ಬೆಂಗಳೂರು (ಜ. 30): ಶಿಕ್ಷಕರೆಂದರೆ ದೇವರಿದ್ದರಂತೆ ಎಂಬ ಮಾತಿದೆ. ಆದರೆ, ಶಿಕ್ಷಕನೇ ಕಾಮುಕನ ಅವತಾರ ತಾಳಿದ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಮೊಳಕಾಲ್ಮೂರು ತಾಲೂಕಿನ ಶಿಕ್ಷಕನನ್ನು ಬಂಧಿಸಲಾಗಿದೆ.
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಮುರುಡಿ ಶಾಲೆ ಶಿಕ್ಷಕ ಕೆ. ನರಸಿಂಹಸ್ವಾಮಿ ಎಂಬಾತ ವಿದ್ಯಾರ್ಥಿನಿಯ ಮೈಯನ್ನು ಮುಟ್ಟಿ, ಅನುಚಿತವಾಗಿ ವರ್ತಿಸಿದ್ದಾನೆ. ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ. ಹಾಗೇ ಸೇವೆಯಿಂದಲೂ ಅಮಾನತು ಮಾಡಲಾಗಿದೆ.
ಇನ್ಸ್ಪೈರ್ಡ್ ಅವಾರ್ಡ್ ಕಾರ್ಯಕ್ರಮದಲ್ಲಿ ಮುರುಡಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕೂಡ ಪಾಲ್ಗೊಂಡಿದ್ದಳು. ಆಕೆಯನ್ನು ಶಾಲೆಯಿಂದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದ ಶಿಕ್ಷಕ ಕೆ. ನರಸಿಂಹಸ್ವಾಮಿ ಅಲ್ಲಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ದೂರಿನ ಆಧಾರದಲ್ಲಿ ರಾಂಪುರ ಠಾಣೆಯಲ್ಲಿ
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ಶಿಕ್ಷಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ!; ಮನೆ ಮುಂದೆ ನಿಲ್ಲಿಸಿದ್ದ 5 ಕಾರುಗಳಿಗೆ ನಡುರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿ
ಇದೇ ರೀತಿಯ ಮತ್ತೊಂದು ಘಟನೆ ಮೈಸೂರಿನಲ್ಲಿ ನಡೆದಿದ್ದು, ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕನನ್ನು ಪೊಲೀಸರಿಂದ ಬಂಧಿಸಿದ್ದರು. ಆರೋಪಿಯಾಗಿರುವ ಕೆ.ಆರ್.ನಗರ ತಾಲೂಕು ಬಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯ
ಮುಖ್ಯ ಶಿಕ್ಷಕ ಎಂ.ಸುರೇಶ್ ಎಂಬಾತನನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ.
ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಸುರೇಶ್ ಅವರನ್ನು ಪೊಲೀಸರು ಬಂಧಿಸಿದ್ದು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ