ಬೆಂಗಳೂರು(ಮಾ.30): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಇಂದು ಸಂತ್ರಸ್ತ ಯುವತಿ ಬೆಂಗಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಖುದ್ದು ಹಾಜರಾಗಿದ್ದರು. ಅಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿಕೊಂಡ ಬಳಿಕ, ಆಡುಗೋಡಿ ಟೆಕ್ನಿಕಲ್ ಸೆಲ್ಗೆ ಯುವತಿಯನ್ನು ಕರೆದೊಯ್ಯಲಾಗಿದೆ. ಅಲ್ಲಿ ಯುವತಿಯ ವಿಚಾರಣೆ ನಡೆಸಲಾಗುತ್ತದೆ. ತನಿಖಾಧಿಕಾರಿ ಎಸಿಪಿ ಕವಿತಾ ನೇತೃತ್ವದಲ್ಲಿ ಯುವತಿಯ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ಎಸಿಪಿ ಕವಿತಾ ಯುವತಿಯ ಹೇಳಿಕೆ ಪಡೆಯಲಿದ್ದಾರೆ. ಹೇಳಿಕೆ ಪಡೆದ ಬಳಿಕ ಯುವತಿಯ ವೈದ್ಯಕೀಯ ಪರೀಕ್ಷೆ ಹಾಗೂ ಸ್ಥಳ ಮಹಜರು ಮಾಡಲಾಗುತ್ತದೆ.
ಇನ್ನು, ಸಂತ್ರಸ್ತೆ ಪರ ವಕೀಲ ಜಗದೀಶ್ ಆಡುಗೋಡಿ ಟಿಕ್ನಿಕಲ್ ಸೆಂಟರ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಯುವತಿ ಸ್ವಯಂ ಹಾಜರಾಗಿ ಹೇಳಿಕೆ ಕೊಟ್ಟಿದ್ದಾರೆ. ಸಿಆರ್ಪಿಸಿ ಸೆಕ್ಷನ್ 164 ಅಡಿ ನ್ಯಾಯಾಧೀಶರ ಮುಂದೆ ಯುವತಿಯ ಹೇಳಿಕೆ ದಾಖಲು ಮಾಡಲಾಗಿದೆ. ಆದರೆ ಆರೋಪಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಬೇಕು. ಬಂಧಿಸುವ ಮೂಲಕ ಪೊಲೀಸರು ನಿಷ್ಠೆ ಮೆರೆಯಬೇಕು ಎಂದು ಹೇಳಿದ್ದಾರೆ.
ಪೊಲೀಸರು ಸಿಆರ್ಪಿಸಿ ಸೆಕ್ಷನ್ 161 ಅಡಿ ಹೇಳಿಕೆ ಪಡೆಯುತ್ತಾರೆ. ನಾಳೆ ಸ್ಥಳ ಮಹಜರು, ಆರೋಗ್ಯ ತಪಾಸಣಾ ನಡೆಯಲಿದೆ. ಪೊಲೀಸರು ಯುವತಿಗೆ ರಕ್ಷಣೆ ನೀಡಲಿದ್ದಾರೆ. ಯುವತಿ ಇಷ್ಟು ದಿನ ಕಿಡ್ನಾಪ್ ಆಗಿದ್ದಾಳೆ ಎನ್ನುತ್ತಿದ್ದರು. ಆದರೀಗ ಯುವತಿಯೇ ಬಂದು ಖುದ್ದು ಹಾಜರಾಗಿದ್ದಾಳೆ ಎಂದರು.
ಯುವತಿಯನ್ನು ಎಸ್ಐಟಿ ವಶಕ್ಕೆ ಕೊಟ್ಟಿಲ್ಲ. ವಶಕ್ಕೆ ಪಡೆಯುವ ಅವಶ್ಯಕತೆಯೂ ಇಲ್ಲ. ಯುವತಿ ಆರೋಪಿಯಲ್ಲ, ಕೇವಲ ದೂರುದಾರ್ತಿ. ಎಸ್ಐಟಿ ನೋಟಿಸ್ ನೀಡಿದ್ದ ಹಿನ್ನೆಲೆ, ತನಿಖಾಧಿಕಾರಿ ಕವಿತಾ ವಿಚಾರಣೆ ನಡೆಸಲಿದ್ದಾರೆ. ಪೊಲೀಸರು ಯುವತಿಯ ಹೇಳಿಕೆ ಪಡೆದು ಕಳಿಸುತ್ತಾರೆ ಎಂದು ಹೇಳಿದರು.
ಕೊಡಗಿನಲ್ಲಿ ಕಾವೇರಿ ನದಿಯನ್ನು ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ ಖಾಸಗಿ ವ್ಯಕ್ತಿ
ಇನ್ನು, ಟೆಕ್ನಿಕಲ್ ಸೆಂಟರ್ ತಲುಪಿದ್ದೇ ತಡ ಯುವತಿ ಸ್ವಲ್ಪ ಸಮಯ ವಿಶ್ರಾಂತಿ ಕೇಳಿದ್ದಾಳೆ ಎನ್ನಲಾಗಿದೆ. ಯುವತಿ ಕೇಳಿದಂತೆ ಅಧಿಕಾರಿಗಳು ಕೆಲ ಕಾಲ ವಿಶ್ರಾಂತಿ ಕೊಟ್ಟಿದ್ದಾರೆ. ಇದೇ ವೇಳೆ, ಟೆಕ್ನಿಕಲ್ ಸೆಂಟರ್ನಲ್ಲಿ ಹಿರಿಯ ಅಧಿಕಾರಿಗಳು ಸಭೆಯನ್ನೂ ಕೂಡ ನಡೆಸಿದ್ದಾರೆ. ವಿಚಾರಣೆ ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ.
ರಮೇಶ್ ಜಾರಕಿಹೊಳಿ ಬಂಧನ ಸಾಧ್ಯತೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ. ಯುವತಿ ಹೇಳಿಕೆ ಪಡೆದ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆ ಬಹಳಷ್ಟಿದೆ. ಎಸ್ಐಟಿ ಅಧಿಕಾರಿಗಳು ಯುವತಿಯಿಂದ ಹೇಳಿಕೆ ಪಡೆದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಕೆಲಸ ಕೊಡಿಸ್ತೀನಿ ಅಂತೇಳಿ ಅತ್ಯಾಚಾರ ಮಾಡಿದ್ದಾರೆ ಅಂತ ಯುವತಿ ಹೇಳಿಕೆ ಕೊಟ್ಟರೆ, ರಮೇಶ್ ಜಾರಕಿಹೊಳಿಯವರ ಬಂಧನ ಖಚಿತ ಎನ್ನಲಾಗುತ್ತಿದೆ. ಇತ್ತ ಈಗಾಗಲೇ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ 164 ಸೆಕ್ಷನ್ ಅಡಿ ಸ್ಟೇಟ್‌ಮೆಂಟ್ ದಾಖಲಿಸಿದ್ದಾರೆ. ಎಸ್ ಐ ಟಿ ಮುಂದೆ ಯುವತಿ ಕೊಡುವ ಹೇಳಿಕೆ ಮೇಲೆ ರಮೇಶ್ ಜಾರಕಿಹೊಳಿ ಭವಿಷ್ಯ ನಿಂತಿದೆ.
ಕಬ್ಬನ್ ಪಾರ್ಕ್ ಎಫ್ಐಆರ್ ಸಂಬಂಧ ಪ್ರಾಥಮಿಕವಾಗಿ ನಾಲ್ಕು ಹಂತಗಳಲ್ಲಿ ತನಿಖೆ ನಡೆಸಲಾಗುತ್ತದೆ. ಮೊದಲಿಗೆ ಯುವತಿ ಬಳಿ ಪೊಲೀಸರು ಹೇಳಿಕೆ ಪಡೆಯಲಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು 161 ಸೆಕ್ಷನ್ ಅಡಿ ಯುವತಿಯ ಹೇಳಿಕೆ ದಾಖಲಿಸಲಿದ್ದಾರೆ. ಬಳಿಕ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಕೃತ್ಯ ನಡೆದ ಸ್ಥಳ ಪತ್ತೆ ಹಚ್ಚಿ ಮಹಜರು ಪ್ರಕ್ರಿಯೆ ನಡೆಸಲಾಗುತ್ತದೆ. ಇದಾದ ನಂತರ ರಮೇಶ್ ಜಾರಕಿಹೊಳಿ ವಿರುದ್ಧದ ಪ್ರಕರಣದ ತನಿಖೆ ಆರಂಭ ಮಾಡಲಾಗುತ್ತದೆ. ಯುವತಿ ಇಂದು ತಾನು ದಾಖಲಿಸಿರುವ ಎಫ್ಐಆರ್ ಸಂಬಂಧ ಪೊಲೀಸರ ಮುಂದೆ ಹೇಳಿಕೆ ನೀಡಲಿದ್ದಾರೆ. ಪೊಲೀಸರ ವಿಚಾರಣೆಯಲ್ಲದೆ, ತನ್ನ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ಬಳಿಯಿರುವ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗೆ ಒಪ್ಪಿಸುವ ಸಾಧ್ಯತೆ ಇದೆ.
ಆಡುಗೋಡಿ ಟೆಕ್ನಿಕಲ್ ಸೆಲ್ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪೊಲೀಸರು ನಾಲ್ಕು ಕೆಎಸ್ಆರ್ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಿದ್ದಾರೆ. ಸುಮಾರು 200ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ