ಕಡಾಡಿ, ಗಸ್ತಿಗೆ ರಾಜ್ಯಸಭಾ ಭಾಗ್ಯ: ಬಿಜೆಪಿಯ ಇತರ ಟಿಕೆಟ್ ವಂಚಿತರು ಏನಂತಾರೆ?

ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಗೆ ರಾಜ್ಯಸಭಾ ಟಿಕೆಟ್ ನೀಡಲಾಗಿದೆ. ಈ ಮುಂಚೆ ಟಿಕೆಟ್ ನಿರೀಕ್ಷೆಯಲ್ಲಿದ್ದ ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ ಪಕ್ಷದ ತಿರ್ಮಾನವನ್ನು ಸ್ವಾಗತಿಸಿದ್ದಾರೆ.

ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಈರಣ್ಣ ಕಡಾಡಿ

ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಈರಣ್ಣ ಕಡಾಡಿ

  • Share this:
ಬೆಂಗಳೂರು(ಜೂನ್ 09): ಬಿಜೆಪಿಯ ಪಾಲಿಗೆ ಸಿಗುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಪಕ್ಷದೊಳಗೆ ಸಾಕಷ್ಟು ಆಕಾಂಕ್ಷಿಗಳಿದ್ದರು. ಆದರೆ, ನಿರೀಕ್ಷೆಯೇ ಇಟ್ಟುಕೊಳ್ಳದ, ಸ್ಟಾರ್ ನಾಯಕರಲ್ಲದ ಇಬ್ಬರು ಕಾರ್ಯಕರ್ತರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಿ ಶಾಕ್ ಕೊಟ್ಟಿದೆ. ಯಡಿಯೂರಪ್ಪ ಶಿಫಾರಸು ಮಾಡಿದ ಮೂರೂ ಹೆಸರುಗಳನ್ನ ಹೈಕಮಾಂಡ್ ತಿರಸ್ಕಾರ ಮಾಡಿದೆ. ಸಭೆ, ಲಾಬಿ ಮೂಲಕ ಒತ್ತಡ ತಂದಿದ್ದ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಮತ್ತು ಪ್ರಕಾಶ್ ಶೆಟ್ಟಿ ಅವರಿಗೆ ನಿರಾಸೆಯಾಗಿದೆ. ಆದರೆ, ಈವರೆಗೆ ಯಾರೂ ಕೂಡ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಗೆ ರಾಜ್ಯಸಭೆ ಟಿಕೆಟ್ ಕೊಟ್ಟಿರುವುದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.

ರಮೇಶ್ ಕತ್ತಿ ಸ್ವಾಗತ:

ಮಾಜಿ ಸಚಿವ ಉಮೇಶ್ ಕತ್ತಿ ಅವರ ಸಹೋದರ ಹಾಗೂ ರಾಜ್ಯಸಭಾ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾಗಿದ್ದ ರಮೇಶ್ ಕತ್ತಿ ಅವರು ಹೈಕಮಾಂಡ್ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ. ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರು ತಳಮಟ್ಟದ ಕಾರ್ಯಕರ್ತರಾಗಿದ್ದಾರೆ. ಅವರು ಪಕ್ಷಕ್ಕೆ ಬಹಳ ಕೆಲಸ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡುವ ಮೂಲಕ ವರಿಷ್ಠರು ಒಳ್ಳೆಯ ಸಂದೇಶ ರವಾನಿಸಿದ್ದಾರೆ ಎಂದು ರಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.

ಟಿಕೆಟ್ ಸಿಗದಿದ್ದಕ್ಕೆ ನನಗೆ ನೋವು, ಬೇಸರ ಇಲ್ಲ. ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ, ವರಿಷ್ಠರು ಹೇಳಿದ ಹಾಗೆ ಎಲ್ಲಾ ಕೇಳಬೇಕು. ಬಿ.ಎಲ್. ಸಂತೋಷ್, ಬಿ.ಎಸ್. ಯಡಿಯೂರಪ್ಪ ಇಬ್ಬರೂ ಹಿರಿಯರಾಗಿದ್ದು ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದೂ ರಮೇಶ್ ಕತ್ತಿ ತಮ್ಮ ಅಸಮಾಧಾನವನ್ನೂ ತುಸು ಹೊರಹಾಕಿದ್ದಾರೆ.

ಇದನ್ನೂ ಓದಿ: ಬಗೆದು ತೋರಿಸಲಾ?: ಯಡಿಯೂರಪ್ಪ ವಿಚಾರಕ್ಕೆ ಎದೆ ಮುಟ್ಟಿಕೊಂಡ ರೇಣುಕಾಚಾರ್ಯ

ಪ್ರಭಾಕರ್ ಕೋರೆ ಹೇಳಿಕೆ:

ರಾಜ್ಯಸಭಾ ಚುನಾವಣೆಗೆ ಬಿಎಸ್​ವೈ ಕಳುಹಿಸಿದ ಪಟ್ಟಿಯಲ್ಲಿದ್ದ ಪ್ರಭಾಕರ್ ಕೋರೆ ಇದೀಗ ಹೈಕಮಾಂಡ್ ತೀರ್ಮಾನವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್​ನಲ್ಲಿದ್ದ ತನ್ನನ್ನು ಪಕ್ಷಕ್ಕೆ ಕರೆದು ಎರಡು ಬಾರಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ಈ ಬಾರಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದಾರೆ. ನಾನು ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ನನಗೆ ಈಗ ಯಾವುದೇ ಅಸಮಾಧಾನ ಇಲ್ಲ. ಇನ್ಮಂದೆ ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಿಕೊಂಡು ಹೋಗ್ತೀನಿ ಎಂದು ಬಿಜೆಪಿ ಕಚೇರಿಯಲ್ಲಿ ಪ್ರಭಾಕರ್ ಕೋರೆ ತಿಳಿಸಿದ್ದಾರೆ.

ರಮೇಶ್ ಕತ್ತಿ ಸಹೋದರ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ಅವರು ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದ್ಧಾರೆ. ಪಕ್ಷ ಒಳ್ಳೆಯ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ಶಿಸ್ತಿನ ಸಿಪಾಯಿಗಳಾಗಿ ಮುಂದುವರಿಯುತ್ತೇವೆ ಎಂದು ಶಾಸಕ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಹೇಳಿಕೆ:

ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ರಾಜ್ಯಸಭೆಗೆ ಟಿಕೆಟ್ ಕೊಟ್ಟಿರುವುದು ಇತಿಹಾಸ. ರಮೇಶ್ ಕತ್ತಿ ಜೊತೆ ನಿನ್ನೆಯೇ ಮಾತನಾಡಿದ್ದೇನೆ. ಅವರು ಸಮಾಧಾನವಾಗಿದ್ದಾರೆ. ಪ್ರಭಾಕರ್ ಕೋರೆಯವರಿಗೂ ಯಾವುದೇ ಅಸಮಾಧಾನ ಇಲ್ಲ. ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಬದ್ಧವಾಗಿರುವುದಾಗಿ ಹೇಳಿದ್ದೆವು. ಶಿಸ್ತಿನ ಪಕ್ಷದಲ್ಲಿ ಅಪಸ್ವರ ಬರಲು ಸಾಧ್ಯವಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ಧಾರೆ.

ಇದನ್ನೂ ಓದಿ: ‘ಗಾಂಧಿ ನುಡಿದಂತೆ ಕಾಂಗ್ರೆಸ್​​ ಆಯಸ್ಸು ಮುಗಿದಿದೆ‘ - ಡಿಸಿಎಂ ಗೋವಿಂದ ಕಾರಜೋಳ

ಈರಣ್ಣ ಕಡಾಡಿ ಸಮಾಧಾನಕರ ಮಾತು:

ಅನಿರೀಕ್ಷಿತವಾಗಿ ರಾಜ್ಯಸಭಾ ಟಿಕೆಟ್ ಪಡೆದ ಈರಣ್ಣ ಕಡಾಡಿ ಅವರು ಉಮೇಶ್ ಕತ್ತಿ ಜೊತೆ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದ್ಧಾರೆ.

ನಾವೆಲ್ಲ ಒಂದೇ ಕುಟುಂಬದವರು. ಉಮೇಶ್ ಕತ್ತಿ ನಮ್ಮ ನಾಯಕರು. ಅವರೇ ದೂರವಾಣಿ ಕರೆ ಮಾಡಿ, ನಾವೆಲ್ಲಾ ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ. ಅವರ ಜೊತೆ ಸೇರಿಯೇ ಕೆಲಸ ಮಾಡುತ್ತೇನೆ. ನಾನು ರಾಜಕೀಯಕ್ಕೆ ಹೊಸಬನಲ್ಲ. 30 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಬಿಜೆಪಿ ಸಂಘಟನೆ ಆಧಾರಿತ ಪಕ್ಷವಾಗಿದೆ. ರಾಷ್ಟ್ರೀಯ ನಾಯಕರು ಚರ್ಚೆ ಮಾಡಿ ನಿರ್ಧರಿಸಿದ್ದಾರೆ ಎಂಬು ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ ಈರಣ್ಣ ಕಡಾಡಿ ಅಭಿಪ್ರಾಯಪಟ್ಟಿದ್ಧಾರೆ.

First published: