news18-kannada Updated:March 7, 2021, 8:13 AM IST
ಸಚಿವ ರಮೇಶ್ ಜಾರಕಿಹೊಳಿ.
ಬೆಂಗಳೂರು (ಮಾ. 7): ಕೆಲಸದ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಆ ವಿಡಿಯೋವನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆರದಿಕೆ ಹಾಕಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿ, ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಬಿಡುಗಡೆ ಮಾಡಿದ್ದರು. ಆ ಸಿಡಿಯಲ್ಲಿದ್ದ ನಿಗೂಢ ಯುವತಿ ಬೆಂಗಳೂರಿನ ಪಿಜಿಯಲ್ಲಿ ವಾಸವಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆ ಯುವತಿಯನ್ನು ಪತ್ತೆಹಚ್ಚಲು ನಾಲ್ಕೈದು ದಿನಗಳಿಂದ ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ಆಕೆಯ ವಿಳಾಸವನ್ನು ಪತ್ತೆಹಚ್ಚಿದ್ದಾರೆ.
ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್ ವಿಡಿಯೋದಲ್ಲಿದ್ದ ಯುವತಿ ಇವಳೇ ಎಂದು ಕಳೆದ 2 ದಿನಗಳಿಂದ ಸುಂದರವಾದ ಯುವತಿಯೊಬ್ಬಳ ಫೋಟೋ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಆ ಯುವತಿಯೇ ವಿಡಿಯೋದಲ್ಲಿದ್ದಾಕೆಯಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪೊಲೀಸರ ತಂಡ ಆಕೆಯ ವಿಳಾಸವನ್ನು ಪತ್ತೆಹಚ್ಚಿದೆ.
ವಿಡಿಯೋದಲ್ಲಿದ್ದ ಯುವತಿಯ ಮನೆ ವಿಳಾಸ ಪತ್ತೆ ಮಾಡಿದ ಪೊಲೀಸರು ಆಕೆ ಉತ್ತರ ಕರ್ನಾಟಕದವಳು ಎಂದು ಪತ್ತೆಹಚ್ಚಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಜೊತೆಗಿನ ಆಡಿಯೋ ಸಂಭಾಷಣೆಯಲ್ಲೂ ಆ ಯುವತಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿದ್ದಳು. ಆದರೆ, ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ ಎಂದು ದೂರುದಾರ ಹೇಳಿದ್ದರು. ಹೀಗಾಗಿ, ಬೆಂಗಳೂರಿನ ಪಿಜಿಗಳಲ್ಲಿ ಆಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೆ ಉತ್ತರ ಕರ್ನಾಟಕದಲ್ಲಿ ಆಕೆಯ ಮನೆ ವಿಳಾಸವನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಬೆಳಗಾವಿ, ಕನಕಪುರದವರ ಕೈವಾಡ; ಸಚಿವ ಸಿ.ಪಿ ಯೋಗೇಶ್ವರ್ ಆರೋಪ
ಯುವತಿ ಜಾರಕಿಹೊಳಿ ಅವರೊಂದಿಗೆ ಆಡಿಯೋದಲ್ಲಿ ಮಾತನಾಡಿರುವ ಹಾಗೆ ಯುವತಿ ಬೆಂಗಳೂರಿನ ಪಿಜಿಯಲ್ಲಿ ಇರಲಿಲ್ಲ. ಆರ್ಟಿ ನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಯುವತಿ ಸಿಡಿ ಬಿಡುಗಡೆ ಆಗುವ ದಿನದಿಂದ ಕಾಣೆಯಾಗಿದ್ದಳು. ಇದುವರೆಗೂ ಯುವತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳುತ್ತಿರುವ ಪೊಲೀಸರು ಆಕೆಯ ಖಾಯಂ ಮನೆಯ ವಿಳಾಸ ಪಡೆದು ಹೋಗಿ ವಿಚಾರಣೆ ಮಾಡಿದ್ದಾರೆ. ಅತ್ತ ಸ್ವಂತ ಊರಿನಲ್ಲಿಯೂ ಇಲ್ಲ, ಇತ್ತ ಬೆಂಗಳೂರಿನಲ್ಲಿ ಇಲ್ಲ ಎಂದು ಯುವತಿ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಫೆ. 28ರಂದು ಯುವತಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಅಂದಿನಿಂದ ಇದುವರೆಗೂ ಯುವತಿಯ ಮೊಬೈಲ್ ನಂಬರ್ ಸಹ ಆನ್ ಆಗಿಲ್ಲ. ಆಕೆಯ ಮೊಬೈಲ್ ಸಿಡಿಆರ್ ಅನ್ನು ಆಧರಿಸಿ ತನಿಖೆಗೆ ಇಳಿದಿರುವ ಪೊಲೀಸರು ಆಕೆಯ ಸ್ನೇಹಿತರನ್ನು ಗೌಪ್ಯವಾಗಿ ವಿಚಾರಣೆ ನಡೆಸೋ ಸಾಧ್ಯತೆಯಿದೆ. ಕಾಲ್ ಲೀಸ್ಟ್ ಆಧರಿಸಿ ಕೆಲವರನ್ನು ವಿಚಾರಣೆ ನಡೆಸೋ ಸಾಧ್ಯತೆಯಿದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಅವರ ವಿಡಿಯೋದಲ್ಲಿದ್ದ ಯುವತಿಯ ಪತ್ತೆಗಾಗಿ ತೀವ್ರ ಹುಡುಕಾಟ ಮಾಡುತ್ತಿರುವ ಪೊಲೀಸರು ಯಾವುದೇ ಕ್ಷಣದಲ್ಲಾದರೂ ಯುವತಿಯನ್ನು ಪತ್ತೆ ಮಾಡುವ ಸಾಧ್ಯತೆಯಿದೆ. ರಮೇಶ್ ಜಾರಕಿಹೊಳಿ ಅವರ ಯುವತಿಯೊಂದಿಗಿನ ಸೆಕ್ಸ್ ವಿಡಿಯೋ ರಿಲೀಸ್ ಆಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ನೆರೆಯ ತಮಿಳುನಾಡು, ಕೇರಳ ರಾಜ್ಯಗಳ ಚುನಾವಣೆ ಮೇಲೆ ಈ ಸಿಡಿ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿಗೆ ರಾಜೀನಾಮೆ ನೀಡಲು ಸೂಚಿಸಿತ್ತು. ಅದರಂತೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Published by:
Sushma Chakre
First published:
March 7, 2021, 8:13 AM IST