ಬೆಂಗಳೂರು(ಮಾ. 19): ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕುಟುಂಬ ರಾಜಕಾರಣದ (Family Politics) ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದು ವಿಧಾನಸಭೆಯಲ್ಲಿ ಇವತ್ತು ಬೆಳಗಿನ ಸದನ ಕಲಾಪದ ಪ್ರಮುಖ ಹೈಲೈಟ್ ಆಗಿತ್ತು. ಕುಟುಂಬ ಆಡಳಿತದಿಂದ ದೂರ ಉಳಿಯುವಂತೆ ರಮೇಶ್ ಕುಮಾರ್ (Ramesh Kumar) ಅವರು ಸಿಎಂಗೆ ಸಲಹೆ ನೀಡಿದರು. ಬಜೆಟ್ ಮೇಲಿನ ಚರ್ಚೆಯ ವೇಳೆ ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್, ಅಧಿಕಾರದ ಸುತ್ತ ಮುತ್ತಿಕೊಳ್ಳುವ ಹೊಗಳುಭಟ್ಟ ಜನರ ಬಗ್ಗೆ ಉಲ್ಲೇಖ ಮಾಡಿ ಬ್ಯಾಂಡ್ ಸೆಟ್ (Band Set) ಪದ ಬಳಕೆ ಮೂಲಕ ಕುಟುಕಿದರು.
ಸಿಎಂ ಸ್ಥಾನಕ್ಕೆ ಯಾರೇ ಬಂದರೂ ಅವರ ಸುತ್ತ ಒಂದಷ್ಟು ಜನರು ಸೇರಿಕೊಂಡಿರುತ್ತಾರೆ. ಅವರನ್ನ ಬ್ಯಾಂಡ್ ಸೆಟ್ನವರು ಎಂದು ಕರೆಯುತ್ತಾರೆ. ಈ ಬ್ಯಾಂಡ್ ಸೆಟ್ನವರು ಮುಖ್ಯಮಂತ್ರಿಯನ್ನ ಸುತ್ತುವರೆದು ತಮಗೆ ಬೇಕಾದ ಕೆಲಸ ಸಾಧಿಸಿಕೊಳ್ಳುತ್ತಾರೆ. ಆದರೆ, ನಾಯಕನಾದವನು ತಾನು ಮಾಡಬೇಕಾದ ಕೆಲಸಗಳನ್ನ ಮರೆತುಬಿಡುತ್ತಾನೆ. ಸಿಎಂ ಯಡಿಯೂರಪ್ಪ ಸುತ್ತಲೂ ಬ್ಯಾಂಡ್ ಸೆಟ್ನವರು ಇದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೂ ಇಂಥ ಬ್ಯಾಂಡ್ ಸೆಟ್ನವರು ಇದ್ದರು. ಈ ಬಗ್ಗೆ ನಾನು ಹೇಳಿ ನಿಷ್ಠುರನಾಗಿದ್ದೆ. ಇಂಥವರು ನಾಯಕರಿಗೆ ಕಣ್ಣು ಕಾಣದಂತೆ ಕಿವಿಯೂ ಕೇಳದಂತೆ ಮಾಡುತ್ತಾರೆ. ಹಲವು ನಾಯಕರು ಇಂಥವರಿಗೆ ಬಲಿಯಾಗಿದ್ದಾರೆ ಎಂದು ಅವರು ಗುಡುಗಿದರು.
ಇದನ್ನೂ ಓದಿ: Siddaramaiah: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವೈರಸ್ಗೆ ಲಸಿಕೆ ಎಲ್ಲಿದೆ?; ಸಿದ್ದರಾಮಯ್ಯ ಲೇವಡಿ
ಕುಟುಂಬ ವ್ಯಾಮೋಹಕ್ಕೆ ಸಿಎಂ ಬಲಿಯಾಗಬಾರದು ಎಂದ ಮಾಜಿ ಸ್ಪೀಕರ್:
ಯಡಿಯೂರಪ್ಪನವರೇ ನೀವು ಶಿಖಾರಿಪುರದಿಂದ ಹೋರಾಟ ಮಾಡಿ ಬಂದಿದ್ದೀರಿ. ನಿಮ್ಮ ಸುತ್ತ ಇರುವ ಬ್ಯಾಂಡ್ ಸೆಟ್ ಅನ್ನು ದೂರ ಇಡಿ. ನಿಮ್ಮ ದಿವಂಗತ ಶ್ರೀಮತಿ (ಮೈತ್ರಾ ದೇವಿ) ಜೊತೆ ನಮ್ಮ ಒಡನಾಟ ಇತ್ತು. ಆದರೆ ಇವತ್ತು ನಿಮ್ಮ ಕುಟುಂಬದವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಕುಟುಂಬ ವ್ಯಾಮೋಹ ನಿಮ್ಮನ್ನ ಬಲಿ ಪಡೆಯಬಾರದು. ನೀವು ಸಾರ್ವಜನಿಕ ಆಸ್ತಿಯಾಗಿರುವುದರಿಂದ ಆಡಳಿತದಿಂದ ನಿಮ್ಮ ಕುಟುಂಬವನ್ನು ದೂರ ಇಟ್ಟು ಎಚ್ಚರಿಕೆ ವಹಿಸಿ ಎಂದು ಸಿಎಂಗೆ ರಮೇಶ್ ಕುಮಾರ್ ಸಲಹೆ ನೀಡಿದರು.
ಬಜೆಟ್ ಬಗ್ಗೆ ಸಿದ್ದರಾಮಯ್ಯ ವಿವರವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ತಾಯಿ ತಂದೆ ಅನಕ್ಷರಸ್ಥರಾದರೂ ಸಿದ್ದರಾಮಯ್ಯ ಅವರಿಗೆ ಜನರ ಬಗ್ಗೆ ಕಾಳಜಿ ಇದೆ ಎಂದು ಹೇಳಿದ ಮಾಜಿ ಸ್ಪೀಕರ್, ಈ ಸರ್ಕಾರಕ್ಕೆ ಅಂತಃಕರಣ ಇರಬೇಕು. ಎಲ್ಲದಕ್ಕೂ ಕೊರೋನಾ ನೆಪ ಹೇಳುವುದು ಬೇಡ ಎಂದು ತಿಳಿಹೇಳಿದರು.
ವಿರೋಧ ಪಕ್ಷ ಹೀಗಿರಬೇಕು:
ಕಲಾಪದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿರೋಧ ಪಕ್ಷ ಹೇಗಿರಬೇಕು ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಆಡಳಿತ ಸ್ಥಾನದಲ್ಲಿ ಕುಳಿತುಕೊಳ್ಳಲು ಆಗದವರು ಪ್ರತಿಪಕ್ಷದಲ್ಲಿ ಇದ್ದೇವೆ. ಕೇವಲ ವಿರೋಧಕ್ಕಾಗಿ ವಿರೋಧ ಪಕ್ಷ ಎಂಬಂತಾಗಬಾರದು ಎಂದು ವಿಪಕ್ಷಗಳಿಗೂ ಸಲಹೆ ನೀಡಿದರು. ಮುಂದುವರಿದು ಅವರು ಸಮಾಜವಾದಿ ನಾಯಕ ರಾಮ ಮನೋಹರ್ ಲೋಹಿಯಾ, ಶಾಂತವೇರಿ ಗೋಪಾಲಗೌಡ ಅವರ ನಿದರ್ಶನಗಳನ್ನ ನೀಡಿದರು.
ಇದನ್ನೂ ಓದಿ: ಸಿಂದಗಿ ಉಪಚುನಾವಣೆ: ಅಶೋಕ ಮನಗೂಳಿಗೆ ಕಾಂಗ್ರೆಸ್ ಟಿಕೆಟ್; ಗೆಲುವಿನ ವಿಶ್ವಾಸದಲ್ಲಿ ಮಾಜಿ ಸಚಿವರ ಮಗ
ಇದಕ್ಕೂ ಮುನ್ನ ಇವತ್ತಿನ ಕಲಾಪದ ಆರಂಭದಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಮತ್ತು ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ ಏರುಧ್ವನಿಯಲ್ಲಿ ಚರ್ಚೆ ಮಾಡಿ ಗಮನ ಸೆಳೆದರು. ಉಡುಪಿಯಲ್ಲಿ ಲ್ಯಾಂಡ್ ಕನ್ವರ್ಷನ್ ತಡವಾಗುತ್ತಿದೆ ಎಂದು ರಘುಪತಿ ಭಟ್ ಏರಿದ ಸ್ವರದಲ್ಲಿ ಆಕ್ಷೇಪ ವ್ಯಕ್ತಪಡಿಸಿದಾಗ ಸ್ಪೀಕರ್ ಕಾಗೇರಿ ಅವರು ರೇಗಿ ಸುಮ್ಮನಾಗಿರಿಸಿದರು.
ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅವರು ತಮ್ಮ ಕ್ಷೇತ್ರದಲ್ಲಿ ಗೋಲ್ಡ್ ಮೈನಿಂಗ್ ಮಾಡಲು ಅವಕಾಶವಿದ್ದರೂ ಸರ್ಕಾರ ನಿರ್ಲಕ್ಷಿಸಿದೆ. ಇದರಿಂದ ನೂರಾರು ಕೋಟಿ ಆದಾಯಕ್ಕೆ ಕೊಕ್ ಬಿದ್ದಿದೆ. ಉದ್ಯೋಗ ಕಡಿತವಾಗಿದೆ. ಯಾವ ಕಾರಣಕ್ಕೆ ಈ ಅನ್ಯಾಯ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅವರನ್ನೂ ಸ್ಪೀಕರ್ ಕಾಗೇರಿ ಸಮಾಧಾನಪಡಿಸಿ ಸುಮ್ಮನಾಗಿರಿಸಿದರು.
ವರದಿ ಕೃಪೆ: ಕೃಷ್ಣ ಜಿ.ವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ