ಸಚಿವ ಸ್ಥಾನಕ್ಕಾಗಿ ಟೆಂಪಲ್​ ರನ್​ ನಡೆಸಿದ ಜಾರಕಿಹೊಳಿ ಟೀಂ: ಹರಕೆ ತೀರಿಸಲು ದೇವಾಲಯಕ್ಕೆ ಭೇಟಿ ಎಂದ ಸಾಹುಕಾರ್​​

ಡಿಸಿಎಂ ಹುದ್ದೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ಯಾವುದೇ ಖಾತೆ ಕೊಟ್ಟರು ನನಗೆ ಅಭ್ಯಂತರ ಇಲ್ಲ. ಯಾವುದೇ ನಿರ್ಧಿಷ್ಟ ಖಾತೆಯನ್ನು ಕೇಳಿಲ್ಲ-ಜಾರಕಿಹೊಳಿ

ನಂಜನಗೂಡು ದೇವಾಲಯದಲ್ಲಿ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ, ಶ್ರೀಮಂತ ಪಾಟೀಲ್​

ನಂಜನಗೂಡು ದೇವಾಲಯದಲ್ಲಿ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ, ಶ್ರೀಮಂತ ಪಾಟೀಲ್​

  • Share this:
ಮೈಸೂರು (ಜ.28): ಸಂಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತೆ ಪ್ರಬಲ ಆಕಾಂಕ್ಷಿಗಳಾಗಿರುವ  ರಮೇಶ್​ ಜಾರಕಿಹೊಳಿ ಮತ್ತವರ ಆಪ್ತರಾಗಿರುವ ಮಹೇಶ್​ ಕುಮಟಹಳ್ಳಿ, ಶ್ರೀಮಂತ ಪಾಟೀಲ ಮತ್ತು ಆರ್​ ಶಂಕರ್​ ಟೆಂಪಲ್​ ರನ್​ ನಡೆಸಿದ್ದಾರೆ. 

ಇಲ್ಲಿನ ಪ್ರಸಿದ್ಧ ನಂಜನಗೂಡಿನ ನಂಜುಡೇಶ್ವರನಿಗೆ ವಿಶೇಷ ಪೂಜೆ ಮಾಡಿಸಿ,  ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಮೇಶ್​ ಜಾರಕಿಹೊಳಿ, ಅನರ್ಹರಾಗಿದ್ದ ಸಂದರ್ಭದಲ್ಲಿ ಕೋರ್ಟ್​ ತೀರ್ಪು ಏನಾಗಲಿದೆ ಎಂಬ ಆತಂಕ ಇತ್ತು. ಅಲ್ಲದೇ ಏನೇ ತೀರ್ಪು ಬಂದರೂ ಪೂಜೆ ಮಾಡಿಸಲು ಬರುತ್ತೇವೆ ಎಂದು ಹರಸಿಕೊಂಡಿದ್ದೇವು. ಅದೇ ಕಾರಣಕ್ಕೆ ಬಂದಿದ್ದೇವೆ ಎಂದರು.

ಇದೇ ವೇಳೆ ಸಚಿವ ಸ್ಥಾನ ಕುರಿತು ಮಾತನಾಡಿದ ಅವರು, ಗೆದ್ದ 11‌ ಜನಕ್ಕೂ ಮಂತ್ರಿಸ್ಥಾನ ಸಿಗೋ ವಿಶ್ವಾಸವಿದೆ. ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಲಿ. ನಮಗೇನು ಅವಸರವಿಲ್ಲ. ನಾವು ಕೇವಲ 17 ಅಲ್ಲ ಬಿಜೆಪಿಯ 117 ಶಾಸಕರು ಒಟ್ಟಾಗಿ ಇದ್ದೀವೆ ಎಂದರು.

ಡಿಸಿಎಂ ಹುದ್ದೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ಯಾವುದೇ ಖಾತೆ ಕೊಟ್ಟರು ನನಗೆ ಅಭ್ಯಂತರ ಇಲ್ಲ. ಯಾವುದೇ ನಿರ್ಧಿಷ್ಟ ಖಾತೆಯನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವನಾಥ್​ಗೆ ಸಚಿವ ಸ್ಥಾನ ನೀಡಲಿ

ಸೋತವರಿಗೆ ಮಂತ್ರಿಗಿರಿ ಇಲ್ಲ ಎಂಬ ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಅವರು, ಎಚ್​ ವಿಶ್ವನಾಥ್​ಗೆ ಸಚಿವ ಸ್ಥಾನ ನೀಡುವಂತೆ ಎಲ್ಲಾ ಸಂದರ್ಭದಲ್ಲಿಯೂ ಆಗ್ರಹಿಸುತ್ತೇವೆ. ಈ ಬಗ್ಗೆ ಸಿಎಂ ಜೊತೆಯಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತೇನೆ. ವಿಶ್ವನಾಥ್ ನಮ್ಮ ಜೊತೆ ಬಂದಿದ್ದಕ್ಕೆ ನಮ್ಮ ತಂಡದ ತೂಕ ಹೆಚ್ಚಾಯಿತು. ಅವರು ನಮಗೆ ಸಲಹೆ ಸೂಚನೆ ಕೊಟ್ಟರು ಎಂದರು.

ಇದನ್ನು ಓದಿ: ಆರ್​.ಅಶೋಕ್​ಗೂ ಮುಖ್ಯಮಂತ್ರಿಯಾಗುವ ಯೋಗವಿದೆ; ಭವಿಷ್ಯ ನುಡಿದ ನಿಡುಮಾಮಿಡಿ ಶ್ರೀ

ಇನ್ನು ವಿಶ್ವನಾಥ್​​ಗೆ ಚುನಾವಣೆಗೆ ನಿಲ್ಲಬೇಡಿ ಎಂದು ಸಿಎಂ ಜೊತೆ ನಾನು ಕೂಡ ತಿಳಿಸಿದ್ದೆ. ಆದರೂ ವಿಶ್ವನಾಥ್ ಅವರು ಚುನಾವಣೆ ನಿಂತು ಸೋತರು. ಸದ್ಯ ಈಗ ಅವರ ಹಿರಿತನಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷ ಸೂಚಿಸಿದಂತೆ ನಡೆದುಕೊಂಡಿದ್ದೇನೆ; ಶಂಕರ್​

ಇದೇ ವೇಳೆ ಮಾತನಾಡಿದ ಆರ್​ ಶಂಕರ್​ ಸೋತವರಿಗೆ ಸಚಿವ ಸ್ಥಾನ ಇಲ್ಲ ಎನ್ನುವುದು ನನಗೆ ಅನ್ವಯವಾಗುವುದಿಲ್ಲ. ಪಕ್ಷಕ್ಕೆ ಬಂದಾಗ ನನಗೆ ಸಚಿವನನ್ನಾಗಿ ಮಾಡುತ್ತೇನೆ ಎಂದಿದ್ದರು. ಚುನಾವಣೆ ನಿಲ್ಲಬೇಡಿ ಎನ್ನುವ ನಾಯಕರ ಸಲಹೆಯಂತೆ ನಡೆದುಕೊಂಡಿದ್ದೇನೆ. ಈಗಲೂ ಅವರ ಮಾತು ಕೇಳುತ್ತೇ‌ನೆ.  ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡುತ್ತೇನೆ ಎಂದರು.

ಬಾಗಿಲು ತೆಗೆಸಿ ದರ್ಶನ

ರಥಬೀದಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆ ನಂಜನಗೂಡು ದೇವಾಲಯದಲ್ಲಿ ಅಮ್ಮನವರ ಗುಡಿಗೆ ಬಾಗಿಲು ಹಾಕಲಾಗಿತ್ತು. ಈ ವೇಳೆ ದೇವಾಲಯಕ್ಕೆ ಬಂದ ಶಾಸಕರ ಒತ್ತಾಯ, ಮನವಿ ಮೇರೆಗೆ ಪಾರ್ವತಿ ದೇವಾಲಯದ ಬಾಗಿಲು ತೆಗೆದು ದರ್ಶನಕ್ಕೆ ಅವಕಾಶ ನೀಡಲಾಯಿತು.
First published: