ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ಮಹತ್ವದ ತಿರುವು?; ಇಂದು ನ್ಯಾಯಾಧೀಶರ ಮುಂದೆ ಹಾಜರಾಗ್ತಾರಾ ಸಿಡಿ ಯುವತಿ?

Ramesh Jarkiholi CD Case: ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಐದು ಬಾರಿ ವಿಡಿಯೋ ಮಾಡಿ ಬಿಟ್ಟಿದ್ದ ಯುವತಿ ಎಸ್​ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿ, ನ್ಯಾಯಾಧೀಶರ ಮುಂದೆಯೇ ತನ್ನ ಹೇಳಿಕೆ ದಾಖಲಿಸುವುದಾಗಿ ತಿಳಿಸಿದ್ದರು. ಅಲ್ಲದೆ, ಆಕೆ ಹೈಕೋರ್ಟ್​ ನ್ಯಾಯಮೂರ್ತಿಗೆ ಬರೆದ ಪತ್ರವೊಂದು ವೈರಲ್ ಆಗುತ್ತಿದೆ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ

ರಮೇಶ್ ಜಾರಕಿಹೊಳಿ ಸಿಡಿ ಯುವತಿ

 • Share this:
  ಬೆಂಗಳೂರು (ಮಾ. 29): ಅಜ್ಞಾತ ಸ್ಥಳದಿಂದಲೇ 5 ವಿಡಿಯೋ ಸಂದೇಶ ಕಳುಹಿಸಿರುವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವ ಸಾಧ್ಯತೆಯಿದೆ. ಎಸ್​ಐಟಿಯಿಂದ ನೋಟಿಸ್ ನೀಡಿದರೂ ವಿಚಾರಣೆಗೆ ಬಾರದೆ ತಲೆಮರೆಸಿಕೊಂಡಿರುವ ಯುವತಿ ತನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ತಂದೆ-ತಾಯಿ ಎದುರು ಎಸ್​ಐಟಿಯವರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ, ನಡೆದ ವಿಷಯವನ್ನು ಹೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದ ಯುವತಿ ಮತ್ತೆ ಇದ್ದಕ್ಕಿದ್ದಂತೆ ವರಸೆ ಬದಲಿಸಿದ್ದರು. ನ್ಯಾಯಾಧೀಶರ ಎದುರು ನಾನು ನನ್ನ ಹೇಳಿಕೆ ನೀಡುತ್ತೇನೆ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದರು. ಅದರಂತೆ ಆಕೆ ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.

  ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸೋ 164 ಹೇಳಿಕೆಯನ್ನು ತನಿಖಾಧಿಕಾರಿ ಪರಿಗಣಿಸಲೇಬೇಕು‌. ಈಗಾಗಲೇ ಪೊಲೀಸರ ಕೈಗೆ ಸಿಗದೆ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಐದು ಬಾರಿ ವಿಡಿಯೋ ಮಾಡಿ ಬಿಟ್ಟಿದ್ದ ಯುವತಿ ತನ್ನ 5ನೇ ವಿಡಿಯೋದಲ್ಲಿ ಎಸ್​ಐಟಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹಾಗೂ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ, ನ್ಯಾಯಾಧೀಶರ ಮುಂದೆಯೇ ಹಾಜರಾಗುವುದಾಗಿ ತಿಳಿಸಿದ್ದರು.

  ಇದರ ನಡುವೆ, ಅಶ್ಲೀಲ ಸಿಡಿ ಪ್ರಕರಣದ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವೊಂದು ವೈರಲ್ ಆಗುತ್ತಿದೆ. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್​ಐಟಿ ತನಿಖೆ ಆಗಬೇಕು. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಪೋಷಕರಿಂದ ಬಲವಂತವಾಗಿ ಹೇಳಿಕೆ ಪಡೆಯಲಾಗಿದೆ. ಅವರು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆಂದು ಇ-ಮೇಲ್ ಮೂಲಕ ಹೈಕೋರ್ಟ್​ಗೆ ಯುವತಿ ಪತ್ರ ಬರೆದಿದ್ದಾರೆ.

  ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕೇಸ್ ನಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು ಎಂದು ಇಮೇಲ್ ಮೂಲಕ ಮುಖ್ಯ ನ್ಯಾಯಮೂರ್ತಿಗೆ ಸಿಡಿ ಯುವತಿ ಬರೆದಿದ್ದಾರೆ ಎನ್ನಲಾಗಿದೆ. ಸಿಡಿ ಯುವತಿ ಹೆಸರಲ್ಲಿರುವ ಆ ಪತ್ರ ಅಸಲಿಯೇ ಹೌದಾ? ಎಂಬುದು ಖಾತರಿಯಾಗಿಲ್ಲ. ಅಲ್ಲದೆ, ಆ ಪತ್ರ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಿಗೆ ತಲುಪಿದೆಯಾ? ಎಂಬುದು ಕೂಡ ತಿಳಿದುಬಂದಿಲ್ಲ.
  Published by:Sushma Chakre
  First published: