ್ಧಾರ್ಥ್ ನಿನ್ನೆ ಬೆಂಗಳೂರಿಗೆ ಬಂದಿದ್ದೇಕೆ?

Vijayasarthy SN
Updated:October 12, 2018, 4:01 PM IST
ಎನ್. ಮಹೇಶ್​ಗೆ ಸಚಿವ ಸ್ಥಾನ ತೊರೆಯಲು ಪೂರ್ಣ ಮನಸಿರಲಿಲ್ಲವೇ? ಅವರು ರಾಜೀನಾಮೆ ಕೊಡಲು ನಿಜ ಕಾರಣವೇನು?
ಎನ್. ಮಹೇಶ್
Vijayasarthy SN
Updated: October 12, 2018, 4:01 PM IST
- ಜನಾರ್ದನ ಹೆಬ್ಬಾರ್, ನ್ಯೂಸ್18 ಕನ್ನಡ

ಬೆಂಗಳೂರು(ಅ. 12): ಉತ್ತರ ಪ್ರದೇಶದ ಹೊರಗಿನ ಏಕೈಕ ಬಿಎಸ್​ಪಿ ಸಚಿವರಾಗಿ ಹೊಸ ಇತಿಹಾಸ ಪುಟ ತೆರೆದಿದ್ದ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ನಿನ್ನೆ ಸಂಪುಟಕ್ಕೆ ರಾಜೀನಾಮೆ ಕೊಟ್ಟಿದ್ದರು. ಸಮ್ಮಿಶ್ರ ಸರಕಾರದೊಂದಿಗೆ ಮುನಿಸಿನ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿರಲಿಲ್ಲ. ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಸೂಚನೆ ಮೇರೆಗೆಯೇ ಅವರು ಸಂಪುಟದಿಂದ ಹೊರನಡೆದದ್ದೆಂಬುದು ರಾಜಕೀಯ ಸೂಕ್ಷ್ಮ ಬಲ್ಲ ಎಲ್ಲರಿಗೂ ಗೊತ್ತಾಗಿತ್ತು. ಬಿಎಸ್​ಪಿ ರಾಜ್ಯಸಭಾ ಸದಸ್ಯ ಅಶೋಕ್ ಸಿದ್ಧಾರ್ಥ್ ಅವರು ನಿನ್ನೆ ರಾಜ್ಯಕ್ಕೆ ಆಗಮಿಸಿ ಮಹೇಶ್ ಅವರನ್ನ ಭೇಟಿ ಮಾಡಿದ್ದು ಹಲವು ಅನುಮಾನಗಳನ್ನ ಹುಟ್ಟುಹಾಕಿದ್ದಂತೂ ಹೌದು. ಅದಕ್ಕೆ ಪೂರಕವೆಂಬಂತೆ ನ್ಯೂಸ್18 ಕನ್ನಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಎನ್. ಮಹೇಶ್ ಅವರು ಒಲ್ಲದ ಮನಸ್ಸಿನಿಂದಲೇ ಸಂಪುಟಕ್ಕೆ ರಾಜೀನಾಮೆ ಕೊಟ್ಟಿದ್ದರೆಂಬ ಸುದ್ದಿ ಇದೆ. ಎರಡು ದಿನಗಳ ಹಿಂದೆಯೇ ಮಹೇಶ್ ರಾಜೀನಾಮೆ ಸಲ್ಲಿಸಬೇಕಿತ್ತು.

ಇದನ್ನೂ ಓದಿ: ಮಹೇಶ್​ಗೂ ನಮಗೂ ಏನ್ರೀ ಸಂಬಂಧ; ರಾಜೀನಾಮೆಯಿಂದ ಸರ್ಕಾರಕ್ಕೇನು ಹಾನಿ ಇಲ್ಲ: ಸಿದ್ದರಾಮಯ್ಯ

ಕಳೆದ ವಾರದಂದು ಎನ್. ಮಹೇಶ್ ಅವರು ದೆಹಲಿಗೆ ತೆರಲಿ ಮಾಯಾವತಿಯನ್ನು ಭೇಟಿ ಮಾಡಿದ್ದರು. ಆಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಯಾವತಿ ಸೂಚನೆ ಕೊಟ್ಟಿದ್ದರಂತೆ. ದೆಹಲಿಯಿಂದ ವಾಪಸ್ ಬಂದು ಎರಡು ದಿನವಾದರೂ ಮಹೇಶ್ ರಾಜೀನಾಮೆ ನೀಡುವ ಗೋಜಿಗೆ ಹೋಗಿರಲಿಲ್ಲ. ಇದರಿಂದ ಕೆಂಡಾಮಂಡಲಗೊಂಡಿದ್ದ ಮಾಯಾವತಿ ಅವರು ಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಆಜ್ಞೆ ದಿಕ್ಕರಿಸಿದರೆ ಸಂಪುಟದಿಂದ ವಜಾ ಮಾಡಿಸುವುದು ಹೇಗೆಂದು ಗೊತ್ತಿದೆ. ರಾಜೀನಾಮೆ ನೀಡದಿದ್ದರೆ ಪಕ್ಷದಿಂದಲೇ ಉಚ್ಛಾಟಿಸಬೇಕಾಗುತ್ತದೆ ಎಂದೆಲ್ಲಾ ಮಹೇಶ್​ಗೆ ಮಾಯಾವತಿ ಎಚ್ಚರಿಕೆ ಕೊಟ್ಟರೆನ್ನಲಾಗಿದೆ. ಮಹೇಶ್ ಅವರಿಂದ ರಾಜೀನಾಮೆ ಕೊಡಿಸಲೆಂದೇ ಅಶೋಕ್ ಸಿದ್ಧಾರ್ಥ್ ಅವರನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ವೇಳೆ, ಎನ್. ಮಹೇಶ್ ಅವರು ಅಶೋಕ್ ಸಿದ್ಧಾರ್ಥ್ ಜೊತೆ ಸಾಕಷ್ಟು ಚರ್ಚೆ ನಡೆಸಿದರು. ಸಚಿವ ಸ್ಥಾನ ಉಳಿಸಿಕೊಳ್ಳುವ ಇಚ್ಛೆಯನ್ನು ಈ ವೇಳೆ ತೋಡಿಕೊಂಡರೆಂಬ ಮಾಹಿತಿ ಬೆಳಕಿಗೆ ಬಂದಿದೆ. ಆದರೆ, ಪಕ್ಷಾಧ್ಯಕ್ಷೆ ಮಾಯಾವತಿ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರುವುದರಿಂದ ಅದನ್ನು ಪಾಲಿಸಲೇಬೇಕು ಎಂದು ಅಶೋಕ್ ಸಿದ್ಧಾರ್ಥ್ ಸ್ಪಷ್ಟವಾಗಿ ತಿಳಿಸಿದಾಗ ಎನ್. ಮಹೇಶ್ ಅವರಿಗೆ ರಾಜೀನಾಮೆ ಬಿಟ್ಟು ಬೇರೆ ದಾರಿ ಇರಲಿಲ್ಲವೆನ್ನಲಾಗಿದೆ.

ಇದನ್ನೂ ಓದಿ: ಶ್ರೀರಾಮುಲು ದೊಡ್ಡವರು, ಅವರು ಗೆಲ್ಲಬೇಕು; ಡಿಕೆ ಶಿವಕುಮಾರ್​ ವ್ಯಂಗ್ಯ

ಇತ್ತೀಚೆಗೆ ಎನ್. ಮಹೇಶ್ ಅವರು ಸ್ವಚ್ಛತಾ ಕಾರ್ಯಕ್ರಮವೊಂದರ ವೇಳೆ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್(ಪಾರ್ಥೇನಿಯಂ ಕಳೆ) ಗಿಡವನ್ನು ನಿರ್ಮೂಲನೆಗೊಳಿಸುವ ಮಾತುಗಳನ್ನಾಡಿದ್ದರು. ಅದು ಕಾಂಗ್ರೆಸ್ ಪಕ್ಷವನ್ನುದ್ದೇಶಿಸಿಯೇ ಅವರು ಮಾತನಾಡಿದಂತಿತ್ತು. ಕೆಲ ದಿನಗಳ ಹಿಂದೆಯೂ ಮೈತ್ರಿಪಕ್ಷಗಳ ವಿರುದ್ಧ ಅವರು ಟೀಕೆಗಳನ್ನ ಹೂಡಿದ್ದರು. ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರದಲ್ಲಿದ್ದು ದಲಿತರಿಗೆ ಏನೂ ಮಾಡಲಿಲ್ಲವೆಂದು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಯಾವಾಗ ಬೇಕಾದರೂ ಸಂಪುಟದಿಂದ ಹೊರನಡೆಯಬಹುದೆಂಬ ನಿರೀಕ್ಷೆ ಇತ್ತು. ಸರಕಾರದೊಳಗೆ ಇದ್ದುಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದು ಆ ಪಕ್ಷದ ಮುಖಂಡರಿಗೆ ಮುಜುಗರ ತಂದಿತ್ತು. ರಾಹುಲ್ ಗಾಂಧಿವರೆಗೂ ಈ ವಿಚಾರ ಮುಟ್ಟಿತ್ತು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಎಸ್​ಪಿ ನಿರಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ, ಎನ್. ಮಹೇಶ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಸಮ್ಮಿಶ್ರ ಸರಕಾರದ ರೂವಾರಿಗಳಿಗೆ ರಾಹುಲ್ ಗಾಂಧಿ ಸೂಚನೆ ರವಾನಿಸಿದ್ದರೆಂಬ ಸುದ್ದಿ ನಿನ್ನೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
Loading...

ಮೈತ್ರಿ ಪಕ್ಷಗಳ, ಅದರಲ್ಲೂ ಕಾಂಗ್ರೆಸ್ ವಿರುದ್ಧ ಎನ್. ಮಹೇಶ್ ಟೀಕೆ ಮಾಡುವುದರ ಹಿಂದೆ ಮಾಯಾವತಿ ಅವರ ಆದೇಶವಿತ್ತೆನ್ನಲಾಗಿದೆ. ಆ ದಿನ ತೋರಿದ ಆಕ್ರೋಶವನ್ನು ಕೊಳ್ಳೇಗಾಲ ಶಾಸಕರು ನಿನ್ನೆ ಸಂಪುಟಕ್ಕೆ ರಾಜೀನಾಮೆ ಕೊಡುವಾಗ ತೋರಲಿಲ್ಲ. ಪಕ್ಷದ ಸಂಘಟನೆ ಮಾಡುವ ಉದ್ದೇಶದಿಂದ ತಾನು ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದರು. ಯಾವ ಪಕ್ಷವನ್ನೂ ಅವರು ಟೀಕಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಜೆಡಿಎಸ್ ಪಕ್ಷ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದರು. ಕುಮಾರಸ್ವಾಮಿ ತನ್ನ ಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ತಮ್ಮ ಬೇರು ಗಟ್ಟಿ ಮಾಡಿಕೊಳ್ಳುವ ಪ್ರಯತ್ನವನ್ನು ಮಹೇಶ್ ಮಾಡಿರುವ ಸಾಧ್ಯತೆ ಇಲ್ಲದಿಲ್ಲ.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...