ಪವರ್​ಫುಲ್ ಲೇಡಿ ಲಕ್ಷ್ಮೀ ಹೆಬ್ಬಾಳ್ಕರ್ ಕೈಕಾಲು ಬಿದ್ದು ರಮೇಶ್ ಮಂತ್ರಿಯಾಗಿದ್ದ: ಸತೀಶ್ ಜಾರಕಿಹೊಳಿ

ಮೊದಲಿಂದಲೂ ರಮೇಶ್ ಜಾರಕಿಹೊಳಿ ಸ್ವಾರ್ಥಿ. ಆತನನ್ನು ಮೊದಲಿಂದಲೂ ನಾನು ವಿರೋಧಿಸುತ್ತಾ ಬಂದಿದ್ದೇನೆ. ಈಗಲೂ ವಿರೋಧಿಸುತ್ತೇನೆ. ಮುಂದೆಯೂ ಮಾಡುತ್ತೇನೆ. ಆತ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನರ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.

news18
Updated:November 17, 2019, 4:02 PM IST
ಪವರ್​ಫುಲ್ ಲೇಡಿ ಲಕ್ಷ್ಮೀ ಹೆಬ್ಬಾಳ್ಕರ್ ಕೈಕಾಲು ಬಿದ್ದು ರಮೇಶ್ ಮಂತ್ರಿಯಾಗಿದ್ದ: ಸತೀಶ್ ಜಾರಕಿಹೊಳಿ
ಮಾಜಿ ಸಚಿವ ಸತೀಶ್ ಜಾರಕಿಹೊಳಿ
  • News18
  • Last Updated: November 17, 2019, 4:02 PM IST
  • Share this:
ಬೆಳಗಾವಿ(ನ. 17): ಹಿರಿಯ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ತಮ್ಮ ಸಹೋದರನ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಸಹೋದರ ರಮೇಶ್ ಮಂತ್ರಿಯಾಗಿದ್ದು ಹೇಗೆ; ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ತಾನು ಮುನಿಸಿಕೊಳ್ಳಲು ಕಾರಣವೇನು; ಎರಡು ವರ್ಷದ ಹಿಂದೆ ಡಿಕೆಶಿಯನ್ನು ಸಿಎಂ ಮಾಡಲು ಹೊರಟವರು ಯಾರು ಇತ್ಯಾದಿ ವಿಷಯಗಳನ್ನು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಬಿಚ್ಚಿಟ್ಟಿದ್ಧಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ತುಂಬಾ ಪವರ್​ಫುಲ್. ಮೈತ್ರಿ ಸರ್ಕಾರವಿದ್ದಾಗ ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ಆಕೆಯೇ. ಅವರ ಕೈಕಾಲು ಬಿದ್ದು, ಅತ್ತು ಕರೆದು ಈತ ಮಂತ್ರಿಯಾಗಿದ್ದ. ಇದನ್ನು ಆತ ಇಲ್ಲ ಎಂದು ಬಹಿರಂಗವಾಗಿ ಹೇಳಲಿ ನೋಡೋಣ ಎಂದು ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಸೈಲೆಂಟ್ ಆಗಿರುವುದೇಕೆ?; ಮೌನ ಮುರಿದ ಟ್ರಬಲ್ ಶೂಟರ್

ರಮೇಶನನ್ನು ಮಂತ್ರಿ ಮಾಡಿದ್ದಕ್ಕೆ ಲಕ್ಷ್ಮೀ ಜೊತೆ ನಾನು ಜಗಳ ಆಡಿದ್ದೆ. ಹುಚ್ಚನನ್ನು ಮಂತ್ರಿ ಮಾಡಿದ್ರು ಎಂಬುದು ನನ್ನ ಕೋಪವಾಗಿತ್ತು ಅಷ್ಟೇ. ಇದು ಬಿಟ್ಟರೆ ಲಕ್ಷ್ಮೀ, ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಜಗಳ ಇರಲಿಲ್ಲ. ಹಿಂದೆ ನಾನು ಲಕ್ಷ್ಮೀ ಮನೆಗೆ ಚಹಾಕ್ಕೆ ಹೋಗಿದ್ದು ನಿಜ. ಈಗ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದ ಉಸ್ತುವಾರಿ ಇದ್ದಾರೆ. ಮುಂದೆ ನಾನು ಅವರ ಮನೆಗೆ ಚಹಾ, ಊಟಕ್ಕೆ ಹೋಗುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

ರಮೇಶ, ಲಕ್ಷ್ಮೀ ಮತ್ತು ಡಿಕೆಶಿ ಒಂದೇ ಗ್ರೂಪ್​ನಲ್ಲಿದ್ದವರು. ಆನಂತರ ಏನೋ ಸಮಸ್ಯೆಯಾಗಿ ಹೊರಬಂದಿದ್ದಾನೆ. ರಮೇಶ ಎರಡು ವರ್ಷದ ಹಿಂದೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದ. ಷೇರುಮಾರುಕಟ್ಟೆ ರೀತಿಯಲ್ಲಿ ರಮೇಶನಿಗೆ ನಾಯಕರು ಏರುಪೇರಾಗುತ್ತಾರೆ. ಮೊದಲು ದಿವಂಗತ ಕೆ.ಎಚ್. ಪಾಟೀಲ್, ಎಸ್.ಎಂ. ಕೃಷ್ಣ, ನಂತರ ಸಿದ್ದರಾಮಯ್ಯ ನಮ್ಮ ಲೀಡರ್ ಎಂದು ರಮೇಶ್ ಹೇಳಿದ್ದ. ತನಗೆ ಹೇಗೆ ಬೇಕೋ ಹಾಗೆ ರಮೇಶ ಬದಲಾಗುತ್ತಾನೆ. ಸುಳ್ಳು ಹೇಳುವುದರಲ್ಲಿ ಆತನಿಗೆ ಪಿಎಚ್​ಡಿ ಆಗಿದೆ. ಈತ ಯಡಿಯೂರಪ್ಪರನ್ನು ಯಾವಾಗ ಗುಂಡಿಗೆ ಕೆಡವುತ್ತಾನೋ ಗೊತ್ತಿಲ್ಲ ಎಂದು ತಮ್ಮ ಸಹೋದರನ ಮೇಲೆ ತೀಕ್ಷ್ಣ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಶಾನುಬೋಗನ ಮಾತು ಕೇಳಿ ನಮ್ಮಪ್ಪ ಲಾಯರ್ ಓದಬೇಡ ಅಂದಿದ್ರು; ಮಾಜಿ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದಲ್ಲಿ ಮಾಸ್ ಲೀಡರ್​ಗಳಿಗೆ ಬೆಲೆ ಇಲ್ಲ. ಕೈ ಚೀಲ ಹಿಡಿಯುವವರಿಗೆ, ಬಾಗಿಲು ಕಾಯುವವರಿಗೆ ಬೆಲೆ ಇದೆ ಎಂದು ರಮೇಶ್ ಜಾರಕಿಹೊಳಿ ಮಾಡಿದ ಆರೋಪಕ್ಕೆ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.ರಮೇಶ್ ಜಾರಕಿಹೊಳಿ ಕೂಡ 25 ವರ್ಷ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಿ ಸ್ವಾಮಿ ನಿಷ್ಠೆ ಬೇಕು. ರಾಜಕೀಯದಲ್ಲಿ ಬೆಳೆಯೋಕೆ ಗಾಡ್ ಫಾದರ್ ಬೇಕೇ ಬೇಕು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​ನಲ್ಲಿ ಈ ಸಂಸ್ಕೃತಿ ಇದೆ. ಕೈ ಚೀಲ ಹಿಡಿಯೋದು ಅಂದ್ರೆ ಚಮಚಾಗಿರಿ ಮಾಡೋದು ಅಂತ ಅಲ್ಲ. ರಮೇಶ ಕೂಡ ಶಂಕರಾನಂದರ ಕೈಚೀಲ ಹಿಡಿದು ಓಡಾಡಿರಲಿಲ್ಲವೇ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ; ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಪ್ರಮುಖರಿಗೆ ಕೊಕ್​

ಮೊದಲಿಂದಲೂ ರಮೇಶ್ ಜಾರಕಿಹೊಳಿ ಸ್ವಾರ್ಥಿ. ಆತನನ್ನು ಮೊದಲಿಂದಲೂ ನಾನು ವಿರೋಧಿಸುತ್ತಾ ಬಂದಿದ್ದೇನೆ. ಈಗಲೂ ವಿರೋಧಿಸುತ್ತೇನೆ. ಮುಂದೆಯೂ ಮಾಡುತ್ತೇನೆ. ಆತ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನರ ಬೆನ್ನಿಗೆ ಚೂರಿ ಹಾಕಿದ್ದಾನೆ. ಕಾಶಿಯಲ್ಲಿ ಅರ್ಧ ತಲೆ ಬೋಳಿಸಿ ಹಾಗೆ ಆತ ಮಾತನಾಡುತ್ತಾನೆ. ಆತನ ಮೆದುಳು ಖಾಲಿ ಇದೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ. ಆತನ ತಲೆ ಮೊಬೈಲ್​ನಂತೆ ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತೆ ಎಂದು ಮಾಜಿ ಸಚಿವರು ಲೇವಡಿ ಮಾಡಿದ್ದಾರೆ.

ಇನ್ನು, ಗೋಕಾಕ್ ಕ್ಷೇತ್ರದಲ್ಲಿ ಲಖನ್ ಜಾರಕಿಹೊಳಿ ಬೃಹತ್ ಮೆರವಣಿಗೆ ಮೂಲಕ ನಾಳೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆ ಶಿವಕುಮಾರ್ ಅವರು ಗೋಕಾಕ್​ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಬರಲಿದ್ಧಾರೆ. ರಮೇಶನಿಗೆ ಈ ಬಾರಿ ಸೋಲು ನಿಶ್ಚಿತ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ವರದಿ: ಚಂದ್ರಕಾಂತ್ ಸುಗಂಧಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 17, 2019, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading