ರಾಮನಗರ: ಹಾರೋಹಳ್ಳಿ ( Harohalli) ಸಮೀಪದ ಬಿ.ಡಬ್ಲ್ಯು.ಎಸ್. ಎಸ್.ಬಿ. ಮುಂಭಾಗ ಗುಂಡಿ ಬಿದ್ದ ರಸ್ತೆಯಲ್ಲಿ (Potholes) ನಿತ್ಯ ಅಪಘಾತಗಳಾಗಿ (Accident) ಸಾರ್ವಜನಿಕರು ಸಾವು-ನೋವು ಅನುಭವಿಸುತ್ತಿದ್ದರು. ಇಂತಹ ಗುಂಡಿಯನ್ನು ಮುಚ್ಚುವ ಮೂಲಕ ಹಾರೋಹಳ್ಳಿಯ ಇಬ್ಬರು ಯುವ ಪೊಲೀಸರು (Ramanagara Police) ಆದರ್ಶ ಮೆರೆಯುವ ಮೂಲಕ ಸುಗಮ ರಸ್ತೆ ಸಂಚಾರಕ್ಕೆ ನೆರವಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 209ರ ಕನಕಪುರ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿನ ಬಿ.ದಯಾನಂದ ಸಾಗರ ಆಸ್ಪತ್ರೆಯಿಂದ ಬಿ.ಡಬ್ಲ್ಯು.ಎಸ್.ಎಸ್.ಬಿ. ವರೆಗೂ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ವೈಯಕ್ತಿಕವಾಗಿ ಕಾಂಕ್ರಿಟ್ ಬೆರೆಸಿದ ಸಿಮೆಂಟನ್ನು ಚೀಲದಲ್ಲಿ ತಂದು ಗುಂಡಿಗಳಿಗೆ ತುಂಬುವ ಮೂಲಕ ಗುಂಡಿಯನ್ನು ಮುಚ್ಚಿದ್ದಾರೆ. ಇದರಿಂದ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಇಬ್ಬರು ಯುವ ಪೊಲೀಸ್ ತಮ್ಮ ಹೆಸರನ್ನೂ ಸಹ ಹೇಳಲು ಇಚ್ಛಿಸದೇ ಇಂತಹ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿರುವುದು ಅವರ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.
ರಸ್ತೆ ಗುಂಡಿ ಮುಚ್ಚಿದ ಯುವ ಪೊಲೀಸರು
ಇತ್ತೀಚೆಗೆ ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಸಾವು-ನೋವುಗಳನ್ನು ಅನುಭವಿಸುತ್ತಿದ್ದರು. ಮಂಗಳವಾರ ರಾತ್ರಿಯೂ ಸಹ ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಸವಾರರು ಗುಂಡಿ ಕಾಣದೇ ಕತ್ತಲಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದರು. ಇವರನ್ನು ಹಾರೋಹಳ್ಳಿ ಪೊಲೀಸರೇ ದಯಾನಂದ ಸಾಗರ ಆಸ್ಪತ್ರೆಗೆ ಸೇರಿಸಿದ್ದರು. ಅಪಘಾತಕ್ಕೆ ಆಹ್ವಾನ ಉಂಟುಮಾಡುತ್ತಿದ್ದ ಇಂತಹ ಗುಂಡಿಗಳನ್ನು ಸ್ವತಃ ಇಬ್ಬರು ಯುವ ಪೊಲೀಸರು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ನೆರವಾಗಿದ್ದಾರೆ.
ಇದನ್ನೂ ಓದಿ: Naked Thief: ಕಳ್ಳನ ಬೆತ್ತಲೆ ಫೋಟೋಗಳ ಫ್ಲೆಕ್ಸ್ ಹಾಕಿದ ಅಂಗಡಿ ಮಾಲೀಕ! ರಸವತ್ತಾದ ಸುದ್ದಿ ಇಲ್ಲಿದೆ ನೋಡಿ
ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ 5-6 ವರ್ಷದಿಂದ ಕುಂಟುತ್ತಾ ಸಾಗಿದ್ದು, ಈ ಕಾಮಗಾರಿಯಿಂದ ಜನರು ಹಲವಾರು ಕಡೆ ರಸ್ತೆ ಅಪಘಾತದಲ್ಲಿ ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಹೊಣೆಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ಇಲ್ಲಿನ ಗುತ್ತಿಗೆದಾರ ಮತ್ತು ತುಂಡು ಗುತ್ತಿಗೆದಾರರ ಕಾಮಗಾರಿ ಅವ್ಯವಹಾರದಲ್ಲಿ ಸಾರ್ವಜನಿಕರು ಈ ರೀತಿ ನೋವು ಅನುಭವಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಮನಗರದಲ್ಲಿ ಜನಸ್ನೇಹಿ ಪೊಲೀಸರು, ಹಲವು ಸಾಮಾಜಿಕ ಕಾರ್ಯ :
ರೇಷ್ಮೆನಗರಿ ರಾಮನಗರದಲ್ಲಿ ಜನಸ್ನೇಹಿ ಪೊಲೀಸರು ಇದ್ದಾರೆಂಬುದು ಈಗಾಗಲೇ ಸಾಕಷ್ಟು ಬಾರಿ ಸಾಬೀತಾಗಿದೆ. ಈಗ ರಾಮನಗರದ ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರಳಿರವರು ಈ ಹಿಂದೆ ಹಾರೋಹಳ್ಳಿ ಠಾಣೆಯ ಪಿಎಸ್ಐ ಆಗಿದ್ದ ಸಂದರ್ಭದಲ್ಲಿ ಕೊರೊನಾ ಮಹಾಮಾರಿ ಆವರಿಸಿದ್ದ ವೇಳೆ ಅದೆಷ್ಟೋ ಜನರಿಗೆ ಉಚಿತವಾಗಿ ಆಹಾರದ ಪ್ಯಾಕೆಟ್ ಗಳನ್ನ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ತಿಂಗಳುಗಳ ಕಾಲ ಈ ಸೇವೆ ಮಾಡಿ ಇಲಾಖೆಯ ಗಮನಸೆಳೆದಿದ್ದರು. ಅದೇ ರೀತಿ ಆಗಿನ ಎಸ್ಪಿ ಆಗಿದ್ದ ಅನೂಪ್ ಶೆಟ್ಟಿ, ಗಿರೀಶ್ ಸಹ ಹಲವು ಜನಪರ ಕಾರ್ಯಕ್ರಮ ಮಾಡುವ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದರು.
ಪ್ರಚಾರ ಬಯಸದ ಎಸ್ಪಿ ಸಂತೋಷ್ ಬಾಬು, ಖಡಕ್ ಕೆಲಸಗಾರ
ಈಗಿರುವ ಎಸ್ಪಿ ಸಂತೋಷ್ ಬಾಬು ಯಾವುದೇ ಪ್ರಚಾರ ಪಡೆಯದೇ ಉತ್ತಮವಾಗಿ ಕೆಲಸ ಮಾಡುವ ವ್ಯಕ್ತಿ ಎನಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಇವರು ಅಧಿಕಾರಕ್ಕೆ ಬಂದ ದಿನದಿಂದಲೂ ಸಹ ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡ್ತಿದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಹೆಡೆಮುರಿಕಟ್ಟಿ ಕಟ್ಟುವ ಕೆಲಸವನ್ನು ಮಾಡ್ತಿದ್ದಾರೆ ಎಸ್ಪಿ ಸಂತೋಷ್ ಬಾಬು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ