ಮೂರು ಕಡೆ ಸರ್ಕಾರಿ ಕೆಲಸ, ಮೂರು ಕಡೆ ಸಂಬಳ - ನಾಲ್ಕನೆಯ ನೌಕರಿ ಗಿಟ್ಟಿಸಿದಾಗ ಸಿಕ್ಕಿಬಿದ್ದ ಭೂಪ

ಈಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗೋದೇ ಕಷ್ಟ. ಅಂಥದ್ದರಲ್ಲಿ ಇಲ್ಲೊಬ್ಬ ಏಕ ಕಾಲಕ್ಕೆ ಮೂರು ಕಡೆ ಸರ್ಕಾರಿ ನೌಕರಿ ಮಾಡಿ, ಮೂರು ಕಡೆ ಸಂಬಳಾನೂ ತಗೊಂಡಿದ್ದಾನೆ. ನಾಲ್ಕನೆಯ ನೌಕರಿ ಅರಸಿ ಅರ್ಜಿ ಹೋದಾಗ ಈತನ ಬಂಡವಾಳ ಬಯಲಾಗಿದೆ.

news18
Updated:November 20, 2019, 2:52 PM IST
ಮೂರು ಕಡೆ ಸರ್ಕಾರಿ ಕೆಲಸ, ಮೂರು ಕಡೆ ಸಂಬಳ - ನಾಲ್ಕನೆಯ ನೌಕರಿ ಗಿಟ್ಟಿಸಿದಾಗ ಸಿಕ್ಕಿಬಿದ್ದ ಭೂಪ
ರವಿಕಿರಣ್ ಕಟ್ಟಿಮನಿ
  • News18
  • Last Updated: November 20, 2019, 2:52 PM IST
  • Share this:
ಕಲಬುರ್ಗಿ(ನ. 19): ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ನೌಕರಿ ಅನ್ನೋದು ಗಗನ ಕುಸುಮವಾಗಿಬಿಟ್ಟಿದೆ. ಒಂದು ನೌಕರಿ ಗಿಟ್ಟಿಸಬೇಕೆಂದರೆ ಹತ್ತಾರು ಸರ್ಕಸ್ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇಂತಹ ಸಂದರ್ಭದಲ್ಲಿಯೇ ಯುವಕನೋರ್ವ ಏಕ ಕಾಲಕ್ಕೆ ಮೂರು ಕಡೆ ಸರ್ಕಾರಿ ನೌಕಡಿ ಮಾಡಿದ್ದಾನೆ. ಏಕ ಕಾಲಕ್ಕೆ ಮೂರು ಕಡೆ ಹಾಜರಾತಿ ತೋರಿಸಿ ಮೂರು ಕಡೆ ಸಂಬಳವನ್ನೂ ತೆಗೆದುಕೊಂಡಿದ್ದಾನೆ. ಹೀಗೆ ಮೂರು ಕಡೆ ನೌಕರಿ ಮಾಡಿ ಸರ್ಕಾರಕ್ಕೆ ಪಂಗನಾಮ ಹಾಕಿದ ವ್ಯಕ್ತಿಯನ್ನು ಕಲುಬರ್ಗಿಯ ಸಿ.ಐ.ಬಿ. ಕಾಲೋನಿಯ ರವಿಕಿರಣ್ ಕಟ್ಟಿಮನಿ ಎಂದು ಗುರುತಿಸಲಾಗಿದೆ.

ಕಲಬುರ್ಗಿಯ ಕೃಷಿ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ ಕಾಯಂ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಯಲ್ಲಿ ಅರಣ್ಯ ಇಲಾಖೆಯಲ್ಲಿ ಸಹ ಸಂಯೋಜಕನಾಗಿಯೇ ಕೆಲಸ ಮಾಡಿದ್ದಾನೆ. ಸದ್ಯ ರವಿಕಿರಣ ಕಟ್ಟಿಮನಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆಗೆ ಸೇರಿದ್ದಾನೆ. ಆದರೆ ಈ ಹುದ್ದೆ ಪಡೆಯಲು ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡಿದ, ಅರಣ್ಯ ಇಲಾಖೆಯಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ದಾಖಲೆ ಸಲ್ಲಿಸಿದ್ದಾರೆ. ಇವುಗಳ ಆಧಾರದಲ್ಲಿ ಹೆಚ್ಚುವರಿ ಅಂಕ ಪಡೆದ ನೇಮಕವಾಗಿದ್ದಾರೆ.

ಇದನ್ನೂ ಓದಿ: ಸಿಎಂ ನೇತೃತ್ವದಲ್ಲಿ ಜರುಗಿದ ಮೊದಲ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

ಏಕ ಕಾಲಕ್ಕೆ ಮೂರು ಕಡೆ ಹೇಗೆ ಕೆಲಸ ಮಾಡಲಾಗುತ್ತದೆ ಎಂದು ಪ್ರಶ್ನಿಸಿಕೊಂಡ ಚಿಂಚೋಳಿಯ ಶ್ರೀಮಂತ ಕಟ್ಟಿಮನಿ ಎಂಬುವರು, ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ರವಿಕಿರಣನ ಅಸಲಿಯತ್ತು ಬೆಳಕಿಗೆ ಬಂದಿದೆ. ಒಬ್ಬನೇ ವ್ಯಕ್ತಿ ಮೂರು ಕಡೆ ಕೆಲಸ ಮಾಡಿ, ಇಬ್ಬರನ್ನು ನೌಕರಿಯಿಂದ ವಂಚಿತಗೊಳ್ಳುವಂತೆ ಮಾಡಿದ್ದುದಾಗಿ ಶ್ರೀಮಂತ ಕಟ್ಟಿಮನಿ ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶ್ರೀಮಂತ ಕಟ್ಟಿಮನಿ ಆಗ್ರಹಿಸಿದ್ದಾರೆ.

2015ರಲ್ಲಿ ಕೃಷಿ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ ಕೆಲಸ ಮಾಡಿದ ರವಿಕಿರಣ, ಪ್ರತಿ ದಿನ 10.30 ರಿಂದ ಸಂಜೆ 5 ಗಂಟೆವರೆಗೆ ಕೆಲಸ ಮಾಡಿರೋದಾಗಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ಪೂರ್ಣ ವೇತನ ಪಡೆದಿದ್ದಾರೆ. ಪ್ರಥಮ ದರ್ಜೆ ಕಾಲೇಜಿನಲ್ಲಿ 2014-15 ರಿಂದ 2016-17ರವರೆಗೆ ಮೂರು ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರೋದಾಗಿ 2.88 ಲಕ್ಷ ರೂಪಾಯಿ ವೇತನ ಪಡೆದಿದ್ದಾರೆ. ಇದೇ ಅವಧಿಯಲ್ಲಿ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಅರಣ್ಯ ಸಂಯೋಜಕರಾಗಿಯೂ ಕೆಲಸ ಮಾಡಿ 3.54 ಲಕ್ಷ ರೂಪಾಯಿ ವೇತನ ಪಡೆದಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ಟೀಕೆಗೆ ಇಳಿಯಬೇಡಿ ಎಂದು ಸಹೋದರರಲ್ಲಿ ಮನವಿ ಮಾಡುತ್ತೇನೆ ; ಶಾಸಕ ಬಾಲಚಂದ್ರ ಜಾರಕಿಹೊಳಿ

ಏಕ ಕಾಲಕ್ಕೆ ಮೂರು ಕಡೆ ಕೆಲಸ, ಮೂರು ಕಡೆ ವೇತನ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ. ವಂಚನೆ ಖಾತ್ರಿಯಾದ ಹಿನ್ನೆಲೆಯಲ್ಲಿ ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ ಸೂಗೂರ್ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಕಲಬುರ್ಗಿ ಎಸಿಪಿ ಕಿಶೋರ್ ಬಾಬು ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
Loading...

ದೂರು ದಾಖಲಿಸಿದ ಮಾಹಿತಿ ತಿಳಿಯುತ್ತಿದ್ದಂತೆಯೇ ರವಿಕಿರಣ ಕಟ್ಟಿಮನಿ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ. ಅತಿಯಾಸೆಗೆ ಮೂರು ಕಡೆ ನೌಕರಿ ಮಾಡಿ, ಮೂರು ಕಡೆ ವೇತನ ಪಡೆದ ವ್ಯಕ್ತಿ, ಈಗ ನಾಲ್ಕನೆಯ ಕಡೆ ನೌಕರಿ ಗಿಟ್ಟಿಸಿಕೊಂಡು ಚಾಲಾಕಿತನ ತೋರಿಸುವ ಮುನ್ನವೇ ಸಿಕ್ಕಿ ಬಿದ್ದಿದ್ದಾನೆ. ಆ ಮೂಲಕ ಇರೋ ನೌಕರಿಯನ್ನೂ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

(ವರದಿ: ಶಿವರಾಮ ಆಸುಂಡಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...