ರಾಮನಗರ: ಕಾಂಗ್ರೆಸ್ಸಿಗರು ಮೇಕೆದಾಟು ಪಾದಯಾತ್ರೆಗೆ ಮುಂದಾಗಿರುವ ಸಂದರ್ಭದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ (CM Bommai) ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಮುಂದಾಗಿದ್ದರು. ಆದರೆ ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಹೈಡ್ರಾಮಾವೇ ನಡೆದು ಹೋಯಿತು. ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ (Minister CN Ashwath Narayan) ಹಾಗೂ ಸಂಸದ ಡಿಕೆ ಸುರೇಶ್ (MP DK Suresh) ಮಧ್ಯೆ ವೇದಿಕೆ ಮೇಲೆಯೇ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ಬಿಡ್ತು. ಅಷ್ಟರಲ್ಲಿ ವೇದಿಕೆಯಲ್ಲಿದ್ದ ಇತರರು, ಪೊಲೀಸರು ಬಂದು ಇಬ್ಬರನ್ನು ತಡೆದರು. ಸಚಿವ ಅಶ್ವಥ್ ನಾರಾಯಣ ಭಾಷಣ ಮಾಡುತ್ತಿದ್ದಾಗ ಅವರ ಮಾತಿಗೆ ಕೆರಳಿದ ಸಂಸದ ಡಿಕೆ ಸುರೇಶ್ ಅವರ ಬಳಿಯೇ ಬಂದು ಸಾಕು ಮಾಡು ನಿನ್ನ ಮಾತು ಎಂದು ಗದರಿದರು. ಇಬ್ಬರ ಮಧ್ಯೆ ಜಟಾಪಟಿ ನಡೆಯಿತು. ಇಬ್ಬರನ್ನು ನೆರೆದಿದ್ದವರು ತಡೆದರು.
ಡಿಕೆ ಸೋದರರನ್ನು ಗುರಿಯಾಗಿಸಿಕೊಂಡು ಭಾಷಣ
ಮೊದಲಿಗೆ ಕಾರ್ಯಕ್ರಮ ಶುರುವಾಗುತ್ತಿದ್ದಂತೆ ದಲಿತ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಡಾ.ಅಂಬೇಡ್ಕರ್ ಪ್ರತಿಮೆಗೆ ಸಂಸದ ಡಿಕೆ ಸುರೇಶ್ ಅವರಿಂದ ಪುಷ್ಪಾರ್ಚನೆ ಮಾಡಿಸಿಲ್ಲ ಎಂದು ತಕರಾರು ತೆಗೆದ ದಲಿತ ಮುಖಂಡರು ಸಿಎಂ ಕಾರ್ಯಕ್ರಮಕ್ಕೆ ಆಗಮಿಸಿದಾಗ ಕಪ್ಪು ಪಟ್ಟಿ ಪ್ರದರ್ಶಿಸಿದರು. ಸಚಿವ ಭಾಷಣ ಮಾಡಿದಾಗಲು ದಿಕ್ಕಾರ ಕೂಗಿದರು. ಇದರಿಂದ ಕೆರಳಿದ ಸಚಿವ ಅಶ್ವಥ್ ನಾರಾಯಣ, ಡಿಕೆ ಸೋದರರನ್ನು ಗುರಿಯಾಗಿಸಿಕೊಂಡು, ನಾವು ಅಭಿವೃದ್ಧಿ ಮಾಡೋರು. ಯಾರು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಬ್ಬರದಿಂದ ಭಾಷಣ ಮಾಡಿದರು.
‘ಗಂಡಸ್ತನ’ದ ಗಲಾಟೆ..
ಸಚಿವ ಅಶ್ವಥ್ ನಾರಾಯಣ ಮಾತಿನಿಂದ ಕೆರಳಿದ ಡಿಕೆ ಸುರೇಶ್ ವೇದಿಕೆ ಮೇಲೆ ನೇರವಾಗಿ ಬಂದು ತೋರಿಸು ನಿನ್ನ ಅಭಿವೃದ್ಧಿನಾ ಎಂದು ಸವಾಲೆಸೆದರು. ಈ ವೇಳೆ ಗಂಡಸ್ತನ ತೋರಿಸ್ತೀಯಾ ಎಂಬ ಮಾತುಗಳು ಕೇಳಿ ಬಂತು. ನೆರದಿದ್ದವರು ಬಂದು ತಡೆದ ಬಳಿಕವೂ ತಣ್ಣಗಾಗದ ಸಂಸದ ಡಿಕೆ ಸುರೇಶ್ ಕಾರ್ಯಕ್ರಮದ ವೇದಿಕೆ ಮೇಲೆ ಧರಣಿ ನಡೆಸಲು ಮುಂದಾದರು. ಡಿಕೆ ಸುರೇಶ್ ಅಸಮಾಧಾನಕ್ಕೆ ಎಂಎಲ್ಸಿ ರವಿ ಕೂಡ ಸಾಥ್ ನೀಡಿದರು. ಅಶ್ವಥ್ ನಾರಾಯಣ ಭಾಷಣ ಮಾಡುತ್ತಿದ್ದ ಮೈಕನ್ನು ಕಿತ್ತುಕೊಂಡು ಅವರೊಂದಿಗೆ ವಾಗ್ವಾದಕ್ಕಿಳಿದರು.
![]()
ಎಂಎಲ್ಸಿ ರವಿರಿಂದಲೂ ಆಕ್ಷೇಪ
ಪೆಚ್ಚು ಪೆಚ್ಚಾದ ಸಿಎಂ
ಗಲಾಟೆ ನಡುವೆಯೇ ಭಾಷಣ ಆರಂಭಿಸಿದ ಸಿಎಂ ಬೊಮ್ಮಾಯಿ, ನಾನೇನು ಮಾಡಿದೆ. ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ ಎಂದು ಪೆಚ್ಚು ಮೊರೆ ಹಾಕಿಕೊಂಡೇ ಮಾತನಾಡಿದರು. ತುಂಬಾ ಪ್ರೀತಿಯಿಂದ ನಾನು ಬಂದಿದ್ದೇನೆ, ಕೊಡುಗೆ ಕೊಡಲು ನಾನು ಬಂದಿದ್ದೇನೆ. ಏನನ್ನೋ ತೆಗೆದುಕೊಂಡು ಹೋಗಲು ಬಂದಿಲ್ಲ ಎಂದರು. ಸಿಎಂ ಭಾಷಣ ಶುರು ಮಾಡಿದಾಗಲು ವೇದಿಕೆ ಮುಂಭಾಗ ಗಲಾಟೆ ನಡೆಯುತ್ತಲೇ ಇತ್ತು. ಇದರಿಂದ ಸಿಎಂ ಒಂದೆರಡು ನಿಮಿಷವಷ್ಟೇ ಮಾತನಾಡಿ ಸುಮ್ಮನಾದ್ರು. ಕಾರ್ಯಕ್ರಮ ಗಲಾಟೆಯಿಂದ ಗೊಂದಲದ ಗೂಡಾಯಿತು. ಕಾಂಗ್ರೆಸ್ ವರ್ಸಸ್ ಬಿಜೆಪಿ ಎನ್ನುವಂತಾಗಿ ಕೆಲವರು ಮೋದಿ ಪರ ಜೈಕಾರ ಕೂಗಿದರೆ, ಕೆಲವು ಡಿಕೆ ಶಿವಕುಮಾರ್ ಪರ ಜೈಕಾರ ಕೂಗಿದರು. ಸಿಎಂ ಬೊಮ್ಮಾಯಿ ಇಡೀ ಗಲಾಟೆಯಿಂದ ಮುಜುಗರಕ್ಕೆ ಒಳಗಾಗಿದಂತು ನಿಜ.
![]()
ವೇದಿಕೆ ಮೇಲೆ ಸಂಸದ ಡಿಕೆ ಸುರೇಶ್ ಧರಣಿ
ಕಾರ್ಯಕ್ರಮದ ಗಲಾಟೆಯಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದಂತು ನಿಜ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಪೊಲೀಸರು, ಎಲ್ಲರನ್ನು ಚದುರಿಸುವ ಕಾರ್ಯ ಮಾಡಿದರು. ಘೋಷಣೆ, ದಿಕ್ಕಾರಗಳನ್ನು ಕೂಗುತ್ತಿದ್ದ ಕಾರ್ಯಕರ್ತರನ್ನು ಹೊರ ಕಳುಹಿಸಿದರು. ಒಟ್ಟಾರೆ ಸಚಿವ-ಸಂಸದರ ವೇದಿಕೆ ಗಲಾಟೆ ಚರ್ಚೆ ಗ್ರಾಸವಾಗಿದೆ. ಗಲಾಟೆ ಬಗ್ಗೆ ಇಬ್ಬರೂ ನಾಯಕರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ