ಬೆಂಗಳೂರು (ಮಾ. 3): ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಖಾಸಗಿ ಕ್ಷಣಗಳ ವಿಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಯುವತಿಯೊಬ್ಬಳ ಜೊತೆ ರಾಸಲೀಲೆ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ ಆಕೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ ರಾಸಲೀಲೆಯ ವಿಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದ್ದು, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಈ ವಿಚಾರದಿಂದ ತೀವ್ರವಾಗಿ ತಲೆ ಕೆಡಿಸಿಕೊಂಡಿರುವ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿಯೇ ಮನೆಯಿಂದ ಹೊರಟು ಅಜ್ಞಾತ ಸ್ಥಳದಲ್ಲಿದ್ದಾರೆ. ಇಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಘಟನೆಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.
ನಿನ್ನೆ ರಾತ್ರಿ ಬೆಂಗಳೂರಿನ ತಮ್ಮ ಮನೆಯಿಂದ ಹೊರಟಿದ್ದ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಏರ್ಪೋರ್ಟ್ ಕಡೆ ಹೊರಟಿದ್ದ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗುತ್ತೇನೆ ಎಂದು ಹೇಳಿ ಮಾಧ್ಯಮಗಳ ಕಣ್ಣುತಪ್ಪಿಸಿ ಮಾರ್ಗಮಧ್ಯೆ ಬೇರೆಡೆ ಪರಾರಿಯಾಗಿದ್ದರು. ಅತ್ತ ಏರ್ಪೋರ್ಟ್ಗೂ ತಲುಪದೆ ಇತ್ತ ಮನೆಗೂ ವಾಪಾಸಾಗದೆ ಅಜ್ಞಾತ ಸ್ಥಳದಲ್ಲಿರುವ ಜಾರಕಿಹೊಳಿ ಅವರ ಇಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.
ರಾಸಲೀಲೆ ಪ್ರಕರಣ ಹೊರಬೀಳುತ್ತಿದ್ದಂತೆ ತೀವ್ರವಾಗಿ ತಲೆ ಕೆಡಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಆ ಸಿಡಿ ಪ್ರಕರಣದಿಂದ ಹೊರ ಬರಲು ಕಾನೂನಿನ ಮೊರೆ ಹೋಗಿದ್ದಾರೆ. ವಕೀಲರ ಮೂಲಕ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿದ್ದುಕೊಂಡೇ ಸಿದ್ದತೆ ಮಾಡಿರುವ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನಲ್ಲೇ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Ramesh Jarkiholi: ನೀರಾವರಿ ಸಚಿವರ ರಾಸಲೀಲೆ ಆರೋಪ ಪ್ರಕರಣ: ರಮೇಶ್ ಜಾರಕಿಹೊಳಿ ಹೇಳುವುದೇನು? ಸಚಿವರ ತಲೆದಂಡ ಸಾಧ್ಯತೆ?
ಇಂದು ಸಿಎಂ ಯಡಿಯೂರಪ್ಪ ಭೇಟಿ ಮಾಡಲಿರುವ ರಮೇಶ್ ಜಾರಕಿಹೊಳಿ ಈ ಪ್ರಕರಣದ ಬಗ್ಗೆ ವಿವರಣೆ ನೀಡಲಿದ್ದಾರೆ. ಇದರ ಜೊತೆ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಗೆ ಸಚಿವ ರಮೇಶ್ ಜಾರಕಿಹೊಳಿ ಹಾಜರಾಗುತ್ತಾರಾ? ಇಲ್ಲವಾ? ಎಂಬ ಕುತೂಹಲ ಉಂಟಾಗಿದೆ. ತನ್ನ ಖಾಸಗಿ ಕ್ಷಣಗಳ ಸಿಡಿ ರಿಲೀಸ್ ನಿಂದ ಮುಜುಗರಕ್ಕೆ ಒಳಗಾಗಿರುವ ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷ ಹಾಗೂ ಸರ್ಕಾರಕ್ಕೂ ಮುಜುಗರ ಉಂಟು ಮಾಡಿದ್ದಾರೆ. ಹೀಗಾಗಿ, ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಹೀಗಾಗಿ ಸಂಪುಟ ಸಹೋದ್ಯೋಗಿಗಳು ಹಾಗೂ ಸಿಎಂ ಜೊತೆಗಿನ ಸಭೆಗೆ ರಮೇಶ್ ಜಾರಕಿಹೊಳಿ ಬರುತ್ತಾರಾ ಎಂಬುದೇ ಕುತೂಹಲದ ಸಂಗತಿಯಾಗಿದೆ.
ಮಹಿಳೆಯೊಂದಿಗಿನ ರಾಸಲೀಲೆ ದೃಶ್ಯಗಳು ಸಿಡಿಯಲ್ಲಿ ದಾಖಲಾಗಿದ್ದು, ಸಂತ್ರಸ್ತೆ ಪರ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಸಂತ್ರಸ್ಥೆಗೆ ಭಯದ ವಾತಾವರಣ ಇದೆ. ಹಾಗಾಗಿ ಆಕೆ ಮಾಧ್ಯಮದ ಮುಂದೆ ಬರುತ್ತಿಲ್ಲ. ದೂರು ಕೊಟ್ಟ ಬಳಿಕ ಎಲ್ಲವನ್ನು ಹೇಳುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ