news18-kannada Updated:March 3, 2021, 11:16 AM IST
ಸಚಿವ ರಮೇಶ್ ಜಾರಕಿಹೋಳಿ.
ಬೆಂಗಳೂರು(ಮಾ. 03): ಮಹಿಳೆಯೊಬ್ಬರ ಮೇಲೆ ರಮೇಶ್ ಜಾರಕಿಹೊಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅದರ ಸಿಡಿ ಕೂಡ ಇದೆ. ಆ ಮಹಿಳೆಗೆ ಜೀವ ಬೆದರಿಕೆ ಇದೆ. ಪೊಲೀಸರು ಇದರ ತನಿಖೆ ನಡಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ನೀಡಿದ ದೂರು ಇದೀಗ ರಾಜಕೀಯ ಸಂಚಲನವನ್ನೇ ಮೂಡಿಸಿದೆ. ನಿನ್ನೆ ಕಲ್ಲಹಳ್ಳಿ ದೂರು ನೀಡಿದ್ದರೂ ಇನ್ನೂ ಕೂಡ ಎಫ್ಐಆರ್ ದಾಖಲಾಗಿಲ್ಲ. ಅದಕ್ಕೆ ಕಾರಣವೂ ಇದೆ. ದೂರು ನೀಡಿರುವ ದಿನೇಶ್ ಕಲ್ಲಹಳ್ಳಿ ಥರ್ಡ್ ಪಾರ್ಟಿ. ಈ ಪ್ರಕರಣದಲ್ಲಿ ಸಂತ್ರಸ್ತೆ ನೇರವಾಗಿ ದೂರು ನೀಡದೇ ಇರುವುದರಿಂದ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎನ್ನಲಾಗಿದೆ. ಒಂದು ವೇಳೆ, ಸಂತ್ರಸ್ತೆಯೇ ಖುದ್ದಾಗಿ ದೂರು ನೀಡಿದಲ್ಲಿ ಎಫ್ಐಆರ್ ದಾಖಲಿಸಲು ಅಡ್ಡಿ ಇಲ್ಲ ಎನ್ನುತ್ತಿವೆ ಪೊಲೀಸ್ ಮೂಲಗಳು.
ಇದೇ ವೇಳೆ, ನಿನ್ನೆ ದೂರು ನೀಡಿರುವ ದಿನೇಶ್ ಕಲ್ಲಳ್ಳಿ ಅವರಿಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೋಟೀಸ್ ಜಾರಿ ಮಾಡಲು ನಿರ್ಧರಿಸಿದ್ದಾರೆಂಬ ಸುದ್ದಿಯೂ ಇದೆ. ದೂರಿನಲ್ಲಿ ಅಪೂರ್ಣ ಮಾಹಿತಿ ಇದೆ. ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತರು ಮತ್ತು ಸಿಡಿ ಬಗ್ಗೆ ಮತ್ತಷ್ಟು ಮಾಹಿತಿ ಬೇಕಾಗಿದೆ. ಠಾಣೆಗೆ ಬಂದು ಮಾಹಿತಿ ನೀಡುವಂತೆ ಕೋರಿ ಪೊಲೀಸರು ದಿನೇಶ್ ಕಲ್ಲಹಳ್ಳಿಗೆ ನೋಟೀಸ್ ಕೊಡಲಿದ್ದಾರೆನ್ನಲಾಗಿದೆ.
ದಿನೇಶ್ ಕಲ್ಲಹಳ್ಳಿ ಅವರು ತಮ್ಮ ದೂರಿನಲ್ಲಿ ರಾಸಲೀಲೆಯ ಸಿಡಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಮೂಲ ಸಿಡಿಯನ್ನು ಪೊಲೀಸರಿಗೆ ಇನ್ನೂ ಹಸ್ತಾಂತರಿಸಿಲ್ಲ. ಸಂತ್ರಸ್ತೆಗೆ ರಮೇಶ್ ಜಾರಕಿಹೊಳಿ ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಅವರು ದೂರು ನೀಡಲು ಮುಂದೆ ಬಂದಿಲ್ಲ ಎಂದು ಹೇಳುತ್ತಿರುವ ದಿನೇಶ್, ಶೀಘ್ರದಲ್ಲೇ ಆ ಮಹಿಳೆ ದೂರು ಸಲ್ಲಿಸುತ್ತಾರೆ. ಆಗ ಎಲ್ಲಾ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಸಲೀಲೆ ವಿಡಿಯೋ ರಿಲೀಸ್; ಅಜ್ಞಾತ ಸ್ಥಳದಿಂದಲೇ ರಮೇಶ್ ಜಾರಕಿಹೊಳಿ ಕಾನೂನು ಹೋರಾಟಕ್ಕೆ ಸಜ್ಜು
ಇನ್ನು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಗೋವಿಂದ ಕಾರಜೋಳ, ಬಾಲಚಂದ್ರ ಜಾರಕಿಹೊಳಿ ಮೊದಲಾದವರು ಸಿಎಂ ನೇತೃತ್ವದ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಸಭೆಗೆ ಮುನ್ನ ಮಾಧ್ಯಮಗಳಿಗೆ ಸಿಕ್ಕಿದ ಬೊಮ್ಮಾಯಿ, ತಾನು ಸಿಡಿ ವಿಚಾರ ಸಂಬಂಧ ಸಿಎಂ ಭೇಟಿಯಾಗಿಲ್ಲ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ವಿಸ್ತೃತ ತನಿಖೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಹೋದರ ರಮೇಶ್ ಜಾರಕಿಹಳಿ ವಿರುದ್ಧದ ರಾಸಲೀಲೆ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ವಿಡಿಯೋವನ್ನ ಎಡಿಟ್ ಮಾಡಲಾಗಿದೆ. ಇದು ನಕಲಿ ವಿಡಿಯೋ. ಪ್ರತಿಪಕ್ಷದವರು ಮಾಡಿರುವ ಚಿತಾವಣಿ ಇದು. ಈ ಪ್ರಕರಣವನ್ನ ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ಧಾರೆ.
ಇದನ್ನೂ ಓದಿ: ನಾನು ಯೋಗೇಶ್ವರ್ ಲೆವೆಲ್ಗೆ ಇಳಿಯಲ್ಲ, ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ: ಹೆಚ್.ಡಿ. ಕುಮಾರಸ್ವಾಮಿರಮೇಶ್ ಜಾರಕಿಹೊಳಿ ಯಾಕೆ ರಾಜೀನಾಮೆ ಕೊಡಬೇಕು? ಈ ರೀತಿ ನಕಲಿ ವಿಡಿಯೋವನ್ನು ಯಾರ ಮೇಲಾದರೂ ಮಾಡಬಹುದು. ಹಾಗೆ ಮಾಡುತ್ತಾ ಹೋದರೆ ಎಲ್ಲಾ ರಾಜಕಾರಣಿಗಳು ಮನೆಗೆ ಹೋಗಬೇಕಾಗುತ್ತದೆ. ಇಲ್ಲಿ ರಮೇಶ್ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಒಂದು ವೇಳೆ ನಕಲಿ ವಿಡಿಯೋ ಆಗಿದ್ದರೆ ಅದರ ಹಿಂದೆ ಇರುವ ವ್ಯಕ್ತಿಗಳ ವಿರುದ್ಧವೂ ಕ್ರಮ ಆಗಬೇಕು ಎಂದು ಆಗ್ರಹಿಸಿದ್ಧಾರೆ.
ಹಾಗೆಯೇ, ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವ ಚಿಂತನೆ ಇದೆ ಎಂದು ಇದೇ ವೇಳೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
Published by:
Vijayasarthy SN
First published:
March 3, 2021, 11:16 AM IST