ರಾಮನಗರ: ಚನ್ನಪಟ್ಟಣ ನಗರದ 31 ನೇ ವಾರ್ಡ್ನ ಬಿಜೆಪಿ ಸದಸ್ಯೆ ಮಂಗಳಮ್ಮ ಮನೆಗೆ ಕಳೆದ ರಾತ್ರಿ 8.50 ರ ಸಮಯದಲ್ಲಿ ಏಕಾಏಕಿ 25 ಕ್ಕೂ ಹೆಚ್ಚು ಜನ ಪುಂಡರು ನುಗ್ಗಿ ದಾಂದಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಬೈಕ್, ಕುರ್ಚಿಗಳು, ಕಿಟಕಿ ಸೇರಿದಂತೆ ಹಲವು ವಸ್ತುಗಳನ್ನ ಹೊಡೆದು ನಾಶ ಮಾಡಿದ್ದಾರೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು 10 ಜನ ಆರೋಪಿಗಳ ಮೇಲೆ FIR ದಾಖಲಾಗಿದೆ. ಈ ಬಗ್ಗೆ ಮಾತನಾಡಿದ ರಾಮನಗರ ಎಸ್ಪಿ ಎಸ್. ಗಿರೀಶ್, ಈ ಘಟನೆಯ ಸಂಬಂಧ ಈಗಾಗಲೇ 10 ಜನರ ಮೇಲೆ FIR ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ರೌಡಿಶೀಟರ್ ಇದ್ದರು ಎಂಬ ಮಾಹಿತಿ ಇದೆ. ಕೂಡಲೇ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು. ಚನ್ನಪಟ್ಟಣದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿರುವ ವಿಚಾರವಾಗಿ ಮಾತನಾಡಿ, ಗಾಂಜಾ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಆದರೆ ಈ ವಿಚಾರವಾಗಿಯೂ ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಇನ್ನು ದಾಂಧಲೆಗೊಳಗಾದ ಬಿಜೆಪಿ ನಗರಸಭಾ ಸದಸ್ಯೆ ಮಂಗಳಮ್ಮ ಮನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಪೊಲೀಸರ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು. ಚನ್ನಪಟ್ಟಣದಲ್ಲಿ ರೌಡಿಗಳು ತಮ್ಮ ಬಜಾರ್ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ. ಈ ಹಿಂದೆ ಗಲಾಟೆಗಳಾದಾಗ ಪೊಲೀಸರೇ ರಾಜೀ ಮಾಡಿಸಿದ್ದಾರೆ. ಹಾಗಾಗಿ ಪೊಲೀಸರೇ ಚನ್ನಪಟ್ಟಣದಲ್ಲಿ ರೌಡಿಜಂಗೆ ಉತ್ತೇಜನ ಕೊಡ್ತಿದ್ದಾರೆ ಎಂದು ಕಿಡಿಕಾರಿದರು.
ನಾವು ಇದೇ ವಿಚಾರವಾಗಿ ಗ್ಱಹ ಸಚಿವರನ್ನ ಭೇಟಿ ಮಾಡ್ತೇವೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಜೊತೆಗೆ ಚನ್ನಪಟ್ಟಣದಲ್ಲಿ ಡ್ರಗ್ಸ್, ಗಾಂಜಾ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆಯೂ ಗ್ಱಹ ಸಚಿವರಿಗೆ ದೂರು ಕೊಡ್ತೇವೆ. ಇದರಲ್ಲಿ ಯಾವ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದರೂ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದರು.
ಇದನ್ನೂ ಓದಿ: Covid 3rd wave- ಬೆಂಗಳೂರಿನಲ್ಲಿ 3ನೇ ಕೋವಿಡ್ ಅಲೆ ಎದುರಿಸಲು ಸಿದ್ಧವಾಗಿದೆ 8000 ಬೆಡ್ ವ್ಯವಸ್ಥೆ
ಚನ್ನಪಟ್ಟಣದಲ್ಲಿ ಡ್ರಗ್ಸ್ - ಗಾಂಜಾ ದಂಧೆ ಎಫೆಕ್ಟ್, ಜನರು ಹೈರಾಣ ?!
ಬೊಂಬೆನಗರಿ ಚನ್ನಪಟ್ಟಣದಲ್ಲಿ ಡ್ರಗ್ಸ್ ಮತ್ತು ಗಾಂಜಾ ದಂಧೆಯ ಎಫೆಕ್ಟ್ ನಿಂದಾಗಿ ಪುಂಡರ ಹಾವಳಿ ಹೆಚ್ಚಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ವಿಶೇಷವಾಗಿ ನಗರದ ಕೆಲ ಬಡಾವಣೆಯಲ್ಲಿ ನಡೆಯುವ ಸ್ಥಳಕ್ಕೆ ಪೊಲೀಸರು ಸಹ ಹೋಗಲು ಹಿಂಜರಿಯುತ್ತಾರೆ. ಯಾಕೆಂದರೆ ಅಷ್ಟರ ಮಟ್ಟಿಗೆ ದಂಧೆಕೋರರು ತಮ್ಮ ದಂಧೆಯ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಜನರು ಚರ್ಚೆ ಮಾಡ್ತಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ಸುಕಿ, ಫರ್ದಿನ್, ಕಾರ್ತಿಕ್, ಪ್ರದಿ, ಸಾಗರ್, ಕುಮಾರ, ಮಂಜ ಹಾಗೂ ಪ್ರಜ್ವಲ್ ಎಂಬುವನ ಮೇಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಿಕೊಂಡು ದೂರು ದಾಖಲಿಸಿಕೊಳ್ಳಲಾಗಿದೆ. ಚನ್ನಪಟ್ಟಣ ನಗರದ ಪೋಲಿ ಪುಂಡರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಚನ್ನಪಟ್ಟಣ ತಾಲೂಕಿನಾದ್ಯಂತ ಚರ್ಚೆಯಾಗ್ತಿದೆ. ನಗರ ಪ್ರದೇಶದಲ್ಲಿ ದಿನನಿತ್ಯ ರೌಡಿಜಂ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ಚನ್ನಪಟ್ಟಣದಲ್ಲಿ ರೌಡಿಸಂಗೆ ಕಡಿವಾಣ ಹಾಕಬೇಕೆಂದು ತಾಲೂಕಿನ ಜನರು ಒತ್ತಾಯಿಸಿದ್ದಾರೆ.
ವರದಿ: ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ