ಬೆಂಗಳೂರು (ಮಾ. 13): ಸಿಡಿ ಪ್ರಕರಣದ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಧಿಕೃತವಾಗಿ ಇಂದು ದೂರು ದಾಖಲಿಸಿದ್ದಾರೆ. ಪ್ರಕರಣ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಆರಂಭಿಸಿದೆ. ತನಿಖಾ ತಂಡಕ್ಕೆ ಸಹಕಾರ ನೀಡುವ ಉದ್ದೇಶದಿಂದಾಗಿ ರಮೇಶ್ ಜಾರಕಿಹೊಳಿ ಇಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಬರೆದ ದೂರಿನ ಪ್ರತಿಯನ್ನು ಅವರ ಆಪ್ತ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕ ನಾಗರಾಜ್ ಪೊಲೀಸ್ ಠಾಣೆಗೆ ನೀಡಿದ್ದಾರೆ. ಇದೊಂದು ನಕಲಿ ಸಿಡಿಯಾಗಿದ್ದು, ಈ ಮೂಲಕ ತಮ್ಮ ತೇಜೋವಧೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸುಮಾರ್ ಎರಡೂವರೆ ಪುಟಗಳ ದೂರು ಸಲ್ಲಿಕೆ ಮಾಡಲಾಗಿದೆ.
ದೂರು ಸ್ವೀಕಾರದ ಬಳಿಕ ಮಾಹಿತಿ ನೀಡಿದ ಡಿಸಿಪಿ ಅನುಚೇತನ್, ದೂರಲ್ಲಿ ಯಾರ ಹೆಸರಲ್ಲೂ ಉಲ್ಲೇಖಿಸಿಲ್ಲ. ತೇಜೋವಧೆ ಮಾಡಲು ಯತ್ನಿಸಿದ್ದಾರೆಂದು ದೂರು ಸಲ್ಲಿಸಲಾಗಿದೆ. ಈ ಸಿಡಿ ಮೂಲಕ ಬ್ಲ್ಯಾಕ್ಮೇಲ್ಗೆ ಯತ್ನಿಸಿದ್ದಾರೆ. ಇದು ನಕಲಿ ಸಿಡಿ ಎಂದು ನಮೂದಿಸಿದ್ದು, ಇದರ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೇ ಸಿಡಿಯಲ್ಲಿರುವುದು ನಾನಲ್ಲ ಎಂದು ರಮೇಶ್ ತಿಳಿಸಿದ್ದು, ಕಳೆದ 4 ತಿಂಗಳಿಂದ ಸಿಡಿ ಷಡ್ಯಂತ್ರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಪ್ರತಿಗೆ ಖುದ್ದು ರಮೇಶ್ ಜಾರಕಿಹೊಳಿಯೇ ಸಹಿ ಮಾಡಿರುವ ಹಿನ್ನಲೆ ಸದಾಶಿವನಗರ ಠಾಣೆಯಲ್ಲಿ ಶೀಘ್ರವೇ ಎಫ್ಐಆರ್ ದಾಖಲಿಸಿ, ನಂತರ ಇದೇ ಎಫ್ಐಆರ್ ಎಸ್ಐಟಿಗೆ ವರ್ಗಾವಣೆ ಮಾಡಲಾಗುವ ಕುರಿತು ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಇದುವರೆಗೂ ದಾಖಲಾಗಿಲ್ಲ ಎಫ್ಐಆರ್
ಸಿಡಿ ಪ್ರಕರಣದ ಕುರಿತು ಯಾವುದೇ ದೂರು ದಾಖಲಾಗದ ಹಿನ್ನಲೆ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ಈ ಹಿಂದೆ ರಮೇಶ್ ಜಾರಕಿಹೊಳಿ ಉದ್ಯೋಗದ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನೊಂದ ಯುವತಿ ಪರವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಳಿಕ ದೂರನ್ನು ಹಿಂಪಡೆದಿದ್ದರು. ಈ ಹಿನ್ನಲೆ ತನಿಖೆಗೆ ಸಹಕಾರಿಯಾಗಲು ದೂರು ದಾಖಲಿಸುವಂತೆ ಸೂಚಿಸಲಾಗಿತ್ತು.
ಎಸ್ಐಟಿಯಿಂದ ದಾಳಿ
ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರು ಮುಖರ್ಜಿ ನೇತೃತ್ವದಲ್ಲಿ ಏಳುಜನರ ಅಧಿಕೃತ ತಂಡದ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ತಿಳಿಸಿದ್ದರು. ನಿನ್ನೆಯಿಂದ ವಿಚಾರಣೆ ಆರಂಭಿಸಿರುವ ತಂಡ ಐವರ ವಿಚಾರಣೆ ನಡೆಸಿದೆ. ವಿಡಿಯೋ ಅಪ್ಲೋಡ್ ಮಾಡಿದವರ ಸಂಪೂರ್ಣ ಮಾಹಿತಿಯನ್ನು ಎಸ್ಐಟಿ ಕಲೆಹಾಕಿದೆ. ಸಿ.ಡಿ ಷಡ್ಯಂತ್ರ್ಯದ ಹಿಂದೆ ಇವರು ಭಾಗಿಯಾಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿ.ಡಿ ಹಿಂದಿನ ಸೂತ್ರಧಾರರ ಮನೆ ಮೇಲೆ ಇಂದು ಮುಂಜಾನೆ ಎಸ್ಐಟಿ ದಾಳಿ ನಡೆಸಿದೆ. ಸರ್ಚ್ ವಾರೆಂಟ್ ಪಡೆದು ಎಸ್ಐಟಿ ತಂಡ ದಾಳಿ ನಡೆಸಿದೆ.
ಇದನ್ನು ಓದಿ: ಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆಗೆ ಸೌಮೇಂದು ಮುಖರ್ಜಿ ನೇತೃತ್ವದ ಏಳು ಜನರ ಎಸ್ಐಟಿ ತಂಡ ರಚನೆ
ಸಿಎಂಗೆ ಮಾಹಿತಿ:
ಎಸ್ಐಟಿ ತನಿಖೆ ಕುರಿತು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಯಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ನಿನ್ನೆಯಿಂದ ಎಸ್ಐಟಿ ನಡೆಸಿರುವ ಕಾರ್ಯಚಾರಣೆ, ವಿಚಾರಣೆ ಸೇರಿದಂತೆ ಪ್ರಕರಣದ ಕುರಿತು ವಿವರಗಳನ್ನು ಸಿಎಂ ಗಮನಕ್ಕೆ ತಂದಿದ್ದಾರೆ
ಕಾಮಾಕ್ಯಕ್ಕೆ ರಮೇಶ್ ಜಾರಕಿಹೊಳಿ:
ಸಿಡಿ ಬಿಡುಗಡೆಯಿಂದ ಮಾನಸಿಕ ನೆಮ್ಮದಿ ಹಾಳಾಗಿರುವ ಹಿನ್ನಲೆ ರಮೇಶ್ ಜಾರಕಿಹೊಳಿ ಅಸ್ಸಾಂನ ಗೌಹಾಟಿಯಲ್ಲಿರುವ ಕಾಮಾಕ್ಯ ದೇವರ ಮೊರೆ ಹೋಗಿದ್ದಾರೆ.ಯಾವುದೇ ಸಂಕಷ್ಟ ಎದುರಾದಗೆಲ್ಲಾ ರಮೇಶ್ ಜಾರಕಿಹೊಳಿ ನೀಲಾಚಲಬೆಟ್ಟದಲ್ಲಿರುವ ಕಾಮಾಕ್ಯ ಶಕ್ತಿಪೀಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನಂತರ ಸಚಿವ ಸ್ಥಾನ ಸಿಕ್ಕಾಗಲೂ ಅವರು ದೇವರ ದರ್ಶನ ಪಡೆದಿದ್ದರು . ಇದೀಗ ಅವರು ಸಿಡಿ ಬಿಡುಗಡೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಮತ್ತೆ ದೇವರ ಮೊರೆ ಹೋಗಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ