ರಾಮನಗರ: ಕೊರೋನಾ ವಿಚಾರವಾಗಿ ಇಷ್ಟೆಲ್ಲ ಅವಾಂತರಕ್ಕೆ ರಾಜಕೀಯ ವಿರೋಧಿಗಳೇ ಕಾರಣ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ರಾಮನಗರ ಜಿಲ್ಲೆ ಚನ್ನಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ ಕೂಲಿ ಕಾರ್ಮಿಕರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್ ಅವರು, ರಾಜಕೀಯ ಲಾಭಕ್ಕಾಗಿ ಹಲವಾರು ರೀತಿಯಲ್ಲಿ ವಿರೋಧ ಪಕ್ಷದ ನಾಯಕರು ಮಾತನಾಡ್ತಿದ್ದಾರೆ. ಕುಮಾರಸ್ವಾಮಿ ಅವರು ನಾನು ಹೇಳಿದ ರೀತಿ ಲಾಕ್ ಡೌನ್ ಮಾಡ್ತಿಲ್ಲ ಅಂತಾರೆ. ಆದರೆ ಯಾರದ್ದೋ ಹೇಳಿಕೆ ಮೇಲೆ ನಾವು ಸರ್ಕಾರ ನಡೆಸಲು ಆಗಲ್ಲ ಎಂದು ತಿರುಗೇಟು ನೀಡಿದರು. ಜೊತೆಗೆ ನಾವು ತಜ್ಞರು, ನುರಿತ ವೈದ್ಯರ ಸಲಹೆ ಮೇರೆಗೆ ಲಾಕ್ ಡೌನ್ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಇನ್ನು ರೋಗ ಹರಡದಂತೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಲಾಠಿ ಬೀಸಬೇಡಿ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ ಪೊಲೀಸರಿಗೂ ಸಹನೆ ಕೆಡುತ್ತೆ. ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಇನ್ನು ಬೆಡ್ ಬ್ಲಾಕ್ ದಂಧೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆಯನ್ನು ಸಚಿವ ಸಿ.ಪಿ.ಯೋಗೇಶ್ವರ್ ಸಮರ್ಥನೆ ಮಾಡಿಕೊಂಡರು. ನಿಮ್ಮ ಪಕ್ಷದ ಶಾಸಕರೇ ಭಾಗಿಯಾಗಿರುವ ಬಗ್ಗೆ ವರದಿಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ನಾನು ಕಾಂಟ್ರವರ್ಸಿಗಳಿಗೆ ಉತ್ತರ ಕೊಡಲ್ಲ. ಆದರೆ ಪ್ರಾಕ್ಟಿಕಲ್ ಆಗಿ ಕೆಲಸ ಮಾಡುವ ಸಂದರ್ಭದಲ್ಲಿ ಕೆಲ ಲೋಪದೋಷಗಳು ಆಗುತ್ತವೆ. ಅದೆಲ್ಲವೂ ದೊಡ್ಡ ಸುದ್ದಿ ಅಲ್ಲ ಎಂದರು.
ಇದನ್ನು ಓದಿ: ಖಜಾನೆ ಖಾಲಿಯಾಗಿದ್ದರೆ ಸಾಲ ಮಾಡಿಯಾದರೂ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ; ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಯೋಗೇಶ್ವರ್, ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪ್ರಧಾನಮಂತ್ರಿ, ರಾಜ್ಯದ ಮುಖ್ಯಮಂತ್ರಿಯನ್ನು ಸಹ ಭ್ರಷ್ಟಾಚಾರಿಗಳು ಎನ್ನುವ ರೀತಿ ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ ಪಕ್ಷದ ಬಗ್ಗೆ ಯಾವುದೇ ರೀತಿಯ ಅಪಪ್ರಚಾರ ಇರಲಿಲ್ಲ. ಆದರೆ ಕೊರೋನಾ ವಿಚಾರವಾಗಿ ಕೆಲವರು ರಾಜಕೀಯವಾಗಿ ತಮ್ಮ ಲಾಭ ಪಡೆಯುತ್ತಿದ್ದಾರೆ. ಕೆಲವರು ಲಾಕ್ ಡೌನ್ ಬಗ್ಗೆ ಮಾತನಾಡುತ್ತಾರೆ. ಇನ್ನು ಕೆಲವರು ಲಸಿಕೆಯ ವಿಚಾರವಾಗಿಯೇ ಅಪಪ್ರಚಾರ ಮಾಡ್ತಿದ್ದಾರೆ. ಇದು ಬಿಜೆಪಿ ಪಕ್ಷದ ಲಸಿಕೆ ಎಂದು ಬಿಂಬಿಸುತ್ತಿದ್ದಾರೆ. ಇವತ್ತು ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಇಷ್ಟು ದೊಡ್ಡದಾಗಿ ಬೆಳೆದಿರೋದು ವಿರೋಧ ಪಕ್ಷದವರ ಅಪಪ್ರಚಾರದಿಂದ ಎಂದು ಯೋಗೇಶ್ವರ್ ಕಿಡಿಕಾರಿದರು.
ವರದಿ : ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ