ರಾಣಿ ಚನ್ನಮ್ಮ ವಿವಿಯಲ್ಲಿ ಇನ್ನಷ್ಟು ರಾಜಕೀಯ ರಾಡಿ: ವಿಸಿ ದೂರು; ಮಾನವ ಬಂಧುತ್ವ ವೇದಿಕೆ ಪ್ರತಿಭಟನೆ

ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ ನಡೆದ ಗಲಾಟೆ ಪ್ರಕರಣ ತಿರುವು ಪಡೆದುಕೊಂಡಿದೆ. ತೀವ್ರ ಒತ್ತಡ ನಂತರ ವಿಸಿ ಶಿವಾನಂದ ಹೊಸಮನಿ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಯಜಿಸಿ ನಿಯಮ ಗಾಳಿಗೆ ತೂರಿ ಸಿಂಡಿಕೇಟ್ ಸದಸ್ಯರೊಬ್ಬರನ್ನು ಎರಡು ಬಾರಿ ನೇಮಕ ಮಾಡಲಾಗಿದ್ದು, ಸದಸ್ಯರನ್ನು ವಜಾಗೊಳಿಸುವಂತೆ ಮಾನವ ಬಂಧುತ್ವ ವೇದಿಕೆ ಆಗ್ರಹಿಸಿದೆ.


Updated:October 5, 2018, 8:43 PM IST
ರಾಣಿ ಚನ್ನಮ್ಮ ವಿವಿಯಲ್ಲಿ ಇನ್ನಷ್ಟು ರಾಜಕೀಯ ರಾಡಿ: ವಿಸಿ ದೂರು; ಮಾನವ ಬಂಧುತ್ವ ವೇದಿಕೆ ಪ್ರತಿಭಟನೆ
ಮಾನವ ಬಂಧುತ್ವ ವೇದಿಕೆಯಿಂದ ಪ್ರತಿಭಟನೆ
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್18 ಕನ್ನಡ

ಬೆಳಗಾವಿ(ಅ. 05): ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇದೀಗ ವಿವಾದ ಕೇಂದ್ರವಾಗಿದೆ. ಇತ್ತೀಚಿಗೆ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರು ವಿವಿಗೆ ನುಗ್ಗಿ ಗಲಾಟೆ ಮಾಡಿದ್ದು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ನಡೆದು ನಾಲ್ಕು ದಿನ ಕಳೆದ ನಂತರ ವಿಸಿ ಶಿವಾನಂದ ಹೊಸಮನಿ ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ವಿವಿಗೆ ನುಗ್ಗಿ ಪಿಠೋಪಕರಣ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಗಲಾಟೆ ಸಂದರ್ಭದಲ್ಲಿ ಕಾಕತಿ ಜಿಪಂ ಸದಸ್ಯ ಸಿದ್ದು ಸುಣಗಾರ ಇದ್ದರೂ ದೂರಿನಲ್ಲಿ ಅವರ ಹೆಸರನ್ನು ವಿಸಿ ನಮೂದಿಸಿಲ್ಲ. ಮೇಲ್ನೋಟಕ್ಕೆ ಇದು ಕಣ್ಣೊರಿಸುವ ತಂತ್ರ ಅನಿಸುತ್ತಿದೆ. ವಿಸಿ ಸೇರಿ ಸಿಂಡಿಕೇಟ್ ಸದಸ್ಯರಿಗೆ ವಿವಿ ಅವ್ಯವಹಾರ ಬಯಲಾಗುವ ಭಯ ಕಾಡುತ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

ಮಾನವ ಬಂಧುತ್ವ ವೇದಿಕೆಯಿಂದ ಪ್ರತಿಭಟನೆ:

ರಾಣಿ ಚನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ಸದಸ್ಯತ್ವಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಓರ್ವ ವ್ಯಕ್ತಿ ಒಂದು ಅವಧಿಗೆ ಮಾತ್ರ ಸಿಂಡಿಕೇಟ್ ಸದಸ್ಯ ಆಗಬಹುದು. ಆದರೆ ರಾಜು ಚಿಕ್ಕನಗೌಡರ ಎರಡು ಅವಧಿಗೆ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಜತೆಗೆ ಈ ಬಾರೀ ರಾಜ್ಯಪಾಲರು ಚಿಕ್ಕನಗೌಡ ಅವರನ್ನು ನೇಮಿಸಿದ್ದು ಸಹ ಅನೇಕ ಅನುಮಾನಕ್ಕೆ ಕಾರಣವಾಗಿದೆ. ಶಿಕ್ಷಣ ತಜ್ಞ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ನೇಮಿಸಬೇಕು. ಆದರೆ ರಾಜ್ಯಪಾಲರು ಬಿಜೆಪಿ ಯುವ ಘಟಕದ ರಾಜ್ಯ ಉಪಾಧ್ಯಕ್ಷರನ್ನು ನೇಮಿಸಿದ್ದಾರೆ ಎಂಬ ಆರೋಪವನ್ನು ಮಾನವ ಬಂಧುತ್ವ ವೇದಿಕೆ ಮುಖಂಡ ರವಿ ನಾಯ್ಕರ್ ಮಾಡಿದ್ದಾರೆ.

ಇದೀಗ ಬಿಜೆಪಿ ಮುಖಂಡ ಹಾಗೂ ವಿವಿಯ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜು ಚಿಕ್ಕನಗೌಡ, ತಾನು ಯಾವುದೇ ತನಿಖೆಗೆ ಸಿದ್ಧ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಕೇಸರೀಕರಣಗೊಳಿಸುವ ಪ್ರಯತ್ನವಾಗುತ್ತಿದೆ. ಇದಕ್ಕೆ ತಾನು ಅವಕಾಶ ಕೊಡುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಈಗಾಗಲೇ ಗುಡುಗಿಯಾಗಿದೆ. ಇಡೀ ದೇಶವೇ ಕೇಸರೀಮಯವಾಗುತ್ತಿದೆ. ಇದರಲ್ಲೇನು ತಪ್ಪು ಎಂದು ಜಿಲ್ಲೆಯ ಬಿಜೆಪಿ ಮುಖಂಡರು ವರಸೆ ತೋರಿದ್ದೂ ಆಗಿದೆ.ಇದೀಗ ವಿವಿಯಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ಬೇರೆ ಸ್ವರೂಪ ಪಡೆದುಕೊಂಡಿದೆ. ವಿವಿಯ ಹಗರಣಗಳು ಬಯಲಾಗುತ್ತಿದ್ದು, ಈ ಬಗ್ಗೆ ರಾಜ್ಯಪಾಲರ ಮುಂದಿನ ನಡೆ ಎನು ಎಂಬುದು ಕುತೂಹಲ ಮೂಡಿಸಿದೆ.
First published:October 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading