news18-kannada Updated:December 17, 2020, 4:38 PM IST
ರಾಜು ತಳವಾರ್
ಬೆಳಗಾವಿ(ಡಿ. 17): ಮನೆ ಮುಂದೆ ಬೈಕ್ನಿಂದ ಜೋರಾಗಿ ಶಬ್ದ ಮಾಡಿದ್ದರೂ ಎನ್ನುವ ಕಾರಣಕ್ಕೆ ಮೂರು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸಚಿವ ರಮೇಶ ಜಾರಕಿಹೊಳಿ ಆಪ್ತ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ರಾಜು ತಳವಾರ ಹಾಗೂ ಕುಟುಂಬಸ್ಥರಿಂದ ಈ ಹಲ್ಲೆ ನಡೆದಿದೆ. ಪ್ರಕರಣ ಸಂಬಂಧ 12 ಜನ ಆರೋಪಿಗಳು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ಸಂಬಂಧ ಸಚಿವ ರಮೇಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭಿನ್ನ ಪ್ರತಿಕ್ರಿಯೆ ಸಹ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಗುಂಡಾಗಿರಿ ಪ್ರಕರಣ ನಡೆದಿದೆ. ಮೂರು ಜನರ ಮೇಲೆ ಮಚ್ಚು, ಕುಡಗೋಲಿನಿಂದ ರಾಜು ತಳವಾರ ಮತ್ತು ಗ್ಯಾಂಗ್ ನಿಂದ ದಾಳಿ ಮಾಡಿದೆ. ಘಟನೆಯಲ್ಲಿ ಸಂಜು ಚಿಕ್ಕುಗೋಳ (42), ಆಕಾಶ ಚಿಕ್ಕುಗೋಳ (20), ಅಕ್ಷಯ ಚಿಕ್ಕುಗೋಳ (18) ಗಂಭೀರವಾಗಿ ಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜು ತಳವಾರ ಸಹೋದರ ಅಣ್ಣಪ್ಪಾ ಬಸವಣ್ಣೆಪ್ಪ ತಳವಾರ ಎಂಬಾತ ಕೈಯಲ್ಲಿ ಕುಡಗೋಲು ಹಿಡಿದಿರುವ ವಿಡಿಯೋ ಮತ್ತು ಫೋಟೋ ಕೂಡ ವೈರಲ್ ಆಗಿದೆ.
ಘಟನೆ ಸಂಬಂಧ ಅಂಕಲಗಿ ಪೊಲೀಸ್ ಠಾಣೆಯಲ್ಲಿ ರಾಜು ತಳವಾರ ಸೇರಿದಂತೆ 26 ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ 12 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ರಾಜು ತಳವಾರ ಪರಾರಿಯಾಗಿದ್ದಾನೆ. ಇನ್ನೂ ಪ್ರಕರಣ ಸಂಬಂಧ ಪೊಲೀಸರ ತನಿಖೆ ವೇಳೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಿಕ್ಕಿದೆ ಎಂದು ಹೇಳಲಾಗಿದೆ. ಹಣ ಮೂಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಇದನ್ನು ಓದಿ: ನಾಸಾ ಕಣ್ಣಲ್ಲಿ ಭೂಮಿಯ ವಿಸ್ಮಯಗಳು ಹೇಗೆಲ್ಲಾ ಗೋಚರಿಸಿದೆ ಗೊತ್ತಾ; ಇಲ್ಲಿದೆ ಅದ್ಭುತ ಚಿತ್ರಗಳು
ಈ ಘಟನೆ ಬಗ್ಗೆ ನ್ಯೂಸ್18ಗೆ ಪ್ರತಿಕ್ರಿಯೆ ನೀಡಿದ ಸಚಿವ ರಮೇಶ ಜಾರಕಿಹೊಳಿ, ಗಲಾಟೆ ಸಂಬಂಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ರಾಜು ತಳವಾರ ಅಷ್ಟೇ ಅಲ್ಲ ಅಂಕಲಗಿ ಗ್ರಾಮದಲ್ಲಿ ಅನೇಕರು ಆಪ್ತರಿದ್ದಾರೆ. ಇದು ಕೌಟುಂಬಿಕ ವಿಚಾರವಾಗಿ ನಡೆದಿರುವ ಗಲಾಟೆ. ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆಪ್ತ ಎಂಬ ಕಾರಣಕ್ಕೆ ಬೆಂಬಲಿಸಲ್ಲ. ಇಬ್ಬರೂ ನಮ್ಮ ಸಂಬಂಧಿಗಳೇ, ನಾಳೆ ಕರೆದು ಈ ಕುರಿತು ಮಾತನಾಡುತ್ತೇನೆ ಎಂದರು
ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ರಾಜು ತಳವಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 6 ತಿಂಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಅಂಕಲಗಿ ಭಾಗದಲ್ಲಿ ರಾಜು ತಳವಾರ ನಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂಧಾನದ ಅವಶ್ಯಕತೆ ಇಲ್ಲ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನು ಕ್ರಮ ಕೈಗೊಳ್ಳದೇ ಇದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Published by:
Seema R
First published:
December 17, 2020, 4:06 PM IST