ಬೆಂಗಳೂರು (ಮಾ. 27): ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಯುವತಿ ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಿದ್ದರು. ಇದಾದ ಬಳಿಕ ಆ ಯುವತಿ ತನ್ನ ಮನೆಯವರೊಂದಿಗೆ ಮಾತನಾಡಿರುವ ಆಡಿಯೋವೊಂದು ಲೀಕ್ ಆಗಿತ್ತು. ದೂರು ನೀಡಿದ್ದ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ, ಆ ಯುವತಿ ವಿಚಾರಣೆಗೆ ಹಾಜರಾಗಿಲ್ಲ. ಇಂದು ಆಕೆಯ ಪೋಷಕರು ಬೆಂಗಳೂರಿನ ಆಡುಗೋಡಿ ಟೆಕ್ನಿಕಲ್ ಸೆಲ್ಗೆ ಬಂದು ವಿಚಾರಣೆಗೆ ಹಾಜರಾಗಿದ್ದಾರೆ.
ನನ್ನ ಪೋಷಕರನ್ನು ಬೆಂಗಳೂರಿಗೆ ಕರೆಸಿ, ಭದ್ರತೆ ನೀಡಬೇಕು. ಅವರು ಎಲ್ಲಿದ್ದಾರೆಂಬುದು ನನಗೆ ತಿಳಿಯುತ್ತಿಲ್ಲ. ಅವರ ಮತ್ತು ನನ್ನ ಜೀವಕ್ಕೆ ಅಪಾಯವಿದೆ. ನನ್ನ ತಂದೆ-ತಾಯಿಯ ಎದುರಲ್ಲೇ ನಾನು ಎಸ್ಐಟಿ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಇಂದು ಮುಂಜಾನೆ ಬಿಡುಗಡೆಯಾದ ವಿಡಿಯೋ ಸಂದೇಶದಲ್ಲಿ ಸಂತ್ರಸ್ಥ ಯುವತಿ ಹೇಳಿದ್ದಳು. ಅದರಂತೆ ಆ ಯುವತಿಯ ಪೋಷಕರು ಇಂದು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಸಿಡಿ ಯುವತಿಯ ಪೋಷಕರು ಟೆಕ್ನಿಕಲ್‌ಸೆಲ್‌ಗೆ ಹಾಜರಾದ ಹಿನ್ನೆಲೆಯಲ್ಲಿ ಆಡುಗೋಡಿಯ ಟೆಕ್ನಿಕಲ್ ಸೆಲ್ ಬಳಿ2 ಹಂತಗಳಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಅಪರಿಚಿತರನ್ನು ಟೆಕ್ನಿಕಲ್ ಸೆಲ್ ಒಳಗಡೆ ಬಿಡದಂತೆ ತಾಕೀತು ಮಾಡಲಾಗಿದೆ. ಯಾರೇ ಬಂದರು ಐಡಿ ಕಾರ್ಡ್ ಚೆಕ್ ಮಾಡಲಾಗುತ್ತಿದೆ. ತನ್ನ ಪೋಷಕರಿಗೆ ಜೀವಭಯವಿದೆ ಎಂದು ಸಂತ್ರಸ್ತ ಯುವತಿ ಹೇಳಿದ್ದರಿಂದ ಅವರಿಗೆ ಭದ್ರತೆ ನೀಡುತ್ತಿದ್ದೇವೆ ಎಂದು ಎಸ್ಐಟಿ ತಿಳಿಸಿದೆ.
ಇದನ್ನೂ ಓದಿ: Ramesh Jarkiholi: ರಮೇಶ್ ಜಾರಕಿಹೊಳಿಯಿಂದ ಇಂದು ಸಂಜೆ ಮಹತ್ವದ ಮಾಹಿತಿ ಸ್ಫೋಟ; ಇಂದಿನಿಂದ ನನ್ನ ಆಟ ಶುರು ಎಂದ ಸಾಹುಕಾರ್!
ಯುವತಿಯ ಪೋಷಕರನ್ನು ಎಸ್ಐಟಿ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಖುದ್ದು ಎಸ್ ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರಿಂದಲೇ ಯುವತಿಯ ಪೋಷಕರು ಮತ್ತು ತಮ್ಮಂದಿರ ವಿಚಾರಣೆ ನಡೆಸಲಾಗುತ್ತಿದೆ. ನಿಮ್ಮ ಮಗಳನ್ನ ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ? ಭೇಟಿಯಾದಾಗ ಯಾವ ವಿಚಾರ ಪ್ರಸ್ತಾಪ ಮಾಡಿದರು? ವಿಡಿಯೋ ರಿಲೀಸ್ ಆದ ಬಳಿಕ ಎಷ್ಟು ಬಾರಿ ಸಂಪರ್ಕ ಮಾಡಿದ್ದಾರೆ? ಈಗ ನಿಮ್ಮ ಮಗಳು ಎಲ್ಲಿದ್ದಾಳೆ? ಫೋನ್ ಮಾಡಿದಾಗ ಯಾರ ಬಳಿ ಇರುವುದಾಗಿ ಹೇಳಿದ್ದರು? ಆಕೆಗೆ ಯಾರಾದ್ರು ಬಲವಂತವಾಗಿ ಹೆದರಿಸಿದ್ದಾರಾ? ಈ ಕುರಿತು ತಮ್ಮ ಬಳಿ ಮಾತಾಡಿದ್ದಾರಾ? ವಿಡಿಯೋ ಕುರಿತು ಯಾವೆಲ್ಲ ಮಾಹಿತಿಯನ್ನ ನಿಮ್ಮ ಬಳಿ ಹಂಚಿಕೊಂಡಿದ್ದಾರೆ? ನಿಮ್ಮ ಕುಟುಂಬಕ್ಕೆ ಬೆದರಿಕೆ ಇದೆಯಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಎಸ್ಐಟಿ ಅಧಿಕಾರಿಗಳು ಯುವತಿಯ ಪೋಷಕರಿಗೆ ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ