ರಾಮನಗರದಲ್ಲಿ ನಿಖಿಲ್ ಹವಾ; ಚನ್ನಪಟ್ಟಣದಲ್ಲಿ ಮುಖಂಡರ ಸಾವಿನಿಂದ ಮಾಜಿ ಸಿಎಂ ಹೆಚ್.ಡಿ.ಕೆ ಹಿಮ್ಮುಖ

ಕ್ಷೇತ್ರದಲ್ಲಿ ಬಿಡುವಿಲ್ಲದೇ ಜನಸೇವೆ ನಡೆಸುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ

ನಿಖಿಲ್​-ಎಚ್​ಡಿಕೆ

ನಿಖಿಲ್​-ಎಚ್​ಡಿಕೆ

  • Share this:
ರಾಮನಗರ (ಮೇ. 12):  ಕೊರೋನಾ ಎರಡನೇ ಅಲೆ ಪ್ರಾರಂಭವಾದ ದಿನದಿಂದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕಿ ಹಾಗೂ ಪತ್ನಿ ಅನಿತಾಕುಮಾರಸ್ವಾಮಿ ನಿರಂತರ ಜನಸೇವೆ ನಡೆಸುತ್ತಿದ್ದಾರೆ . ಆದರೆ ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ಮಾತ್ರ ಚನ್ನಪಟ್ಟಣ ಕ್ಷೇತ್ರದ ಕಡೆಗೆ ಮುಖ ಮಾಡಿಲ್ಲ. ಒಂದೆರಡು ಬಾರಿ ಕ್ಷೇತ್ರದ ತಾಲೂಕು ಆಸ್ಪತ್ರೆಗೆ ಬಂದಿದ್ದು, ಒಮ್ಮೆ ಸೋಂಕಿತರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದು ಹೊರತಾಗಿ ಕುಮಾರಸ್ವಾಮಿ ಹೇಳಿಕೊಳ್ಳುವ ಮಟ್ಟಿಗೆ ಸಕ್ರಿಯರಾಗಿಲ್ಲ. ಆದರೆ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರು ಬರಬೇಕು, ಕಷ್ಟದ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಗೆ ನೆರವಾಗಬೇಕೆಂಬ ಕೂಗು ಪ್ರಬಲವಾಗಿಯೇ ಎದ್ದಿದೆ.

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಹವಾ ಜೋರು

ಕೊರೋನಾ ಎರಡನೇ ಅಲೆ ಪ್ರಾರಂಭವಾದ ದಿನದಿಂದಲೂ ಸಹ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೋರಾಗಿ ಓಡಾಡುತ್ತಿದ್ದಾರೆ. ಕ್ಷೇತ್ರದ ಜನರ ಅನುಕೂಲಕ್ಕೆಂದು 2 ಆಂಬುಲೆನ್ಸ್ ಗಳನ್ನ ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ 1 ಸಾವಿರಕ್ಕೂ ಹೆಚ್ಚು ಜನ ಆಶಾಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2 ಸಾವಿರ ರೂ ಹಣದ ಜೊತೆಗೆ ಫುಡ್ ಕಿಟ್, ಹೆಲ್ತ್ ಕಿಟ್ ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ಕೊರೋನಾ ವಾರಿಯರ್ಸ್ ಗೆ ನೆರವಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಡುವಿಲ್ಲದೇ ಜನಸೇವೆ ನಡೆಸುತ್ತಿರುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ

ಚನ್ನಪಟ್ಟಣದಿಂದ ದೂರ ಉಳಿದ ಹೆಚ್‌.ಡಿ.ಕುಮಾರಸ್ವಾಮಿ

ಕೊರೋನಾ ಮೊದಲನೇ ಅಲೆ ಬಂದ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯವೇ ಮೆಚ್ಚುವ ಕೆಲಸ ಮಾಡಿದ್ದರು. 2 ತಿಂಗಳುಗಳ ಕಾಲ ಬಡವರು, ನಿರ್ಗತಿಕರಿಗೆ ದಿನನಿತ್ಯ ಬೆಳಗ್ಗೆ, ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದರು. ದಿನನಿತ್ಯ ಹೆಚ್.ಡಿ. ಕೆ ಅನ್ನ ದಾಸೋಹ ಹೆಸರಿನಲ್ಲಿ 5 ಸಾವಿರಕ್ಕೂ ಹೆಚ್ಚು ಜನರಿಗೆ ಊಟ ನೀಡಲಾಗಿತ್ತು. ಇದರ ಜೊತೆಗೆ ರಾಮನಗರ - ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಉಚಿತ ಫುಡ್ ಕಿಟ್ ನೀಡುವ ಮೂಲಕ ಕುಮಾರಸ್ವಾಮಿ ಸಮಾಜಮುಖಿ ಕೆಲಸ ಮಾಡಿದ್ದರು. ಇದರ ಜೊತೆಗೆ ಮಾಸ್ಕ್, ಸ್ಯಾನಿಟೈಜರ್ ಜೊತೆಗೆ ಕೆಲ ಜನರಿಗೆ ವಯಕ್ತಿಕವಾಗಿಯೂ ಸಹಾಯ ಮಾಡಿದ್ದ ಉದಾಹರಣೆಯೂ ಇದ್ದಾವೆ.ಆದರೆ, ಯಾಕೋ ಏನೋ ಕೊರೋನಾ ಎರಡನೇ ಅಲೆ ಪ್ರಾರಂಭವಾದ ಬಳಿಕ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ದೂರವೇ ಉಳಿದಿದ್ದಾರೆ. ಪಕ್ಕದ ರಾಮನಗರ ಕ್ಷೇತ್ರದ ಜನರಿಗೆ ಸಿಗುತ್ತಿರುವ ಅನುಕೂಲ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಸಿಗುತ್ತಿಲ್ಲ ಎಂಬುದು ಸ್ವತಃ ಜೆಡಿಎಸ್ ಮುಖಂಡರೇ ಚರ್ಚೆ ಮಾಡ್ತಿದ್ದಾರೆ.

ಚನ್ನಪಟ್ಟಣದ ಕಾರ್ಯಕರ್ತರು ಹೆಚ್ಚು ಸಕ್ರಿಯ : ಅನಿತಾಕುಮಾರಸ್ವಾಮಿ

ಚನ್ನಪಟ್ಟಣದಲ್ಲಿ ತಮ್ಮ ಕಾರ್ಯಕರ್ತರ ಕುರಿತು ‌ ಕಳೆದ ಎರಡು ದಿನಗಳ ಹಿಂದಷ್ಟೇ ಮಾತನಾಡಿದ್ದ ಅನಿತಾ ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚು ಜಾಗೃತರಿದ್ದಾರೆ. ‌ ಬೇರೆಡೆ ನಾವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಆದರೆ ಚನ್ನಪಟ್ಟಣದಲ್ಲಿ ಪ್ರತಿ ಹಳ್ಳಿಯಲ್ಲಿಯೂ ಸಹ ನಮ್ಮ ಜೆಡಿಎಸ್ ಕಾರ್ಯಕರ್ತರು ಬಹಳ ಚುರುಕಾಗಿದ್ದಾರೆ. ಅವರವರ ಗ್ರಾಮದ ಜನರಿಗೆ ಅವರೇ ವಯಕ್ತಿಕವಾಗಿ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಕುಮಾರಸ್ವಾಮಿಯವರಿಗೆ ಜವಾಬ್ದಾರಿ ಕಡಿಮೆ ಎಂದಿದ್ದಾರೆ. ಆದರೂ ಸಹ ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರದ ಕಡೆಗೆ ಗಮನಹರಿಸಬೇಕೆಂಬ ಕೂಗೂ ಕೇಳಿ ಬಂದಿದೆ.

ಜೆಡಿಎಸ್ ಮುಖಂಡರ ಸಾವಿನಿಂದ ಹೆಚ್ಡಿಕೆ ಹಿಮ್ಮುಖ

ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿರಲು ಒಂದು ಪ್ರಮುಖ ಕಾರಣವಿದೆ ಎಂದು ಜೆಡಿಎಸ್ ನ ಬಲ್ಲಮೂಲಗಳು ತಿಳಿಸಿವೆ. ಕುಮಾರಸ್ವಾಮಿಯವರು ಕ್ಷೇತ್ರಕ್ಕೆ ಬಂದರೆ ಸಾವಿರಾರು ಜನರು ಜಮಾವಣೆಯಾಗ್ತಾರೆ. ಈ ಸಂದರ್ಭದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿರುವ ಹಿನ್ನೆಲೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯಾಗಲಿದೆ. ಜೊತೆಗೆ ಈಗಾಗಲೇ ಕ್ಷೇತ್ರದಲ್ಲಿ 15 ಕ್ಕೂ ಹೆಚ್ಚು ಜನ ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರೇ ಸೋಂಕಿನಿಂದ ಸಾವನ್ನಪ್ಪಿರುವ ಹಿನ್ನೆಲೆ ಕುಮಾರಸ್ವಾಮಿರವರೇ ಸ್ವಲ್ಪ ದಿನಗಳ ಕಾಲ ಕ್ಷೇತ್ರದ ಕಡೆಗೆ ಬಾರದಿರಲು ನಿರ್ಧರಿಸಿದ್ದಾರೆಂಬ ಮಾಹಿತಿಯೂ ಸಹ ನ್ಯೂಸ್ 18 ಕನ್ನಡಗೆ ಲಭ್ಯವಾಗಿದೆ.

ವರದಿ : ಎ.ಟಿ.ವೆಂಕಟೇಶ್
Published by:Seema R
First published: