ಕಾಂಗ್ರೆಸ್​ ತೊರೆಯಲು ಸಿದ್ಧರಾದ ಜಾರಕಿಹೊಳಿ; ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಎಸ್​ವೈ ಜೊತೆ ಪ್ಲಾನ್​?

news18
Updated:September 10, 2018, 6:50 PM IST
ಕಾಂಗ್ರೆಸ್​ ತೊರೆಯಲು ಸಿದ್ಧರಾದ ಜಾರಕಿಹೊಳಿ; ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಎಸ್​ವೈ ಜೊತೆ ಪ್ಲಾನ್​?
  • Advertorial
  • Last Updated: September 10, 2018, 6:50 PM IST
  • Share this:
ಚಂದ್ರಕಾಂತ್​ ಸುಗಂಧಿ, ನ್ಯೂಸ್​ 18 ಕನ್ನಡ

ಬೆಳಗಾವಿ (ಸೆ.10): ಲಕ್ಷ್ಮೀ ಹೆಬ್ಬಾಳ್ಕರ್​ನೊಂದಿಗಿನ ಕಿತ್ತಾಟದೊಂದಿಗೆ ಪಕ್ಷದೊಂದಿಗೆ ಮುನಿಸಿಕೊಂಡಿರುವ ಸಚಿವ ಜಾರಕಿಹೊಳಿ ಈಗ ಪಕ್ಷವನ್ನೇ ತೊರೆಯಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಯಡಿಯೂರಪ್ಪ ಅವರೊಂದಿಗೂ ಕೂಡ ಅವರು ಚರ್ಚಿಸಿದ್ದಾರೆ ಎಂದು ಜಾರಕಿಹೊಳಿ ಆಪ್ತ ಮೂಲಗಳು ತಿಳಿಸಿದೆ.

ಪಿಎಲ್​ಡಿ ಬ್ಯಾಂಕ್​ ವಿಷಯವನ್ನು ರಾಜಕೀಯ ಪ್ರತಿಷ್ಟೆಯಾಗಿ ಸ್ವೀಕರಿಸಿದ್ದ ಜಾರಕಿಹೊಳಿ ಸಹೋದರರು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೆಬ್ಬಾಳ್ಕರ್​ ರಾಜ್ಯ ಕಾಂಗ್ರೆಸ್​ ನಾಯಕರಿಗೆ ದೂರಿದ್ದರು. ಅಲ್ಲದೇ ಡಿಕೆ ಶಿವಕುಮಾರ್​ ಈ ವಿಷಯವಾಗಿ ಹೆಬ್ಬಾಳ್ಕರ್​ ಬೆಂಬಲಕ್ಕೆ ನಿಂತಿದ್ದರು.

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಡಿಕೆಶಿ ಹಸ್ತಕ್ಷೇಪ ಸೇರಿದಂತೆ ನಾಮ ನಿರ್ದೇಶಿತ ಸದಸ್ಯರ ನೇಮಕಾತಿಯಲ್ಲಿಯು ಶಿವಕುಮಾರ್​ ಕೈವಾಡ ಇದೆ ಎಂದು ಆರೋಪಿಸಿದ ಜಾರಕಿಹೊಳಿ ಪಕ್ಷವನ್ನು ತೊರೆಯುವ ಬೆದರಿಕೆಯನ್ನು ಹಾಕಿದ್ದರು. ಕಡೆಗೆ ಜಾರಕಿಹೊಳಿಗೆ ಮಣಿದ ಹೈ ಕಮಾಂಡ್​ ಸುಮ್ಮನಾದರೂ ಬ್ಯಾಂಕಿನ ಚುನಾವಣೆಯಲ್ಲಿ ಹೆಬ್ಬಾಳ್ಕರ್​ ಬಣದ ಗೆಲುವು ಅವರಲ್ಲಿ ಮತ್ತಷ್ಟು ಅಸಮಾಧಾನವನ್ನು ಮೂಡಿಸಿತು.

ಈ ಬೆಳವಣಿಗೆ ಹಿನ್ನಲೆ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಸಚಿವ ರಮೇಶ್​ ಜಾರಕಿಹೊಳಿ ಗೋವಾ, ಮಹಾರಾಷ್ಟ್ರ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕೂಡ ಕೇಳಿ ಬಂದಿತ್ತು. ಅಲ್ಲದೇ ಬಿಜೆಪಿ ಕಾರ್ಯಕಾರಣಿಯನ್ನು ಮೊಟಕುಗೊಳಿಸಿದ ಯಡಿಯೂರಪ್ಪ ದಿಢೀರ್​ ವಾಪಸ್ಸಾಗಿದ್ದು ಕೂಡ ಜಾರಕಿಹೊಳಿಯವರನ್ನು ಬಿಜೆಪಿಗೆ ಕರೆತರುವ ಸಲುವಾಗಿಯೇ ಎಂಬ ಊಹಾ ಪೋಹಾಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಕಾಂಗ್ರೆಸ್​ ನಾಯಕರು ರಮೇಶ್​ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.

ಈಗ ತಿಳಿದು ಬಂದ ಮಾಹಿತಿ ಪ್ರಕಾರ ಯಡಿಯೂರಪ್ಪ ಜೊತೆ ರಮೇಶ್​ ನಿರಂತರ ಸಂಪರ್ಕದಲ್ಲಿದ್ದು, ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಅಥವಾ ಜಲಸಂಪನ್ಮೂಲ ಖಾತೆಯನ್ನು ನೀಡುವ ಭರವಸೆ ನೀಡಿದ್ದಾರೆ. ಅಂತಿಮ ಸುತ್ತಿನ ಮಾತುಕತೆ ಬಾಕಿ ಉಳಿದಿದೆ.

ಡಿಕೆ ಶಿವಕುಮಾರ್​ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಜಾರಕಿಹೊಳಿ ಸಮ್ಮಿಶ್ರ ಸರ್ಕಾರಕ್ಕೆ ತಿರುಗೇಟು ನೀಡಲು ಸಜ್ಜಾಗಿದ್ದು, ತಮ್ಮ ಜೊತೆ 8 ಜನ ಶಾಸಕರನ್ನು ಕೂಡ ಬಿಜೆಪಿಗೆ ಕರೆದೊಯ್ಯುವ ಪ್ರಯತ್ನ ನಡೆಸಿದ್ದಾರೆ.ಈ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ನ್ಯೂಸ್​ 18 ಕನ್ನಡಕ್ಕೆ ಮಾಹಿತಿ ನೀಡಿದೆ.
First published:September 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ