ರಾಮನಗರ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Pro Kannada activist Vatal Nagaraj) ತಮ್ಮ ಹುಟ್ಟುಹಬ್ಬ ಆಚರಣೆ (Birthday Celebration) ವೇಳೆಯೂ ಸರ್ಕಾರಗಳನ್ನ ತರಾಟೆಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಲಿಲ್ಲ. ರಾಮನಗರದಲ್ಲಿ ಹುಟ್ಟು ಹಬ್ಬ ಆಚರಿಸಿದ ವಾಟಾಳ್ ನಾಗರಾಜ್ ಅವರು ಮೇಕೆದಾಟು ಯೋಜನೆ (Mekedatu Project) ಮೊದಲಾದ ವಿಷಯಗಳಲ್ಲಿ ಸರ್ಕಾರದ ನಡೆಗಳನ್ನ ತೀವ್ರವಾಗಿ ಟೀಕಿಸಿದರು. ಇದೇ ವೇಳೆ ತಮ್ಮ ನಿಜವಾದ ಜನ್ಮದಿನ ಬೇರೆ, ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಹುಟ್ಟುಹಬ್ಬವೇ ಬೇರೆ ಎಂಬ ವಿಷಯವನ್ನ ಹೊರಗೆಡವಿದ ಅವರು 1962ರಲ್ಲಿ ತಿಂದ ಬೂಟಿನೇಟಿನ ಪ್ರಸಂಗವನ್ನು ಸ್ಮರಿಸಿದರು.
1961ರಲ್ಲಿ ಬೆಂಗಳೂರಿನಲ್ಲಿ ಹಿಂದಿ ಚಲನಚಿತ್ರ ಹೇರಿಕೆ ವಿರೋಧಿಸಿದ್ದ ವೇಳೆ ಪೊಲೀಸರು ನನಗೆ ಬೂಟಿನಿಂದ ಒದ್ದು ಏಟು ಕೊಟ್ಟಿದ್ದರು. ಆವತ್ತಿನಿಂದ ನಾನು ಅಂದು ಬೂಟಿನ ಏಟು ತಿಂದ ದಿನವೇ ಪ್ರತೀ ವರ್ಷವೂ ಹುಟ್ಟುಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದೇನೆ ಎಂದು ಕನ್ನಡಪರ ಹೋರಾಟಗಾರ ತಿಳಿಸಿದರು. ನನಗೆ ಬೂಟಿನ ಏಟು ಮಾತ್ರವಲ್ಲ ಬಂದೂಕಿನಿಂದ ಹೊಡೆದರೂ ಕನ್ನಡಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ ಎಂದೂ ವಾಟಾಳ್ ನಾಗರಾಜ್ ಪಣ ತೊಟ್ಟರು.
ರಾಮನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ಅವರು ಬಡವರ ಬಾದಾಮಿ ಎಂದು ಕರೆಯುವ ಕಡಲೆಕಾಯಿಯನ್ನು ಜನರಿಗೆ ಹಾಗೂ ತಮ್ಮ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಹಂಚಿ ವಿಶಿಷ್ಟ ರೀತಿಯಲ್ಲಿ ಜನ್ಮ ದಿನ ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರವನ್ನು ಹಿಗ್ಗಾ ಮುಗ್ಗಾ ಝಾಡಿಸಿದರು.
ಮೇಕೆದಾಟು ಯೋಜನೆ ವಿಳಂಬಕ್ಕೆ ಸರ್ಕಾರಗಳು ಕಾರಣ. ಯೋಜನೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಸಕ್ತಿ ಇಲ್ಲ. ಬದಲಾಗಿ ಬಿಜೆಪಿ ಈ ವಿಚಾರದಲ್ಲಿ ಇಬ್ಬಂದಿ ನೀತಿ ತಾಳಿದೆ. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಈ ಮೇಕೆದಾಟು ಯೋಜನೆಯ ಪರವಾಗಿ ಇದ್ದೇವೆಂದು ಹೇಳುತ್ತಾರೆ. ಆದರೆ, ಅದೇ ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಈ ಯೋಜನೆಗೆ ವಿರುದ್ಧವಾಗಿ ಮಾತನಾಡುತ್ತಾರೆ ಎಂದು ವಾಟಾಳ್ ಟೀಕಿಸಿದರು.
ಇದನ್ನೂ ಓದಿ: Devdutt Padikkal- ರೊನಾಲ್ಡೊ ಅನುಕರಣೆ ಮಾಡಿದ ಕ್ರಿಕೆಟಿಗ ದೇವದತ್; ಆರ್ಸಿಬಿ ಫ್ಯಾನ್ಸ್ ಭರ್ಜರಿ ರಿಯಾಕ್ಷನ್
ಅಣ್ಣಾಮಲೈ ವಿರುದ್ಧ ಆಕ್ರೋಶ: ಕರ್ನಾಟಕದ ಅನ್ನ ತಿಂದ ಅಣ್ಣಾಮಲೈ ತಮಿಳುನಾಡಿನಲ್ಲಿ ಮೇಕೆ ದಾಟು ಯೋಜನೆ ವಿರುದ್ಧ ಮಾತನಾಡುತ್ತಾರೆ. ಸಚಿವ ಮುನಿರತ್ನಂ ಮೂಲತಃ ಆಂಧ್ರ ಪ್ರದೇಶದವರು. ಅವರು ಅಣ್ಣಾಮಲೈ ಪರವಾಗಿ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಅವರಿಗೆ ನಮ್ಮ ರಾಜ್ಯದಲ್ಲಿ ಮಂತ್ರಿಸ್ಥಾನ ಕೊಟ್ಟಿದ್ದಾರೆ. ಇದು ಆಗಬಾರದಿತ್ತು. ಕೂಡಲೇ ಮುನಿರತ್ಮಂ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಹಾಗೆಯೇ ಕೇರಳದ ರಾಜೀವ್ ಚಂದ್ರಶೇಖರ್ ಅವರಿಗೆ ರಾಜ್ಯಸಭಾ ಸ್ಥಾನ ಕೊಟ್ಟಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ನಮ್ಮ ರಾಜ್ಯದಿಂದ ರಾಜ್ಯ ಸಭೆಗೆ ಅವಕಾಶ ಕೊಟ್ಟಿದ್ದಾರೆ. ಈ ಕ್ರಮ ಸರಿ ಅಲ್ಲ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಜಾತಿ ರಾಜಕಾರಣಕ್ಕೆ ವಾಟಾಳ್ ಬೇಸರ:
ಪ್ರಸ್ತುತ ರಾಜಕೀಯ ವ್ಯವಸ್ಥೆಯೇ ಜಾತಿ ವ್ಯವಸ್ಥೆಯ ಮೇಲೆ ನಡೆಯುತ್ತಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಲ್ಲಿ ಪ್ರಬಲ ಜಾತಿಯಿಂದ ಆಯ್ಕೆಯಾದ ರಾಜಕಾರಣಿಗೆ ಎಲ್ಲಾ ರೀತಿಯ ಅಧಿಕಾರ ಸಿಗುತ್ತಿದೆ. ಮುಖ್ಯಮಂತ್ರಿ ಕುರ್ಚಿಯೂ ಅದೇ ರೀತಿ ಆಯ್ಕೆಯಾಗ್ತಿದೆ. ಮಂತ್ರಿಮಂಡಲವೂ ಸಹ ಅದೇ ವ್ಯವಸ್ಥೆಯಲ್ಲಿ ಆಯ್ಕೆಯಾಗ್ತಿದೆ ಎಂದು ವಾಟಾಳ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಸಹ ಯಾವುದೇ ರೀತಿಯ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಕೇವಲ ರಾಜಕೀಯ ವ್ಯವಸ್ಥೆಯನ್ನ ಉಳಿಸಿಕೊಳ್ಳುವ ಸಲುವಾಗಿ ನಾಟಕ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ವರದಿ: ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ