ಚನ್ನಪಟ್ಟಣದ ತಮಿಳು ಕಾಲೋನಿಯಲ್ಲಿ ಮನೆಗಳ ತೆರವಿಗೆ ರೈಲ್ವೆ ಇಲಾಖೆ ನೋಟೀಸ್
ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿರುವ ತಮಿಳು ಕಾಲೊನಿಯಲ್ಲಿ ಕಳೆದ 30 ವರ್ಷಗಳಿಂದ ವಾಸವಿರುವ ಕೆಲ ಜನರಿಗೆ ಮನೆ ತೆರವುಗೊಳಿಸುವಂತೆ ರೈಲ್ವೆ ಇಲಾಖೆ ನೋಟೀಸ್ ಜಾರಿ ಮಾಡಿದೆ.
ರಾಮನಗರ: ಈ ಜನರು ಸರಿಸುಮಾರು 30 ವರ್ಷಗಳಿಂದ ಮನೆಕಟ್ಟಿಕೊಂಡು ವಾಸ ಮಾಡ್ತಿದ್ದಾರೆ. ಆದರೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಈಗ ಇವರ ಮನೆಗಳನ್ನ ತೆರವು ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ ನಮಗೆ ಬದಲಿ ಜಾಗದ ವ್ಯವಸ್ಥೆ ಮಾಡಿಕೊಡಿ ನಂತರ ಮನೆಗಳನ್ನ ತೆರುವು ಮಾಡಿ ಎಂದು ನಿವಾಸಿಗಳು ನ್ಯೂಸ್ 18 ಕನ್ನಡದ ಮೂಲಕ ಒತ್ತಾಯಿಸಿದ್ದಾರೆ. ಈ ಕುರಿತ ವರದಿ ಇದು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ರಸ್ತೆಯ ಪಕ್ಕದಲ್ಲಿರುವ ತಮಿಳು ಕಾಲೋನಿಯಲ್ಲಿ 6 ಮನೆಗಳನ್ನ ತೆರವು ಮಾಡುವುದಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ಮನೆಗಳ ಬಾಗಿಲಿಗೆ ನೋಟೀಸ್ ಚೀಟಿ ಅಂಟಿಸಿದ್ದಾರೆ. ಈ ನೋಟೀಸ್ ಚೀಟಿಗೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ವೆ ನಂ. 22/3 ರಲ್ಲಿ 05 ಗುಂಟೆ, 22/4 ರಲ್ಲಿ 12 ಗುಂಟೆ ಜಾಗ ರೈಲ್ವೆ ಇಲಾಖೆಗೆ ಸೇರಿದೆ. ಆದರೆ ಈ ಹಿಂದೆ ನಮ್ಮ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಆದರೆ ಈಗ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ 6 ಮನೆಗಳನ್ನ ತೆರುವು ಮಾಡಿ ಕಾಮಗಾರಿ ಪ್ರಾರಂಭ ಮಾಡಬೇಕಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆಂದು ಸ್ಥಳೀಯ ನಗರಸಭೆ ಪೌರಾಯುಕ್ತರು ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.
ಇಲ್ಲಿ ವಾಸ ಮಾಡ್ತಿರುವ ನಿವಾಸಿಗಳು ಈಗಾಗಲೇ ಹೈಕೋರ್ಟ್ ಮೊರೆಹೋಗಿದ್ದು ಮನೆಗಳ ತೆರುವು ಕ್ರಮಕ್ಕೆ ತಡೆಯಾಜ್ಞೆ ತಂದಿದ್ದಾರೆ. ಜೊತೆಗೆ ಚನ್ನಪಟ್ಟಣ ನಗರಸಭೆಯಲ್ಲಿ ಇವರ ಮನೆಗಳ ಜಾಗಕ್ಕೆ ವಾಸದ್ಱಢೀಕರಣ ಪತ್ರ ನೀಡಲಾಗಿದೆ. ಖಾತೆ ಸಹ ಆಗಿದೆ, ಪ್ರತಿಯೊಬ್ಬರು ಕಂದಾಯ ಕಟ್ಟಿದ್ದಾರೆ. ಹಾಗಾಗಿ ತಕ್ಷಣಕ್ಕೆ ಮನೆಗಳನ್ನ ತೆರುವು ಮಾಡಲು ಆಗುವುದಿಲ್ಲ ಎಂದು ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಶಿವನಾಂಕರೇಗೌಡ ತಿಳಿಸಿದ್ದಾರೆ.
ಇನ್ನು ಈ ವಿಚಾರವಾಗಿ ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಇದೇ ಸ್ಥಳದಲ್ಲಿ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲದಿಂದ ವಾಸದಲ್ಲಿದ್ದೇವೆ. ಸ್ಲಂಬೋರ್ಡ್ ನಿಂದ ನಮಗೆ ಮನೆಗಳನ್ನ ಕಟ್ಟಿಕೊಡಲಾಗಿದೆ. ಜೊತೆಗೆ ಚನ್ನಪಟ್ಟಣ ನಗರಸಭೆಯಲ್ಲಿ ನಮ್ಮ ಮನೆ ಹಾಗೂ ಜಾಗಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಇವೆ. ಕಂದಾಯ, ವಿದ್ಯುತ್ ಕಟ್ಟಿರುವ ದಾಖಲೆ ನಮ್ಮಲಿ ಇದೆ. ಆದರೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾತ್ರ ನಮಗೆ ಯಾವುದೇ ರೀತಿಯ ಮಾಹಿತಿ ನೀಡದೇ ಮನೆಗಳನ್ನ ತೆರುವು ಮಾಡುವುದಾಗಿ ಮನೆಗಳಿಗೆ ನೋಟೀಸ್ ನೀಡಿದ್ದಾರೆ. ನೀವು ವಾಸಮಾಡುತ್ತಿರುವ ಜಾಗ ನಮ್ಮದು ಎನ್ನುತ್ತಿದ್ದಾರೆ. ಆದರೆ ನಮಗೆ ಪರ್ಯಾಯವಾಗಿ ಜಾಗದ ಪರಿಹಾರ ನೀಡಿ ಎಂದರೆ ಒಪ್ಪುತ್ತಿಲ್ಲ. ಆದರೆ ನಮಗೆ ಪರಿಹಾರ ಸಿಗದೇ ಯಾವುದೇ ಕಾರಣಕ್ಕೂ ಇಲ್ಲಿಂದ ಮನೆ ಖಾಲಿ ಮಾಡುವುದಿಲ್ಲ ಎಂದಿದ್ದಾರೆ.
ಒಟ್ಟಾರೆ ಸ್ಥಳೀಯವಾಗಿ 30 ವರ್ಷಕ್ಕೂ ಹೆಚ್ಚು ಕಾಲದಿಂದ ವಾಸವಾಗಿದ್ದಾರೆ ಈ ಜನರು. ಜೊತೆಗೆ ತಮ್ಮ ಜಾಗ ಹಾಗೂ ಮನೆಗೆ ಅವಶ್ಯಕವಾಗಿರುವ ಎಲ್ಲಾ ದಾಖಲೆ ಇದ್ದರೂ ಸಹ ರೈಲ್ವೆ ಇಲಾಖೆ ಅಧಿಕಾರಿಗಳು ಮನೆಗಳನ್ನ ತೆರುವು ಮಾಡುವುದಾಗಿ ನೋಟೀಸ್ ನೀಡಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳ ವರ್ಗ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರದ ಸೂತ್ರ ಕಂಡುಕೊಳ್ಳಬೇಕಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ