ರಾಮನಗರ/ಬಳ್ಳಾರಿ: ರಾಜ್ಯದ ಪಾಲಿಗೆ ಇಂದು ನಿಜಕ್ಕೂ ಕರಾಳ ಶನಿವಾರ (Black Saturday). ಯಾಕೆಂದರೆ ರಾಮನಗರ (Ramanagar) ಸೇರಿದಂತೆ ಹಲವು ಕಡೆ ಇಂದು ಅಪಘಾತಗಳು (Accident) ಸಂಭವಿಸಿ, ಪ್ರಾಣ ಹಾನಿಯಾಗಿದೆ. ಮತ್ತೊಂದೆಡೆ ವಿವಿಧ ಪ್ರಕರಣಗಳಲ್ಲಿ (Case) ಬಳ್ಳಾರಿಯಲ್ಲಿ (Bellary) ವಿದ್ಯಾರ್ಥಿ (Student) ಸೇರಿದಂತೆ ಕೆಲವರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ರಾಮನಗರದಲ್ಲಂತೂ 6 ತಿಂಗಳ ಕಂದಮ್ಮ (Baby) ಸೇರಿದಂತೆ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅತ್ತ ಬಳ್ಳಾರಿಯಲ್ಲಿ ಬಾಳಿ ಬದುಕಬೇಕಿದ್ದ ವಿದ್ಯಾರ್ಥಿ, ಭವಿಷ್ಯದ ಭಾವಿ ವೈದ್ಯನೊಬ್ಬ (Doctor) ತನ್ನ ಭವಿಷ್ಯವನ್ನೇ ಕೊನೆಗೊಳಿಸಿಕೊಂಡಿದ್ದಾನೆ.
ರಾಮನಗರದಲ್ಲಿ ಬಸ್ ಹಾಗೂ ಕಾರಿನ ನಡುವೆ ಅಪಘಾತ
ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತದ ಪರಿಣಾಮ ಉಡುಪಿ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಕೆಮ್ಮಲ್ಲಿ ದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ. ಅಪಘಾತದ ತೀವೃತೆಗೆ ಮಗುವಿನ ದೇಹ ಛಿದ್ರವಾಗಿದ್ದು, ಅಪಘಾತದ ತೀವೃತೆ ತಿಳಿಸುತ್ತಿತ್ತು.
6 ತಿಂಗಳ ಮಗು ಸೇರಿ ಮೂವರ ದುರ್ಮರಣ, ಇಬ್ಬರಿಗೆ ಗಾಯ
ಮೃತರನ್ನು ಅಕ್ಷತಾ, ಡ್ರೈವರ್ ಉಮೇಶ್ ಹಾಗೂ 6 ತಿಂಗಳು ಮಗು ಸುಮಂತ್ ಎಂದು ಗುರುತಿಸಲಾಗಿದೆ, ಘಟನೆಯಲ್ಲಿ ಕಾರಿನಲ್ಲಿದ್ದ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡವರನ್ನ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಕುರಿತು ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ರು.
ಇದನ್ನೂ ಓದಿ: Mercy Killing: "ದಯ ಮಾಡಿ, ಮರಣ ನೀಡಿ" ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಬಿಎಂಟಿಸಿ ಡ್ರೈವರ್! ಕಾರಣ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ
ನೇಣಿಗೇರಿದ ಎಂಬಿಬಿಎಸ್ ವಿದ್ಯಾರ್ಥಿ
ಮತ್ತೊಂದು ಪ್ರಕರಣದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕೋಣೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಬಳ್ಳಾರಿಯ ವಿಮ್ಸ್ ವೈದ್ಯಕೀಯ ಕಾಲೇಜ್ನಲ್ಲಿ ಎಂಬಿಬಿಎಸ್ ಓದುತ್ತಿದ್ದ 25 ವರ್ಷದ ಶ್ರೇಯಸ್ ಎಂಬಾತನೇ ನೇಣಿಗೆ ಶರಣಾದ ವಿದ್ಯಾರ್ಥಿ. ಬೀದರ್ನ ಬಸವ ಕಲ್ಯಾಣ ಮೂಲದ ಈತ ವಿಮ್ಸ್ನಲ್ಲಿ ಎಂಬಿಬಿಎಸ್ ಓದುತ್ತಾ, ಹಾಸ್ಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶ್ರೇಯಸ್
ಮೃತ ವಿದ್ಯಾರ್ಥಿ ಶ್ರೇಯಸ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಬೈಪೋಲಾರ್ ಡಿಸಾರ್ಡರ್ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೇಯಸ್ಗೆ ಕೆಲ ವರ್ಷದಿಂದ ಪಾಲಕರು ವಿವಿಧೆಡೆ ಚಿಕಿತ್ಸೆ ಕೊಡಿಸಿದ್ದರು. ಹೈದರಾಬಾದ್, ಸೊಲ್ಲಾಪುರ, ನಾಂದೇಡ, ಪುಣೆಯ ಖ್ಯಾತ ನರರೋಗ ತಜ್ಞರಿಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಬೈಪೋಲಾರ್ ಡಿಸಾರ್ಡರ್ ಕಾಯಿಲೆ ಗುಣಮುಖ ಆಗಿರಲಿಲ್ಲವಂತೆ.
ಸಾಯುವ ಮುನ್ನ ಅಕ್ಕನಿಗೆ ಕಾಲ್ ಮಾಡಿದ್ದ ವಿದ್ಯಾರ್ಥಿ
ನಿನ್ನೆ ಆತ್ಮಹತ್ಯೆಗೆ ಯತ್ನಿಸುವ ಮುನ್ನ ತನ್ನ ಅಕ್ಕ ಶ್ರೇಯಾ ಎಂಬಾಕೆಗೆ ಕಾಲ್ ಮಾಡಿ, ಸುಮಾರು ಅರ್ಧ ಗಂಟೆ ಮಾತನಾಡಿದ್ದ ಎನ್ನಲಾಗಿದೆ. 'ಇದು ನನ್ನ ಕೊನೆಯ ಕಾಲ್ ಇರಬಹುದು. ನಾಳೆ ನೀವೆಲ್ಲ ಬಂದು ನನ್ನನ್ನು ಕರೆದೊಯ್ಯಬಹುದು' ಎಂದಿದ್ದ. ಗಾಬರಿಗೊಂಡ ಅಕ್ಕ ತಮ್ಮನಿಗೆ ಸಮಾಧಾನಪಡಿಸಿ ಧೈರ್ಯ ತುಂಬಲು ಯತ್ನಿಸಿದ್ದಾರೆ.
ವಿಡಿಯೋ ಕಾಲ್ನಲ್ಲೇ ನೇಣಿಗೆ ಶರಣು
ತಮ್ಮನ ಮಾತಿನಿಂದ ವಿಚಲಿತರಾದ ಅಕ್ಕ, ವಿಡಿಯೋ ಕಾಲ್ ಮಾಡುವೆ ಎಂದಾಗ ಶ್ರೇಯಸ್ ಬೇಡ ಎಂದಿದ್ದ. ಆದರೂ ಅಕ್ಕ ಪದೇ ಪದೇ ವಿಡಿಯೋ ಕಾಲ್ ಮಾಡಿದಾಗ ರಿಸೀವ್ ಮಾಡಿದ ತಮ್ಮ, ತನ್ನ ಕೊರಳಿಗೆ ಉರುಳು ಕಟ್ಟಿಕೊಂಡಿರುವುದನ್ನು ತೋರಿಸಿದ್ದಾನೆ. ಗಾಬರಿಗೊಂಡ ಅಕ್ಕ, ಉರುಳು ತೆಗಿ ಎಂದು ಪರಿಪರಿ ಕೇಳಿದರೂ ಕಾಲ್ ಕಟ್ ಮಾಡಿದ್ದಾನೆ. ಕೂಡಲೇ ಆಕೆ, ಶ್ರೇಯಸ್ನ ಗೆಳೆಯರಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾಳೆ.
ಇದನ್ನೂ ಓದಿ: Mohan Juneja: KGF 2 ಖ್ಯಾತಿಯ ನಟ ಮೋಹನ್ ಜುನೇಜ ಇನ್ನಿಲ್ಲ
ಕೂಡಲೇ ಅವರು ರೂಮಿನ ಬಾಗಿಲು ತೆಗೆದು ನೋಡುವಷ್ಟರಲ್ಲಿ ಶ್ರೇಯಸ್ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದ. ಆತನನ್ನು ರಕ್ಷಿಸಿದ ಸ್ನೇಹಿತರು, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಶ್ರೇಯಸ್ ಮೃತಪಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ