HOME » NEWS » State » RAMANAGARA VATAL NAGARAJ ASKS PEOPLE TO MAKE HIM CM FOR 6 MONTHS TO CONTROL COVID ATVR KVD

ನನ್ನನ್ನು 6 ತಿಂಗಳು ರಾಜ್ಯದ ಸಿಎಂ ಮಾಡಿ, ಕೊರೋನಾ ನಿಯಂತ್ರಿಸಿ ತೋರಿಸುತ್ತೇನೆ: ವಾಟಾಳ್ ನಾಗರಾಜ್

ನನಗೆ 6 ತಿಂಗಳು ಅಧಿಕಾರ ಕೊಡಿ, ನಾನು ಕೆಲಸ ಮಾಡಿಲ್ಲ ಅಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ವಾಟಾಳ್​​ ನಾಗರಾಜ್​​ ಹೇಳಿದ್ದಾರೆ.

news18-kannada
Updated:May 14, 2021, 4:20 PM IST
ನನ್ನನ್ನು 6 ತಿಂಗಳು ರಾಜ್ಯದ ಸಿಎಂ ಮಾಡಿ, ಕೊರೋನಾ ನಿಯಂತ್ರಿಸಿ ತೋರಿಸುತ್ತೇನೆ: ವಾಟಾಳ್ ನಾಗರಾಜ್
ವಾಟಾಳ್​ ನಾಗರಾಜ್​
  • Share this:
ರಾಮನಗರ: ರಾಜ್ಯದಲ್ಲಿ ಕೊರೋನಾ 2ನೇ ಅಲೆಯಿಂದ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ನನಗೆ 6 ತಿಂಗಳುಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡಿ. ಕೊರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಕನ್ನಡ ಹೋರಾಟಗಾರ ವಾಟಾಳ್​​ ನಾಗರಾಜ್​​ ಹೊಸ ಆಫರ್​ ಕೊಟ್ಟಿದ್ದಾರೆ. ಬಸವ ಜಯಂತಿ ಹಿನ್ನೆಲೆ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ವಾಟಾಳ್ ನಾಗರಾಜ್ ಈಗ ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೇ ಮೀರಿ ಹೋಗಿದೆ. ಹಾಗಾಗಿ ನನಗೆ 6 ತಿಂಗಳು ಅಧಿಕಾರ ಕೊಡಿ, ನಾನು ಕೆಲಸ ಮಾಡಿಲ್ಲ ಅಂದರೆ ರಾಜೀನಾಮೆ ಕೊಡ್ತೇನೆ ಎಂದರು.

ಲಸಿಕೆ ವಿಚಾರವಾಗಿ ಎಲ್ಲಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಕೆಲವರು ಲಸಿಕೆ ಇದೇ ಅಂತಾರೆ, ಇನ್ನು ಕೆಲವರು ಇಲ್ಲ ಅಂತಾರೆ. ಇದು ನಮ್ಮ ರಾಜ್ಯದ ಈಗಿನ ಪರಿಸ್ಥಿತಿ ಆಗಿದೆ. ನನ್ನ ಪ್ರಕಾರ ಸರ್ಕಾರವೇ ಮನೆಮನೆಗೆ ಹೋಗಬೇಕು. ಪ್ರತಿ ಮನೆಗೆ ಹೋಗಿ ಜನರಿಗೆ ಲಸಿಕೆ ಹಾಕಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ಸದ್ಯದ ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತನಾಡಿ ಅವರು ಬಸವಣ್ಣನವರು ಹುಟ್ಟಿದ್ದ ಈ ನಾಡಲ್ಲಿ ಈಗ ಭ್ರಷ್ಟಾಚಾರ ನಡೆಯುತ್ತಿದೆ. ರಾಜಕಾರಣಿಗಳು ಸಹ ಭ್ರಷ್ಟರಾಗಿದ್ದಾರೆ. ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಕೊರೋನಾ ಮಾರಿ ತಾಂಡವವಾಡುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ 3ನೇ ಲಸಿಕೆ: ರಷ್ಯಾದ ಸ್ಪುಟ್ನಿಕ್ ವ್ಯಾಕ್ಸಿನ್ ವಿತರಣೆಗೆ ಅನುಮತಿ, ಬೆಲೆ ಕೂಡ ನಿಗದಿ

ರಾಜ್ಯದ ಜನರಿಗೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ರಾಜ್ಯದ ಮುಖ್ಯಮಂತ್ರಿ  ಬಿ.ಎಸ್​.ಯಡಿಯೂರಪ್ಪ, ಸಚಿವರು ವಿಫಲರಾಗಿದ್ದಾರೆ. ಜನರಿಗೆ ಕೇವಲ ಭರವಸೆಗಳನ್ನ ಕೊಡುತ್ತಿದ್ದಾರೆ. ಆದರೆ ಜನರಿಗೆ ಬೇಕಿರುವ ಯಾವುದೇ ಮೂಲಭೂತ ವ್ಯವಸ್ಥೆಗಳನ್ನ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು. ಹಾಗಾಗಿ ಈ ಸಂದರ್ಭದಲ್ಲಿ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೇನೆ. ರಾಜ್ಯದ ಜನರು ನನಗೆ ಅಧಿಕಾರ ಕೊಡಲಿ, 6 ತಿಂಗಳಿನಲ್ಲಿ ನಾನು ರಾಜ್ಯದ ಜನರ ಪರವಾಗಿ ಕೆಲಸ ಮಾಡುತ್ತೇನೆ. ಜನರ ಎಲ್ಲಾ ಕೆಲಸಗಳನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ. ಒಂದು ವೇಳೆ ನಾನು ಜನರ ಪರವಾಗಿ ಕೆಲಸ ಮಾಡಲು ಆಗದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ವಾಟಾಳ್ ನಾಗರಾಜ್ ಶಪಥ ಮಾಡಿದರು.

ವಾಟಾಳ್ ನಾಗರಾಜ್  ಅವರಿಗೆ ಒಂದು ವೇಳೆ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದರೆ ಕೊರೋನಾ ಸಂದರ್ಭವನ್ನ ಯಾವ ರೀತಿ ಎದುರಿಸುತ್ತಿದ್ದರೂ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಅದನ್ನ ಹೇಳಲು ಸಾಧ್ಯವಿಲ್ಲ. ಮೊದಲು ನನಗೆ ಅಧಿಕಾರ ಕೊಡಲಿ ಆ ನಂತರ ನನ್ನ‌ ಕಾರ್ಯವೈಖರಿ ಬಗ್ಗೆ ಮಾತನಾಡುತ್ತೇನೆ. ಕೊರೋನಾ ಪರಿಸ್ಥಿತಿಯನ್ನು ಎದುರಿಸಲು ನನಗೆ ದೂರದೃಷ್ಟಿ ಇದೆ. ರಾಜ್ಯದ ಜನರು ಎಲ್ಲಾ ವ್ಯಾಮೋಹಕ್ಕೆ ಬಲಿಯಾಗೋದನ್ನ ಬಿಟ್ಟು ನನಗೆ ಅಧಿಕಾರ ಕೊಡಲಿ ಎಂದರು. ಇನ್ನು ರಾಜ್ಯದಲ್ಲಿ ಜಾತ್ಯಾತೀತ ರಾಜಕಾರಣಿ ಯಾರಾದರೂ ಇದ್ದರೆ ಅದು ವಾಟಾಳ್ ನಾಗರಾಜ್ ಮಾತ್ರ ಎಂದರು. ಹೀಗಾಗಿ ರಾಜ್ಯದ ಜನತೆ ತನ್ನನ್ನು 6 ತಿಂಗಳುಗಳ ಕಾಲ ಸಿಎಂ ಮಾಡಬೇಕು ಎಂದರು

ವರದಿ : ಎ.ಟಿ‌.ವೆಂಕಟೇಶ್
Published by: Kavya V
First published: May 14, 2021, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories