Dog Attack- ಹೆಚ್​​ಡಿಕೆ ಕ್ಷೇತ್ರದಲ್ಲಿ ಬೀದಿನಾಯಿಗಳ ಹಾವಳಿ; ಪುಟ್ಟ ಮಕ್ಕಳ ಮೇಲೆ ನಿರಂತರ ದಾಳಿ

ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿರುವ ಇಂದಿರಾ ಕಾಟೇಜ್ ಬಡಾವಣೆಯ ಪ್ರತೀ ಗಲ್ಲಿಯಲ್ಲೂ ನಾಲ್ಕೈದು ನಾಯಿಗಳ ಗುಂಪಿದೆ. ಇಲ್ಲಿ ನಡೆದು ಹೋಗುವ ಜನರ ಮೇಲೆ ನಾಯಿಗಳು ದಾಳಿ ಮಾಡುವ ಘಟನೆ ಆಗಾಗ ನಡೆಯುತ್ತಲೇ ಇರುತ್ತದೆ.

ಚನ್ನಪಟ್ಟಣದ ಇಂದಿರಾ ಕಾಟೇಜ್ ಪ್ರದೇಶದ ಒಂದು ಬೀದಿ

ಚನ್ನಪಟ್ಟಣದ ಇಂದಿರಾ ಕಾಟೇಜ್ ಪ್ರದೇಶದ ಒಂದು ಬೀದಿ

  • Share this:
ರಾಮನಗರ: ಬೊಂಬೆನಾಡು ಚನ್ನಪಟ್ಟಣ ನಗರದ ಬಡಾವಣೆಯೊಂದರಲ್ಲಿ ಜನರು ಇದೀಗ ಬೀದಿಗಳಲ್ಲಿ ಓಡಾಡೋಕೆ ಹೆದುರುತ್ತಿದ್ದಾರೆ. ಮಕ್ಕಳನ್ನ ಹೊರಗೆ ಕಳುಹಿಸೋದಾಗಿರಲಿ ರಸ್ತೆಯಲ್ಲಿ ಆಟವಾಡೋಕೆ ಬೀದಿಗೆ ಬಿಡಲು ಸಹ ಹಿಂದೇಟು ಹಾಕ್ತಿದ್ದಾರೆ. ಹೌದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ‌ಸ್ವಕ್ಷೇತ್ರ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಇಂದಿರಾ ಕಾಟೇಜ್ ಎಂಬ ಬಡಾವಣೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಡಾವಣೆಯ ಜನರು ಇದೀಗ ಭಯದಲ್ಲಿ ಕಾಲ ಕಳೆಯುವಂತೆ ಆಗಿದೆ. ರಸ್ತೆಯಲ್ಲಿ ಒಂಟಿಯಾಗಿ ಓಡಾಡೋಕು ಸಹ ಹೆದರುತ್ತಿದ್ದಾರೆ. ಅದಕ್ಕೆ ಕಾರಣ ಕಳ್ಳ ಕಾಕರೋ ದರೋಡೆಕೋರರ ಹಾವಳಿಯಲ್ಲ. ಚನ್ನಪಟ್ಟಣದ ನಗರಸಭೆ ವ್ಯಾಪ್ತಿಗೆ ಒಳಪಡುವ ಇಂದಿರಾ ಕಾಟೇಜ್ ಎಂಬ ಬಡಾವಣೆಯಲ್ಲಿ ಹೆಚ್ಚಾಗಿರೋ ಬೀದಿ ನಾಯಿಗಳ ಕಾಟ. ಇದೀಗ ಈ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬಡಾವಣೆಯ ಪ್ರತಿ ಬೀದಿಯಲ್ಲೂ ಏನಿಲ್ಲಾ ಅಂದರೂ ಕನಿಷ್ಠ ಐದರಿಂದ ಹತ್ತು ನಾಯಿಗಳಿವೆ. ಇದು ಇಲ್ಲಿನ ನಿವಾಸಿಗಳಿಗೆ ಭಾರೀ ಸಮಸ್ಯೆಯಾಗಿದೆ. ಇದರಿಂದಾಗಿ ಇಲ್ಲಿನ ಜನ ಒಬ್ಬೊಂಟಿಯಾಗಿ ರಸ್ತೆಯಲ್ಲಿ ತಿರುಗಾಡಲು ಹೆದರುತ್ತಿದ್ದಾರೆ. ತಮ್ಮ ಮಕ್ಕಳನ್ನು ಬೀದಿಯಲ್ಲಿ ಆಟವಾಡಲು ಬಿಡಲು ಪೋಷಕರು ಹೆದರುತ್ತಿದ್ದಾರೆ. ಚನ್ನಪಟ್ಟಣ ನಗರಸಭೆ ವಿರುದ್ಧ ಇಲ್ಲಿನ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.‌

ಈ ಇಂದಿರಾ ಕಾಟೇಜ್ ಬಡಾವಣೆಯಲ್ಲಿ ಕಳೆದ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇತ್ತೀಚಿಗಷ್ಟೆ ಇದೇ ಬಡಾವಣೆಯ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಕಳೆದ ಮೂರು ದಿನಗಳಿಂದ ಐದು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ. ನಾಯಿ ಕಡಿತಕ್ಕೆ ಒಳಗಾದ ಮಕ್ಕಳಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಸ್ಥಳಕ್ಕೆ ಬಂದಿದ್ದ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ.‌ ಸಮಸ್ಯೆ ಪರಿಹರಿಸುತ್ತೇವೆಂದು ತಿಳಿಸಿದ್ದಾರೆ.

ಇದನ್ನೂ ಓದಿ: Weekend Curfew- ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಸಾಧ್ಯತೆ; ಗಣೇಶ, ಮೊಹರಂ ಹಬ್ಬಗಳಿಗೆ ನಿರ್ಬಂಧ

ಒಟ್ಟಾರೆ, ಇದೀಗ ಚನ್ನಪಟ್ಟಣದಲ್ಲಿ ಬೀದಿ ನಾಯಿಗಳ ಹೆಚ್ಚಾಗಿದ್ದು ಜನರ ನೆಮ್ಮದಿ ಹಾಳಾಗಿದೆ. ಸಾಕಷ್ಟು ಕಡೆ ಬೀದಿ ನಾಯಿಗಳು ದಾಳಿ ನಡೆಸಿವೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ, ನಾಯಿಗಳ ಹಾವಳಿ ತಪ್ಪಿಸಿ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡ್ತಾರಾ ಅನ್ನೋದನ್ನ ನೋಡಬೇಕಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: