CP Yogeshwar- ಪಕ್ಷ ಸಂಘಟನೆ ಬಿಟ್ಟು ನಾಯಕರ ನಿಂದನೆಗೆ ನಿಂತಿದ್ದೇ ಯೋಗೇಶ್ವರ್​ಗೆ ಮುಳುವಾಯ್ತಾ?

ಬಿಜೆಪಿಯ ಅತ್ಯಂತ ಪ್ರಬಲ ನಾಯಕರಾಗಿದ್ದ ಯಡಿಯೂರಪ್ಪ ಅವರನ್ನ ಟೀಕಿಸುವುದರಲ್ಲೇ ಹೆಚ್ಚು ಕಾಲ ವ್ಯಯಿಸಿದ ಸಿ ಪಿ ಯೋಗೇಶ್ವರ್ ಅವರು ರಾಮನಗರದಲ್ಲಿ ಪಕ್ಷ ಸಂಘಟನೆಗೆ ಸಮಯ ಕೊಡಲಿಲ್ಲ. ಇದು ಅವರಿಗೆ ಮುಳುವಾಗಿತೆನ್ನಲಾಗಿದೆ.

ಸಚಿವ ಸಿ.ಪಿ.ಯೋಗೇಶ್ವರ್​​

ಸಚಿವ ಸಿ.ಪಿ.ಯೋಗೇಶ್ವರ್​​

  • Share this:
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಶಾಸಕರಾಗಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಇದ್ದಾರೆ. ಆದರೆ ಕ್ಷೇತ್ರದಲ್ಲಿ ಹೆಚ್.ಡಿ.ಕೆಗೆ ಪ್ರಬಲವಾಗಿ ಪೈಪೋಟಿ ಕೊಡುವ ಮತ್ತೊಬ್ಬ ನಾಯಕ ಅಂದರೆ ಸಿ.ಪಿ. ಯೋಗೇಶ್ವರ್. ಆದರೆ ಕಳೆದ 2 ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಗೇಶ್ವರ್ ರಾಮನಗರ ಜಿಲ್ಲೆಯ ಪಕ್ಷ ಸಂಘಟನೆಯಲ್ಲಿ ಫೇಲ್ ಆಗಿದ್ದಾರೆ ಎನ್ನುವ ವಿಚಾರ ಸ್ವತಃ ಬಿಜೆಪಿ ಪಕ್ಷದಲ್ಲಿಯೇ ಚರ್ಚೆಯಾಗುತ್ತಿದೆ.

ಮಾಜಿ ಸಿಎಂ ಹಾಗೂ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕ ಎಂದೇ ಕರೆಸಿಕೊಳ್ಳುವ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಪ್ರಬಲ ರಾಜಕಾರಣಿ. ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮುದಾಯದಲ್ಲಿ ಬೇರ್ಯಾವ ನಾಯಕನಿಗೂ ಇಲ್ಲದ ಬೆಂಬಲ ಯಡಿಯೂರಪ್ಪಗೆ ಇದೆ ಅಂದರೆ ಅದು ವಾಸ್ತವ ಸತ್ಯ.‌ ಉತ್ತರ ಕರ್ನಾಟಕ ಭಾಗದಲ್ಲಿ, ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಸಿಕ್ಕಿದೆ, ಜೊತೆಗೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಅಂದರೆ ಅದಕ್ಕೆ ಪ್ರಮುಖ ಕಾರಣ ಯಡಿಯೂರಪ್ಪ ಎನ್ನಲಾಗುತ್ತದೆ. ಆದರೆ ಯೋಗೇಶ್ವರ್ ಇದೇ ಯಡಿಯೂರಪ್ಪ ವಿರುದ್ಧ ನಿರಂತರವಾಗಿ ಬಹಿರಂಗವಾಗಿ ಮಾತನಾಡಿ ರಾಜಕೀಯದಲ್ಲಿ ಕೆಟ್ಟರು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದಕ್ಕೆ ನಮ್ಮ ಬಿಜೆಪಿ ಸರ್ಕಾರ ಬಂತು ಎಂಬುದು ಯೋಗೇಶ್ವರ್ ವಾದ. ಆದರೆ 105 ಜನ ಬಿಜೆಪಿ ಪಕ್ಷದ ಶಾಸಕರು ಗೆದ್ದಿರುವ ಹಿಂದೆ ಯಡಿಯೂರಪ್ಪ ಅವರ ಶ್ರಮ, ಶಕ್ತಿ ಅಧಿಕವಾಗಿದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ‌ಜೊತೆಗೆ ಪ್ರಬಲ ಲಿಂಗಾಯಿತ ಸಮುದಾಯದ ವಿರೋಧವನ್ನು ಯೋಗೇಶ್ವರ್ ಕಟ್ಟಿಕೊಂಡದ್ದು ಅವರ ರಾಜಕೀಯ ಬೆಳವಣಿಗೆಗೆ ಹಿನ್ನಡೆಯಾಗಿದೆ.

ರಾಮನಗರದಲ್ಲಿ ಹೆಚ್.ಡಿ‌.ಕೆ - ಡಿ.ಕೆ.ಬ್ರದರ್ಸ್ ಎದುರು ಸೋತ ಸಿ.ಪಿ.ವೈ:

ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಾಗೂ ಕಾಂಗ್ರೆಸ್ ಪಕ್ಷವನ್ನು ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರು ಸಂಘಟನೆಯಲ್ಲಿ ನಿರತರಾಗಿದ್ದಾರೆ.‌ ಆದರೆ ಸಿ.ಪಿ. ಯೋಗೇಶ್ವರ್ ಮಾತ್ರ ಬಿಜೆಪಿ ಪಕ್ಷ ಸಂಘಟನೆಗಿಂತಲೂ ಹೆಚ್ಚಾಗಿ ಪಕ್ಷದ ಹಾಗೂ ನಾಯಕರ ವಿರುದ್ಧ ಹೋರಾಟ ಮಾಡುವುದರಲ್ಲಿಯೇ ಕಾಲಕಳೆದದ್ದು ಹೆಚ್ಚಾಯ್ತು ಎಂಬುದು ವಾಸ್ತವ.‌ ಇನ್ನು ಸ್ಥಳೀಯ ನಗರಸಭೆ ಹಾಗೂ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಾರದಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ ಎನ್ನಬಹುದು. ಯೋಗೇಶ್ವರ್ ಅವರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಷ್ಟೇ ಅಲ್ಲ ಹಾಗೂ ಅವರ ಸ್ವಗ್ರಾಮ ಚಕ್ಕೆರೆಯಲ್ಲಿಯೇ ಬಿಜೆಪಿ ಮುಗ್ಗರಿಸಿತ್ತು. ಜೊತೆಗೆ ಚನ್ನಪಟ್ಟಣದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿಯೇ ಇದೆ. ಮಾಜಿ ಸಿಎಂ ಕುಮಾರಸ್ವಾಮಿ ಯಾವುದೇ ರಾಜೀ ಇಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷ ಕೂಡ ಸಂಸದ ಡಿ.ಕೆ. ಸುರೇಶ್ ಮುಂದಾಳತ್ವದಲ್ಲಿ ತನ್ನ ಮತಗಳನ್ನ ಹೆಚ್ಚಿಸಿಕೊಂಡಿದೆ.‌ ಆದರೆ, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪ್ರಭಾವ ಇಲ್ಲ ಎನ್ನಲು ಸಾಧ್ಯವಿಲ್ಲವಾದರೂ ರಾಮನಗರದ ಒಟ್ಟಾರೆ ಜಿಲ್ಲಾ ಮಟ್ಟದಲ್ಲಿ ನೋಡಿದರೆ ಯೋಗೇಶ್ವರ್ ಹಿಡಿತ ಇಲ್ಲ.

ಇದನ್ನೂ ಓದಿ: Zameer Ahmed- 90 ಕೋಟಿ ಮೌಲ್ಯದ ನಿವೇಶನ ಕೇವಲ 9.38 ಕೋಟಿಗೆ ಮಾರಾಟ; ಇಡಿ ಕಣ್ಣಿಗೆ ಜಮೀರ್ ಬಿದ್ದದ್ದು ಹೀಗೆ

ಹಳೇ ಮೈಸೂರು ಭಾಗದ ವಿಚಾರ ವರ್ಕ್ ಆಗಲಿಲ್ಲ:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪಕ್ಷ ಸಂಘಟನೆ ವಿಚಾರಕ್ಕಿಂತಲೂ ಹೆಚ್ಚಾಗಿ ಸಚಿವ ಸ್ಥಾನದ ಲಾಬಿ ವಿಚಾರದಲ್ಲಿಯೇ ಮಾಧ್ಯಮಗಳಲ್ಲಿ ಯೋಗೇಶ್ವರ್ ಹೆಚ್ಚು ಸುದ್ದಿಯಾದರು. ಇನ್ನು ಪ್ರತಿ ಬಾರಿಯೂ ಸಹ ಬಿಜೆಪಿ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡುತ್ತಿದ್ದ ವಿಚಾರ ಅಂದರೆ ಅದು ಹಳೇ ಮೈಸೂರು ಭಾಗದ ಸಂಘಟನೆ ವಿಚಾರ. ಆದರೆ ಈ ಬಾರಿ ಅದು ಸಹ ವರ್ಕ್ ಆಗಲಿಲ್ಲ ಎಂಬ ಮಾಹಿತಿ ಇದೆ. ಯಾಕೆಂದರೆ ಕಳೆದ ಎರಡು ವರ್ಷದಲ್ಲಿ ರಾಮನಗರ ಜಿಲ್ಲೆಯಲ್ಲಿಯೇ ಯೋಗೇಶ್ವರ್ ಸಂಘಟನೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಶ್ವಥ್ ನಾರಾಯಣ ತಮಗೆ ಸಿಕ್ಕಿದ ಅವಕಾಶವನ್ನ ಅಚ್ಚುಕಟ್ಟಾಗಿ ಬಳಸಿಕೊಂಡರು. ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಬೆಳೆಸಿಕೊಂಡರು. ಆದರೆ ಯೋಗೇಶ್ವರ್ ಚುನಾವಣೆಯಲ್ಲಿ ಸೋತಿದ್ದರೂ ಸಹ ಪಕ್ಷದಿಂದ ಎಂ.ಎಲ್.ಸಿ ಮಾಡಿ ನಂತರ ಮಂತ್ರಿ ಮಾಡಲಾಗಿತ್ತು. ಆದರೂ ಸಹ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವಲ್ಲಿ ಅವರು ಸಕ್ರಿಯರಾಗಲಿಲ್ಲ. ಪ್ರವಾಸೋದ್ಯಮ ಇಲಾಖೆಯ ವಿಚಾರವಾಗಿ ಒಂದೆರಡು ದಿನ ಅಧಿಕಾರಿಗಳ ಸಭೆ ನಡೆಸಿದ್ದನ್ನ ಹೊರತುಪಡಿಸಿದರೆ ಯೋಗೇಶ್ವರ್ ಪಕ್ಷದ ಬೆಳವಣಿಗೆ ವಿಚಾರವಾಗಿ ಯಾವುದೇ ಬಿಗಿ ಕ್ರಮವಹಿಸಲಿಲ್ಲ. ಹಾಗಾಗಿ ಜಿಲ್ಲೆಯಲ್ಲಿಯೇ ಬಿಜೆಪಿ ಕಟ್ಟದವರು ಹಳೇ ಮೈಸೂರು ಭಾಗದಲ್ಲಿ ಹೇಗೆ ಸಂಘಟನೆ ಮಾಡ್ತಾರೆಂಬ ವಿಚಾರವನ್ನ ಕೆಲ ಆರ್.ಎಸ್.ಎಸ್ ಪ್ರಮುಖರು ಪಕ್ಷದ ಹೈಕಮಾಂಡ್​ಗೆ ಸಂದೇಶ ರವಾನೆ ಮಾಡಿದ್ದಾರೆಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಯೋಗೇಶ್ವರ್ ಗೆ ಸಚಿವ ಸ್ಥಾನ ತಪ್ಪಿದೆ ಎಂದು ಸಹ ಹೇಳಲಾಗುತ್ತಿದೆ.

ವರದಿ: ಎ.ಟಿ‌.ವೆಂಕಟೇಶ್
Published by:Vijayasarthy SN
First published: