• Home
  • »
  • News
  • »
  • state
  • »
  • ಕೇಂದ್ರ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ : ಮೇಕೆದಾಟು ವಿಚಾರವಾಗಿ ವಾಟಾಳ್ ನಾಗರಾಜ್ ಆಕ್ರೋಶ

ಕೇಂದ್ರ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ : ಮೇಕೆದಾಟು ವಿಚಾರವಾಗಿ ವಾಟಾಳ್ ನಾಗರಾಜ್ ಆಕ್ರೋಶ

ರಾಮನಗರದಲ್ಲಿ ಪ್ರತಿಭಟಿಸಿದ ವಾಟಾಳ್​ ನಾಗರಾಜ್​

ರಾಮನಗರದಲ್ಲಿ ಪ್ರತಿಭಟಿಸಿದ ವಾಟಾಳ್​ ನಾಗರಾಜ್​

ಯಡಿಯೂರಪ್ಪ ರಾಜ್ಯದ ಪರವಾಗಿ ಗಮನಹರಿಸಬೇಕಿದೆ. ಅವರ ಅಧಿಕಾರ ಉಳಿವಿಗಾಗಿ ಪ್ರಯತ್ನ ಬೇಡ ಎಂದು ವಾಟಾಳ್​ ಕಿಡಿಕಾರಿದರು.

  • Share this:

ರಾಮನಗರ : ಕೇಂದ್ರ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರದ ಐಜೂರು ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಅವರು ಮೇಕೆದಾಟು ಯೋಜನೆ ವಿಚಾರವಾಗಿ ಆಕ್ರೋಶ ಹೊರಹಾಕಿದ್ದಾರೆ.


ಕರ್ನಾಟಕ - ತಮಿಳುನಾಡು ಎರಡೂ ರಾಜ್ಯಕ್ಕೂ ಭರವಸೆ ಕೊಡುತ್ತಾರೆ. ಆದರೆ ತಮಿಳುನಾಡು ಸಿಎಂ ಸ್ಟಾಲಿನ್ ಶಾಸನ ಸಭೆ ಮಾಡುತ್ತಾರೆ, ಮೇಕೆದಾಟು ಯೋಜನೆ ವಿರೋಧಿಸಿ ಸಭೆ ಮಾಡ್ತಾರೆ. ಆದರೆ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ, ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇವರು ಈಗ ಶಾಸನ ಸಭೆ ಕರೆದಿದ್ದಾರೆ. ಅದಕ್ಕೂ ಮುನ್ನ ಯೋಜನೆ ಜಾರಿ ಮಾಡಬೇಕು. ಯಡಿಯೂರಪ್ಪ ರಾಜ್ಯದ ಪರವಾಗಿ ಗಮನಹರಿಸಬೇಕಿದೆ. ಅವರ ಅಧಿಕಾರ ಉಳಿವಿಗಾಗಿ ಪ್ರಯತ್ನ ಬೇಡ ಎಂದು ವಾಟಾಳ್​ ಕಿಡಿಕಾರಿದರು.


ರಾಜ್ಯದ ಮಹತ್ವಾಕಾಂಕ್ಷೆ ಯೋಜನೆ ಮೇಕೆದಾಟುವಿಗೆ ಈ ಬಾರಿ ಜೀವ ಬರುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆಯ ಸಂಪೂರ್ಣ ಡಿಪಿಆರ್​ ಅನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಂತರ ತಮಿಳುನಾಡು ತಕರಾರು ಮಾಡಿದ ಪರಿಣಾಮ ಯೋಜನೆಗೆ ಬ್ರೇಕ್ ಬಿತ್ತು.


ಈ ಹಿಂದಿನ ಸಿದ್ದರಾಮಯ್ಯ ನೇತ್ಱತ್ವದ ಕಾಂಗ್ರೆಸ್ ಸರ್ಕಾರವು ಸಲ್ಲಿಸಿದ್ದ ವರದಿಯಂತೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸುಮಾರು 5.612 ಕೋಟಿ ನಿರ್ಮಾಣ ವೆಚ್ಚ ಅಂದಾಜಿಸಲಾಗಿತ್ತು, ಆದರೆ ಈಗ ಅದು 9 ಸಾವಿರ ಕೋಟಿಗೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಇದರಿಂದ ಸುಮಾರು 60.17 ಟಿಎಂಸಿ ನೀರನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದರಿಂದಾಗಿ ಬಯಲುಸೀಮೆ ಜಿಲ್ಲೆಗಳಾದ ರಾಮನಗರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಒಟ್ಟು 12 ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ. ಹಾಗಾಗಿ ಆದಷ್ಟು ಬೇಗ ಈ ಯೋಜನೆಯನ್ನ ಪ್ರಾರಂಭ ಮಾಡಬೇಕು ಎಂದು  ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.


ಇನ್ನು ಮೇಕೆದಾಟು ಜಲಾಶಯದ ಸುತ್ತಮುತ್ತವೆಲ್ಲ ಬಹುಪಾಲು ಅರಣ್ಯ ಪ್ರದೇಶವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಸಂಬಂಧಿಸಿದ ಟ್ರಿಬ್ಯುನಲ್‌ನ ಅನುಮತಿ ಸಿಗುವುದು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಯೋಜನೆ ಅನುಷ್ಠಾನಗೊಂಡಿದ್ದೇ ಆದಲ್ಲಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ. ರಾಮನಗರವೂ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆಯಾಗಲಿದೆ. ಜೊತೆಗೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಗೂ ಕೂಡ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಅಣೆಕಟ್ಟು ನಿರ್ಮಾಣದಿಂದ ಸರಿಸುಮಾರು 2.500 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಲಿದ್ದು, ಬದಲಿ ಜಾಗವನ್ನ ಅರಣ್ಯ ಇಲಾಖೆಗೆ ಒಪ್ಪಿಸಲು ಈಗಾಗಲೇ ಬದಲಿ ಜಾಗವನ್ನು ಸಹ ಸರ್ವೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಅರಣ್ಯ ಇಲಾಖೆಗೆ ಜಾಗವನ್ನ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುತ್ತೆ, ಆದಷ್ಟು ಬೇಗ ಸಿವಿಲ್ ಕೆಲಸಗಳು ಪ್ರಾರಂಭವಾಗಲಿದೆ. ನಂತರ ಡ್ಯಾಂ ಕೆಲಸ ಸರ್ಕಾರದ ಹಂತದಲ್ಲಿ ಪ್ರಾರಂಭವಾಗಲಿದೆ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಹ ನ್ಯೂಸ್ 18 ಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಭಾರತ ನಿರ್ಮಿತ ಸ್ವತ್ತುಗಳನ್ನು ನಾಶಪಡಿಸಿ: ತಾಲಿಬಾನ್‌ಗೆ ಆದೇಶಿಸಿದ ಪಾಕಿಸ್ತಾನದ ಐಎಸ್‌ಐ


ಒಟ್ಟಾರೆ ಈ ಬಾರಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ  ಮೇಕೆದಾಟು ಯೋಜನೆಯನ್ನ ಈ ಅವಧಿಯಲ್ಲಿ ಪೂರ್ಣಗೊಳಿಸಿದರೆ ಈ ಭಾಗದ ರೈತರ ಮನದಲ್ಲಿ ಶಾಶ್ವತವಾಗಿ ಬಿಜೆಪಿ ಪಕ್ಷ ಉಳಿಯಲಿದೆ. ಆದರೆ ತಮಿಳುನಾಡು ರಾಜ್ಯದ ನೂತ‌ನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾತ್ರ ನಾವು ತಮಿಳುನಾಡು ಪರವಾಗಿ ನಿಲ್ಲುತ್ತೇವೆ ಎಂದಿದ್ದಾರೆ. ಈ ಹಿನ್ನೆಲೆ ಬಿಜೆಪಿ ಪಕ್ಷದ ದ್ವಂದ್ವ ನಿಲುವು ಎದ್ದುಕಾಣುತ್ತಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: