• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: 223 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳ ಅಭಿವೃದ್ಧಿ

Bengaluru: 223 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳ ಅಭಿವೃದ್ಧಿ

ನಾಡಪ್ರಭು ಕೆಂಪೇಗೌಡ

ನಾಡಪ್ರಭು ಕೆಂಪೇಗೌಡ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಪರಿಕಲ್ಪನಾ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ಮಾಗಡಿ ಸರ್ಕ್ಯುಟ್, 47 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸರ್ಕ್ಯುಟ್ ಹಾಗೂ 44 ಕೋಟಿ ರೂ. ವೆಚ್ಚದಲ್ಲಿ ನಂದಿ ಸರ್ಕ್ಯುಟ್ ಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ.

ಮುಂದೆ ಓದಿ ...
 • Share this:

  ಬೆಂಗಳೂರು( ಜುಲೈ 6): ನಾಡಪ್ರಭು ಕೆಂಪೇಗೌಡರ ಕಾಲದ ಸುಮಾರು 46 ಪಾರಂಪರಿಕ ತಾಣಗಳನ್ನು ಮೂರು ಸರ್ಕ್ಯುಟ್ ಗಳಲ್ಲಿ ಗುರುತಿಸಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯನ್ನೂ ದೃಷ್ಟಿಯಲ್ಲಿರಿಸಿಕೊಂಡು ಈ ತಾಣಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದರು.


  ಅವರು ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


  ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಪರಿಕಲ್ಪನಾ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ಮಾಗಡಿ ಸರ್ಕ್ಯುಟ್, 47 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸರ್ಕ್ಯುಟ್ ಹಾಗೂ 44 ಕೋಟಿ ರೂ. ವೆಚ್ಚದಲ್ಲಿ ನಂದಿ ಸರ್ಕ್ಯುಟ್ ಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ.


  ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 64 ಕೋಟಿ ರೂ. ವೆಚ್ಚದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಪ್ರತಿಮೆಯ ಸುತ್ತ ಥೀಮ್ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.


  ರಾಮನಗರ ಜಿಲ್ಲೆಯ ಕೆಂಪಾಪುರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ವೀರ ಸಮಾಧಿ ಅಭಿವೃದ್ಧಿ ಕಾರ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪರಿಕಲ್ಪನಾ ಯೋಜನೆ ಪ್ರಗತಿಯಲ್ಲಿದೆ. 32 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ ಜಮೀನು ಕಳೆದುಕೊಳ್ಳುವ 46 ಕುಟುಂಬಗಳಿಗೆ ಪುನರ್ವಸತಿ, ರಸ್ತೆ ಅಭಿವೃದ್ಧಿ ಮತ್ತಿತರ ಮೂಲಸೌಕರ್ಯ ಒದಗಿಸುವ ಕುರಿತು ವ್ಯವಸ್ಥಿತ ಯೋಜನೆ ರೂಪಿಸಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.


  ಕೆಂಪೇಗೌಡರ ಜೀವನಾಧಾರಿತ ಪುಸ್ತಕ, ಕಿರುಚಿತ್ರ ಸಿದ್ಧಪಡಿಸಲು ಹಾಗೂ ನಾಡಪ್ರಭು ಕೆಂಪೇಗೌಡರ ಆಡಳಿತಾವಧಿಯ ಕೋಟೆಗಳು, ಕೆರೆಗಳು ಮತ್ತು ಪಾರಂಪರಿಕ ತಾಣಗಳನ್ನು ಪ್ರವಾಸೋದ್ಯಮ ಇಲಾಖೆ, ಸಣ್ಣ ನೀರಾವರಿ, ಬಿಬಿಎಂಪಿ, ಲೋಕೋಪಯೋಗಿ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ಅರಣ್ಯ, ತೋಟಗಾರಿಕೆ ಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.


  ನಾಡಪ್ರಭು ಕೆಂಪೇಗೌಡರು ತಮ್ಮ ಜೀವಿತಾವಧಿಯಲ್ಲಿ ನಿರ್ಮಿಸಿದ ಅನೇಕ ತಾಣಗಳು ಇಂದು ನಿರ್ಲಕ್ಯಕ್ಕೆ ಒಳಗಾಗಿವೆ. ಅವುಗಳನ್ನು ಗುರುತಿಸಿ ಅಭಿವೃದ್ದಿ ಮಾಡಲು ಸರ್ಕಾರ ಅಣಿಯಾಗುತ್ತಿದೆ. ಯಾವುದೇ ಬೇಧ- ಭಾವವಿಲ್ಲದೆ ತಮ್ಮ ಆಡಳಿತದ ಅವಧಿಯಲ್ಲಿ ಎಲ್ಲಾ ಜಾತಿ- ಧರ್ಮ- ಜನಾಂಗಗಳ ಅಭಿವೃದ್ದಿಗೆ ನಿಂತ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಹಿರಿಮೆ ಮುಂದಿನ ಪೀಳಿಗೆಗೆ ತಿಳಿಯಬೇಕು ಎಂಬುದು ಸಹ ಸರ್ಕಾರದ ಚಿಂತನೆಗಳಲ್ಲಿ ಒಂದಾಗಿದೆ ಎಂದರು.


  ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಮೆಕ್ಕಾದ ಅಬ್ರಾಜ್ ಕುದೈ ಹೋಟೆಲ್ ವಿಶ್ವದ ಅತಿ ಎತ್ತರದ ಹೋಟೆಲ್ ಅಲ್ಲ..!


  ಉಪ ಮುಖ್ಯಮಂತ್ರಿ ಡಾ. ಸಿ ಎನ್. ಅಶ್ವತ್ಥನಾರಾಯಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್, ಮಾಗಡಿ ಶಾಸಕ ಮಂಜುನಾಥ್, ಪ್ರಾಧಿಕಾರದ ಸದಸ್ಯರು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳಿ, ಗುಂಪುಗೂಡುವುದನ್ನು ಆದಷ್ಟು ಕಡಿಮೆಗೊಳಿಸಿ.

  Published by:HR Ramesh
  First published: