ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಬಗ್ಗೆ ಸ್ವತಃ ಕಾಂಗ್ರೆಸ್ ಮುಖಂಡರು ಬೇಸರಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಗ್ಗೆ ರಮೇಶ್ ಕುಮಾರ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದಲ್ಲಿ ಚರ್ಚಿಸದೆ ಹೇಗೆ ನಿರ್ಧಾರ ತೆಗೆದುಕೊಂಡರಿ? ನೀವೊಬ್ಬರೆ ನಿರ್ಧಾರ ಮಾಡೋಕೆ ನಾವ್ಯಾಕೆ ಇರಬೇಕು? ಸಿಎಲ್ಪಿ ನಾಯಕರ ಅನುಮತಿ ಪಡೆದುಕೊಂಡ್ರಾ..? ಎಂದು ನೇರವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನೆ ಮಾಡಿದರು.
ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು, ಇದು ನನ್ನ ನಿರ್ಧಾರವಲ್ಲ,ತನ್ವೀರ್ ಸೇಠ್ ಮಾಡಿದ್ದು. ನಮ್ಮ ಲೋಕಲ್ ಪಾಲಿಟಿಕ್ಸ್ ಗೆ ಯಾವ ಹೈಕಮಾಂಡ್ ಇಲ್ಲ. ಹೀಗಾಗಿ ನೀವೇ ಮುಂದುವರೆಯಿರಿ ಅಂತ ಹೇಳಿದೆ. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟನೆ ನೀಡಿದರು. ಬಳಿಕ ತನ್ವೀರ್ ಸೇಠ್ ಗೆ ನೊಟೀಸ್ ಜಾರಿ ಮಾಡಲು ಹಿರಿಯ ಮುಖಂಡರು ಒತ್ತಾಯಿಸಿದರು.
ರಮೇಶ್ ಕುಮಾರ್ ಮಾತಿಗೆ ಕೃಷ್ಣಬೈರೇಗೌಡ ಸಾಥ್ ನೀಡಿದರು. ಮೈತ್ರಿ ಸರ್ಕಾರದಲ್ಲಿ ನಾವು ಮಾತನಾಡಿ ವಿಲನ್ ಆದೆವು. ಅವರು ಈಗ ಬಿಜೆಪಿ ಜೊತೆಯೂ ಸಹ ಚೆನ್ನಾಗಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಜತೆ ಹೋಗಿದ್ರೆ ಜನರಿಗೆ ಅರ್ಥವಾಗ್ತಿತ್ತು. ಅವರ ಜಾತ್ಯತೀತತೆಯನ್ನು ನಾವು ಪ್ರಶ್ನೆ ಮಾಡಬಹುದಿತ್ತು. ನಿಮ್ಮ ಸ್ವಾರ್ಥಕ್ಕೆ ನಮ್ಮನ್ನು ಬಲಿ ಹಾಕಬೇಡಿ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಈ ವೇಳೆ ಸಂಬಂಧವೇ ಇಲ್ಲದಂತೆ ಕುಳಿತಿದ್ದ ಸಿದ್ದರಾಮಯ್ಯ, ನಿನ್ನೆ ಬೆಳವಣಿಗೆ ನನಗೆ ಬೇಸರ ತರಿಸಿದೆ ಎಂದಷ್ಟೇ ಹೇಳಿ ಸುಮ್ಮನಾದರು. ಇದಾದ ಬಳಿಕ ಡಿಕೆ ಶಿವಕುಮಾರ್ ಅವರು ಅಲ್ಲಿಂದ ಎದ್ದು ಹೊರ ನಡೆದರು.
ಇದನ್ನು ಓದಿ: ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ತಲೆಕೆಳಗು; ಜೆಡಿಎಸ್ಗೆ ಒಲಿದ ಮೇಯರ್ ಪಟ್ಟ
ಭಾರೀ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿತ್ತು. ಹೀಗಾಗಿ ಮೂರು ಪಕ್ಷಗಳೂ ಸಹ ಸ್ವತಂತ್ರವಾಗಿ ಕಣಕ್ಕಿಳಿದಿದ್ದವು. ಆದರೆ ಕೊನೆಯದಾಗಿ ಬಿಜೆಪಿ ಕನಸು ಭಗ್ನವಾಗಿದ್ದು, ಜೆಡಿಎಸ್ ಪಕ್ಷ ಮೇಯರ್ ಪಟ್ಟ ಅಲಂಕರಿಸಿತು. ಬಹುಮತ ಇಲ್ಲದ ಕಾರಣ ಕಾಂಗ್ರೆಸ್ ಹಾಗೂ ಬಿಜೆಪಿಗೆ ಜೆಡಿಎಸ್ ದೋಸ್ತಿಯೇ ಅನಿವಾರ್ಯ ಎನ್ನಲಾಗಿತ್ತು. ಹೀಗಾಗಿ ಜೆಡಿಎಸ್ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಲಿದೆ ಎಂದು ತಿಳಿಯಲಾಗಿತ್ತು. ಆದರೆ ಕೊನೆಯವರೆಗೂ ಕಾಂಗ್ರೆಸ್ ಜೊತೆಗೆ ಮೈತ್ರಿ ಬಗ್ಗೆ ಗುಟ್ಟು ಬಿಟ್ಟು ಕೊಡದ ಜೆಡಿಎಸ್, ಕೊನೆಗೇ ತಾನೇ ಗೆದ್ದು ಬೀಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ