ಹೈಕೋರ್ಟ್ ನೋಟಿಸ್ ಸ್ವೀಕರಿಸದ ರಮೇಶ್ ಜಾರಕಿಹೊಳಿ; ರೋಸ್ಟರ್ ಅನ್ವಯ ವಿಚಾರಣೆಗೆ ಸಂತ್ರಸ್ತೆ ಪರ ವಕೀಲರ ಮನವಿ

ಸೋಮವಾರ ಏಕಾಏಕಿ ಪ್ರಕರಣವನ್ನು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಪೀಠಕ್ಕೆ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಿಸಿದ ಸಂತ್ರಸ್ತೆ ಪರ ವಕೀಲ ಏಣಗಿ ಅವರು “ರೋಸ್ಟರ್‌ ಅನ್ವಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಸುನಿಲ್‌ ದತ್ತ ಯಾದವ್‌ ಅವರ ಪೀಠಕ್ಕೆ ಪ್ರಕರಣ ವರ್ಗಾಯಿಸಬೇಕು” ಎಂದು ಕೋರಿದರು. 

ಮಾಜಿ ಸಚಿವ ರಮೇಶ್​ ಜಾರಕಿಹೊಳಿ.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ.

 • Share this:
  ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಮ್ಮ ಆಪ್ತರ ಮೂಲಕ ದಾಖಲಿಸಿರುವ ಬ್ಲ್ಯಾಕ್‌ ಮೇಲ್‌ ಪ್ರಕರಣದ ವಿಚಾರಣೆಗೆ ತಮ್ಮ ರಿಟ್‌ ಮನವಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿ ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕಳೆದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ ಅನ್ನು ರಮೇಶ್ ಜಾರಕಿಹೊಳಿ ಸ್ವೀಕರಿಸಿಲ್ಲ ಎಂದು ಸಂತ್ರಸ್ತೆ ಪರ ವಕೀಲರು ಸೋಮವಾರ ನ್ಯಾಯಾಲಯದ ಗಮನಕ್ಕೆ ತಂದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆಯನ್ನು ಬುಧವಾರಕ್ಕೆ (ಜೂನ್‌ 23) ಮುಂದೂಡಿತು.

  ಇದಕ್ಕೂ ಮುನ್ನ, ಹೈಕೋರ್ಟ್‌ ತುರ್ತು ನೋಟಿಸ್‌ ಮತ್ತು ಹ್ಯಾಂಡ್‌ ಸಮನ್ಸ್‌ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳದ (ಎಸ್‌ಐಟಿ) ಪರವಾಗಿ ವಕೀಲ ಪ್ರಸನ್ನಕುಮಾರ್‌ ಹಾಜರಾಗಿದ್ದರು. ಜಾರಕಿಹೊಳಿ ನೋಟಿಸ್‌ ಸ್ವೀಕರಿಸುತ್ತಿಲ್ಲ ಎಂಬ ವಿಚಾರವನ್ನು ಸಂತ್ರಸ್ತೆ/ಅರ್ಜಿದಾರೆ ಪರ ವಕೀಲ ಸಂಕೇತ್‌ ಏಣಗಿ ನ್ಯಾಯಾಲಯದ ಗಮನಕ್ಕೆ ತಂದರು.

  ಈ ವೇಳೆ, ಮಧ್ಯಪ್ರವೇಶಿಸಿದ ಎಸ್‌ಐಟಿ ಪರ ವಕೀಲ ಪ್ರಸನ್ನಕುಮಾರ್‌ ಅವರು ಜಾರಕಿಹೊಳಿ ನ್ಯಾಯಾಲಯದ ಮುಂದೆ ಹಾಜರಾಗಲು ಕಾಲಾವಕಾಶ ನೀಡಬೇಕು ಎಂದರು. ಇದಕ್ಕೆ ಆಕ್ಷೇಪಿಸಿದ ಏಣಗಿ ಅವರು “ನೀವು ಎಸ್‌ಐಟಿಯನ್ನು ಪ್ರತಿನಿಧಿಸುತ್ತಿದ್ದೀರಿ. ಜಾರಕಿಹೊಳಿ ಅವರನ್ನಲ್ಲ” ಎಂದರು.

  ಸಂತ್ರಸ್ತೆಯ ರಿಟ್‌ ಮನವಿಯನ್ನು ಪ್ರಥಮ ಬಾರಿಗೆ ಜೂನ್‌ 15ರಂದು ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತ್ತು. ಸೋಮವಾರ ಏಕಾಏಕಿ ಪ್ರಕರಣವನ್ನು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಪೀಠಕ್ಕೆ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಿಸಿದ ಸಂತ್ರಸ್ತೆ ಪರ ವಕೀಲ ಏಣಗಿ ಅವರು “ರೋಸ್ಟರ್‌ ಅನ್ವಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಸುನಿಲ್‌ ದತ್ತ ಯಾದವ್‌ ಅವರ ಪೀಠಕ್ಕೆ ಪ್ರಕರಣ ವರ್ಗಾಯಿಸಬೇಕು” ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರು ಸಂಬಂಧಪಟ್ಟ ಪೀಠದ ಮುಂದೆ ಪ್ರಕರಣವನ್ನು ಪಟ್ಟಿಮಾಡುವಂತೆ ಆದೇಶಿಸಿದ್ದು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

  ಇದನ್ನು ಓದಿ: ವೈಯಕ್ತಿಕ ಬೆಳವಣಿಗೆಗೆ ಪಕ್ಷವನ್ನು ತುಳಿಯಬಾರದು: ಸಿಟಿ ರವಿ ಗೂಡಾರ್ಥದ ಹೇಳಿಕೆ!

  ಈ ಮಧ್ಯೆ, ಸಿಬಿಐ ತನಿಖೆಗೆ ಆದೇಶಿಸಬೇಕು ಮತ್ತು ಎಸ್‌ಐಟಿ ತನಿಖೆಗೆ ಅನುಮತಿಸಬಾರದು ಎಂದು ಮಧ್ಯಂತರ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ಈ ಪ್ರಕರಣದ ವಿಚಾರಣೆಯೂ ಬುಧವಾರಕ್ಕೆ ನಿಗದಿಯಾಗಿದೆ. ಮತ್ತೊಂದು ಕಡೆ, ಎಸ್‌ಐಟಿ ತನಿಖೆಗೆ ಆಕ್ಷೇಪಿಸಿ ಸಂತ್ರಸ್ತ ಯುವತಿ ಸಲ್ಲಿಸಿರುವ ಪ್ರಕರಣದ ದೂರು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ನೇತೃತ್ವದ ಪೀಠದ ಮುಂದಿದ್ದು, ಅದನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರು ಸಿಜೆ ಎ ಎಸ್‌ ಓಕಾ ಅವರಿಗೆ ಕಳೆದ ವಿಚಾರಣೆಯಲ್ಲಿ ಕೋರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವಂತೆ ಸಂತ್ರಸ್ತೆ ಪರ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌ ಅವರಿಗೆ ಪೀಠ ಸೂಚಿಸಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: