ಸತೀಶ್​ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು... ಡಿಕೆಶಿ ಸುಮ್ಮನಿದ್ದರೆ ಸರಿ

news18
Updated:September 10, 2018, 9:01 PM IST
ಸತೀಶ್​ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು... ಡಿಕೆಶಿ ಸುಮ್ಮನಿದ್ದರೆ ಸರಿ
  • Advertorial
  • Last Updated: September 10, 2018, 9:01 PM IST
  • Share this:
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು(ಸೆ. 10): ನಮ್ಮ ಮನೆಯಲ್ಲಿ ಸತೀಶ್​ ಜಾರಕಿಹೊಳಿ ಸಿಎಂ ಅಭ್ಯರ್ಥಿ ಎಂದು ಹಿಂದೆ ಹೇಳಿದ್ದೆ. ಅದು ಸಾಂದರ್ಭಿಕವಾಗಿ ಹೇಳಿದ್ದೆ, ಆದರೆ ಅವರನ್ನು ಮುಂದೆ ಸಿಎಂ ಮಾಡುತ್ತೇವೆ ಎಂದು ರಮೇಶ್​ ಜಾರಕಿಹೊಳಿ ಹೊಸ ಬಾಂಬ್​ ಸಿಡಿಸಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ತಾನು ಬಿಜೆಪಿ ಸೇರುತ್ತಿರುವ ಸುದ್ದಿಯನ್ನು ತಳ್ಳಿಹಾಕಿದರು. ನಾನು ಬಿಜೆಪಿಗೆ ಸೇರುತ್ತೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ನಾನು ಯಾವುದೇ ಕಾರಣಕ್ಕೂ ಕಮಲ ಪಾಳೆಯ ಸೇರುವುದಿಲ್ಲ. ನನ್ನ ಜೊತೆ ಯಡಿಯೂರಪ್ಪ ಅವರು ಸಂಪರ್ಕದಲ್ಲಿರುವುದು, ಡಿಸಿಎಂ, ಸಿಎಂ ಸ್ಥಾನ ಬೇಡಿಕೆ ಇಟ್ಟಿರುವುದು ಇದೆಲ್ಲಾ ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರು..

ಮಹಾರಾಷ್ಟ್ರ ಬಿಜೆಪಿ ನಾಯಕರ ಸಂಪರ್ಕದಲ್ಲಿರುವುದರ ಕುರಿತು ಸ್ಪಷ್ಟನೆ ನೀಡಿದ ಅವರು, ಅಲ್ಲಿ ನಮ್ಮ ಗ್ರೂಪ್​ನ ಸಕ್ಕರೆ ಕಾರ್ಖಾನೆಗಳಿವೆ. ಹೀಗಾಗಿ ನಾನು ಅಲ್ಲಿನ ಸಿಎಂ ಭೇಟಿಯಾಗುತ್ತೇನೆ. ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆ. ಅದು ನನ್ನ ಕಾರ್ಖಾನೆ ವಿಚಾರವಾಗಿ ಎಂದರು.

ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಬಣಕ್ಕೆ ಗೆಲುವಾದ ಹಿನ್ನೆಲೆ ಪಕ್ಷ ತೊರೆಯಲು ರಮೇಶ್​ ಸಿದ್ದವಾಗಿದ್ದರೆ ಎಂಬ ಮಾತನ್ನು ಅಲ್ಲಗಳೆದ ಅವರು, ಪಿಎಲ್​ಡಿ ಬ್ಯಾಂಕ್ ಚುನಾವಣೆಯಲ್ಲಿ ಮುಖಭಂಗ ಆಗಿಲ್ಲ. ಆಗಿದ್ರೆ ಅಲ್ಲಿಂದಲೇ, ಆಗ್ಲೇ ರಾಜೀನಾಮೆ ನೀಡುತ್ತಿದ್ದೆ. ಪಿಎಲ್​ಡಿ ಬ್ಯಾಂಕ್ ವಿಚಾರದಲ್ಲಿ ಹೆಬ್ಬಾಳ್ಕರ್ ಪಾತ್ರವೇ ಇರಲಿಲ್ಲ. ಎಲ್ಲವೂ ಮಾಧ್ಯಮದವರ ಸೃಷ್ಟಿ ಎಂದರು.

ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ 12 ಸ್ಥಾನಗಳು ಅವಿರೋಧ ಆಯ್ಕೆಯಾಗಿದೆ. ಆಗಿದ್ದಾಗ  ಅಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವು ಹೇಗಾಗುತ್ತದೆ  ಎಂದು  ಪ್ರಶ್ನಿಸಿದರು.

ಡಿಕೆಶಿ ವಿರುದ್ಧ ಮತ್ತೆ ಗರಂ: ಡಿಕೆ ಶಿವಕುಮಾರ್​ ಹಸ್ತಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ ಹೇಳಿದ  ಹೇಳಿಕೆಗೆ ನಾನು ಈಗಲೂ ಬದ್ಧ. ಡಿಕೆ ಶಿವಕುಮಾರ್ ಸೇರಿ ಯಾರೇ ಆಗಲಿ ನಮ್ಮ ಜಿಲ್ಲೆಗೆ ಪ್ರವೇಶ ಆಗುವುದು ಬೇಡ. ಅವರು ಪ್ರವೇಶವಾಗುವುದಕ್ಕೆ ನಾವು ಬಿಡುವುದಿಲ್ಲ. ನಮಗೆ ಅಗತ್ಯ ಇದ್ದರೇ ನಾವೇ ಫೋನ್ ಮಾಡಿ ಕೇಳುತ್ತೇವೆ ಎಂದರು.

ಸತೀಶ್ ಜಾರಕಿಹೊಳಿಗೆ ಅವಮಾನವಾದರೆ ಉಗ್ರ ತೀರ್ಮಾನ ಎಂದು ಹೇಳಿದ್ದೆ. ಆದರೆ ಆ ರೀತಿ  ಯಾವುದೇ  ಅವಮಾನವಾದ ಘಟನೆ ಆಗಲಿಲ್ಲ. ಸತೀಶ್​ ಜಾರಕಿಹೊಳಿಗೆ ಕಳೆದ 3 ವರ್ಷಗಳಿಂದ ಅನ್ಯಾಯವಾಗಿದೆ. ಆದರೆ ಅವರಿಗೆ ಅವಮಾನ ಆದ್ರೆ ಮಾತ್ರ ನಾವು ಸುಮ್ಮನಿರುವುದಿಲ್ಲ ಎಂದು ಕೂಡ ಎಚ್ಚರಿಕೆ ನೀಡಿದರು.

ನಮ್ಮಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ನನಗೆ ಮಂತ್ರಿ ಸ್ಥಾನ ತೃಪ್ತಿ ತಂದಿದೆ. ನಾನು ಬೂತ್​ ಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡಿದವನು. 40  ವರ್ಷದಿಂದ ಕಾಂಗ್ರೆಸ್ಸನಲ್ಲಿದ್ದೇನೆ. ಗೋಡೆಬರಹ ಬರೆದು ಬಂದಿದ್ದೇನೆ ಎಂದರು

ಇನ್ನು ಲೋಕಸಭೆ ಚುನಾವಣೆಗೆ ಸತೀಶ ಜಾರಕಿಹೊಳಿ, ನಾನು ಹಾಗೂ ವಿವೇಕರಾವ್ ಪಾಟೀಲ್ ಈ ಮೂವರಲ್ಲಿ ಯಾರನ್ನಾದರೂ ಅಭ್ಯರ್ಥಿ ಮಾಡಿ ಎಂದು ಹೇಳಿದ್ದೇವೆ. ನಮ್ಮನ್ನು ಹೊರತುಪಡಿಸಿ ಬೇರೆಯವರನ್ನ ಕಣಕ್ಕಿಳಿಸಿದರೂ ನಾವು ಪಕ್ಷದ ಪರ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ತಾವು ಯಾವುದೇ ಕಾರಣಕ್ಕೂ ಪಕ್ಷ ತ್ಯಜಿಸುವುದಿಲ್ಲವೆಂಬುದನ್ನು ರಮೇಶ್ ಜಾರಕಿಹೊಳಿ ಮನವರಿಕೆ ಮಾಡಿಕೊಡಲು ಯತ್ನಿಸಿದರು.

 
First published:September 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ