ಬೆಂಗಳೂರು (ಸೆ. 23): ವಿಧಾನಸೌಧದಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಸರ್ಕಾರ ಕೊರೋನಾ ಚಿಕಿತ್ಸೆಯಲ್ಲಿ ಯಾವ ರೀತಿಯ ಅವ್ಯವಹಾರ ನಡೆಸುತ್ತಿದೆ, ಯಾವೆಲ್ಲ ರೀತಿ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಂಸದೀಯ ಪದ ಬಳಸಿದ ಘಟನೆ ನಡೆಯಿತು. ಆ ಪದ ಬಳಕೆ ಮಾಡುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು. ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡ ರಮೇಶ್ ಕುಮಾರ್ ಆಡಳಿತ ಪಕ್ಷದ ನಡೆಯನ್ನು ಸಹಿಸಿಕೊಳ್ಳಲಾಗದೆ ಆ ರೀತಿ ಮಾತನಾಡಿದೆ ಎಂದು ಹೇಳಿದರು. ಅದಕ್ಕೆ ನೀವೇನು ಶ್ರೀರಾಮಚಂದ್ರರಾ? ಎಂದು ಬಿಜೆಪಿ ನಾಯಕರು ಛೇಡಿಸಿದ ಘಟನೆಯೂ ನಡೆಯಿತು.
ವಿಧಾನಸಭೆಯಲ್ಲಿ ಮಾತನಾಡುವಾಗ ಮಾಜಿ ಸ್ಪೀಕರ್ ರಮೇಶ್ ಕುಮಾರ್, ದೊಡ್ಡ ಮನುಷ್ಯರೆಲ್ಲಾ ಮಾಡೋದು ಹಲ್ಕಾ ಕೆಲಸ ಎಂದು ಹೇಳಿದರು. ಈ ವೇಳೆ ಎದ್ದುನಿಂತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ನೀವು ಬಾಯಿಗೆ ಬಂದ ಪದ ಬಳಕೆ ಮಾಡಬೇಡಿ. ಓರ್ವ ಹಿರಿಯರಾಗಿ ಈ ರೀತಿ ಮಾತಾಡುತ್ತೀರಲ್ಲ ಎಂದು ಕಿಡಿಕಾರಿದರು. ಸಚಿವ ಸುಧಾಕರ್ಗೆ ಬೆಂಬಲ ಸೂಚಿಸಿದ ಸಚಿವ ಜಗದೀಶ್ ಶೆಟ್ಟರ್, ಏನಾದರೂ ತಪ್ಪು ಇದ್ದರೆ ಪ್ರಶ್ನೆ ಕೇಳಿ. ಅದುಬಿಟ್ಟು ಕೆಟ್ಟ ಪದ ಬಳಕೆ ಮಾಡೋದಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Mysuru Dasara 2020: ಈ ಬಾರಿ ಅರಮನೆಯಲ್ಲೇ ಜಂಬೂಸವಾರಿ; ದಸರಾ ಆನೆಗಳಿಗೆ ನಿರ್ಮಾಣವಾಯ್ತು ಹೊಸ ರಸ್ತೆ
ಇದೇ ವೇಳೆ ಎದ್ದುನಿಂತ ಸಚಿವ ಕೆ.ಎಸ್. ಈಶ್ವರಪ್ಪ, ನಾವೂ ಇದೇ ರೀತಿ ರಮೇಶ್ ಕುಮಾರ್ಗೆ ಹಲ್ಕಾ ಎಂದರೆ ಅವರು ಒಪ್ಪಿಕೊಳ್ಳುತ್ತಾರಾ? ಮಾನ ಮರ್ಯಾದೆ ಇಲ್ಲ ಎಂದರೆ ಅವರು ಒಪ್ಕೊತ್ತಾರಾ? ಇದು ಗೂಂಡಾಗಳಿಗೆ ಬಳಕೆ ಮಾಡುವ ಪದ ಎಂದು ಆರೋಪಿಸಿದರು
ಅದಕ್ಕೆ ಉತ್ತರಿಸಿದ ರಮೇಶ್ ಕುಮಾರ್, ಯಾವುದು ಸಾಂವಿಧಾನಿಕ ಪದ, ಯಾವುದು ಅಸಾಂವಿಧಾನಿಕ ಪದ ಎಂಬ ಪಟ್ಟಿ ಸ್ಪೀಕರ್ ಬಳಿ ಇದೆ. ನನಗೆ ಕ್ಷಮೆ ಕೇಳೋಕೆ ಯಾವ ಪ್ರತಿಷ್ಟೆಯೂ ಇಲ್ಲ ಎಂದರು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ್ ಕುಮಾರ್ ಬಳಕೆ ಮಾಡಿರೋ ಪದ ಸೌಜನ್ಯದ್ದಲ್ಲ. ಅದು ಅಸಂವಿಧಾನಿಕ ಪದ ಅನ್ನೋದರ ಬಗ್ಗೆ ನೋಡುತ್ತೇನೆ ಪಾರ್ಲಿಮೆಂಟರಿ ಪುಸ್ತಕ ತರಿಸಿ ಪರಿಶೀಲಿಸಿದರು. ಬಳಿಕ ಹಲ್ಕಾ ಎಂಬ ಪದ ಅಸಂಸದೀಯ ಪದ ಎಂದು ಸ್ಪೀಕರ್ ಕಾಗೇರಿ ತೀರ್ಪು ಕೊಟ್ಟರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತೀರ್ಪನ್ನು ತಲೆ ಬಾಗಿ ಸ್ವೀಕರಿಸಿ ಕ್ಷಮೆ ಕೋರುತ್ತೇನೆ ಎಂದು ರಮೇಶ್ ಕುಮಾರ್ ಸದನದಲ್ಲಿ ಕ್ಷಮೆ ಯಾಚಿಸಿದರು. ಆದರೆ, ಎಷ್ಟು ಅಂತ ಸಹಿಸಿಕೊಳ್ಳೋದು ಹೇಳಿ? ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ 'ಹೌದೌದು, ನೀವು ಶ್ರೀರಾಮಚಂದ್ರ' ಎಂದು ರಮೇಶ್ ಕುಮಾರ್ ಅವರನ್ನು ಆಡಳಿತ ಪಕ್ಷದ ಸದಸ್ಯರು ಛೇಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ