ಬೆಂಗಳೂರು (ಮಾ. 3): ರಾಸಲೀಲೆಯ ವಿಡಿಯೋ ರಿಲೀಸ್ ಆದ ಬಳಿಕ ಸಚಿವ ರಮೇಶ್ ಜಾರಕಿಹೊಳಿಗೆ ಒತ್ತಡ ಹೆಚ್ಚಾಗಿದ್ದು, ರಾಜೀನಾಮೆ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ, ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಹೇಳಿದ್ದರು. ಆದರೆ, ಕೊನೆಗೂ ಬಿಜೆಪಿ ನಾಯಕರ ಒತ್ತಾಯಕ್ಕೆ ಮಣಿದಿರುವ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಯುವತಿಯೊಬ್ಬಳಿಗೆ ಕೆಲಸ ಮಾಡಿಕೊಡುವುದಾಗಿ ಹೇಳಿ ಆಕೆಯ ಜೊತೆ ರಾಸಲೀಲೆ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆ ವಿಡಿಯೋ ವಾಪಾಸ್ ನೀಡದಿದ್ದರೆ ಕೊಲೆ ಮಾಡುವುದಾಗಿ ಯುವತಿಗೆ ರಮೇಶ್ ಜಾರಕಿಹೊಳಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿ, ಆ ಸಿಡಿ ರಿಲೀಸ್ ಮಾಡಿದ್ದರು. ಆ ಸಿಡಿಯಿಂದಾಗಿ ರಮೇಶ್ ಜಾರಕಿಹೊಳಿ ಅವರ ರಾಜಕೀಯ ಜೀವನಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ನಿನ್ನೆ ರಾತ್ರಿಯಿಂದ ಅಜ್ಞಾತವಾಸದಲ್ಲಿದ್ದ ಅವರು ಇಂದು ರಾಜೀನಾಮೆ ನೀಡಿದ್ದಾರೆ.
ನೆರೆಯ ತಮಿಳುನಾಡು, ಕೇರಳದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಸಂದರ್ಭದಲ್ಲಿ ಬಿಜೆಪಿ ಸಚಿವನ ರಾಸಲೀಲೆಯ ವಿಡಿಯೋ ರಿಲೀಸ್ ಆದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯುವಂತೆ ಹೈಕಮಾಂಡ್ ಸಿಎಂ ಯಡಿಯೂರಪ್ಪನವರಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳದಲ್ಲಿದ್ದು ಹೈಕಮಾಂಡ್ ನಾಯಕರು ಹಾಗೂ ರಾಜ್ಯ ಬಿಜೆಪಿ ನಾಯಕರ ಮನವೊಲಿಕೆಗೆ ಪ್ರಯತ್ನಿಸಿದ ರಮೇಶ್ ಜಾರಕಿಹೊಳಿ ಕೊನೆಗೂ ವಿಫಲರಾಗಿದ್ದಾರೆ. ಪಕ್ಷಕ್ಕೆ ಉಂಟಾದ ಮುಜುಗರಕ್ಕೆ ನೈತಿಕ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ವಿಡಿಯೋ ಹಿಂದೆ ಪ್ರಭಾವಿ ರಾಜಕಾರಣಿಯ ಕೈವಾಡ; ಬಾಲಚಂದ್ರ ಜಾರಕಿಹೊಳಿ ಆರೋಪ
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವುದರಿಂದ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ವಿಪಕ್ಷಗಳು ರಮೇಶ್ ರಾಜೀನಾಮೆಗೆ ಪಟ್ಟು ಹಿಡಿದಿದ್ದವು. ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ಸಿದ್ದತೆ ನಡೆಸಿತ್ತು. ಬಜೆಟ್ ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬೀಳುವ ಸಾಧ್ಯತೆ ಇತ್ತು. ಹೀಗಾಗಿ, ಅನುವಾರ್ಯವಾಗಿ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ