Karaga Festival - ರಾಮನಗರದ ಪ್ರಸಿದ್ಧ ಚಾಮುಂಡೇಶ್ವರಿ ಕರಗ ಉತ್ಸವಕ್ಕೆ ಬ್ರೇಕ್
ಬೆಂಗಳೂರಿನ ಕರ್ಗದಂತೆ ರಾಮನಗರದ ಚಾಮುಂಡೇಶ್ವರಿ ಕರಗ ಕೂಡ ಪ್ರಖ್ಯಾತವಾಗಿದೆ. ಕೊರೋನಾ ಮಹಾಮಾರಿಯಿಂದಾಗಿ ಕಳೆದ ವರ್ಷದಂತೆ ಈ ವರ್ಷವೂ ಕರಗ ಉತ್ಸವ ನಿಲ್ಲಿಸಲಾಗಿದೆ. ಜಿಲ್ಲೆಯ ಇತರೆಡೆಯಲ್ಲೂ ಕರಗ ಮಹೋತ್ಸವಗಳು ನಡೆಯುವುದಿಲ್ಲ.
ರಾಮನಗರದ ಪ್ರಖ್ಯಾತ ಚಾಮುಂಡೇಶ್ವರಿ ಕರಗ ಮಹೋತ್ಸವದ ಒಂದು ದೃಶ್ಯ
ರಾಮನಗರ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅಂತರದೊಂದಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಇದು ಕಟ್ಟುನಿಟ್ಟಾಗಿ ಪಾಲನೆ ಆಗಬೇಕೆಂದು ನಿಯಮವಿದೆ. ಈ ಹಿನ್ನೆಲೆ ರಾಮನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯ, ತೋಪ್ ಖಾನ್ ಮೊಹಲ್ಲಾದಲ್ಲಿರುವ ಶ್ರೀ ಮುತ್ತು ಮಾರಮ್ಮ ದೇವಸ್ಥಾನ, ಬಾಲಗೇರಿಯ ಶ್ರೀ ಮಗ್ಗದ ಕೇರಿ ಮಾರಮ್ಮ, ಬಾಲಗೇರಿಯ ಭಂಡಾರಮ್ಮ ದೇವಸ್ಥಾನ, ಶೆಟ್ಟಳ್ಳಿ ಬೀದಿಯ ಆದಿಶಕ್ತಿ ದೇವಸ್ಥಾನ, ಐಜೂರು ಆದಿಶಕ್ತಿ ಪುರದ ಆದಿಶಕ್ತಿ ದೇವಸ್ಥಾನ ಹಾಗೂ ಕೊಂಕಾಣಿ ದೊಡ್ಡಿ ಆದಿಶಕ್ತಿ ದೇವಸ್ಥಾನಗಳಲ್ಲಿ ಕರಗ ಮಹೋತ್ಸವವನ್ನು ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ದೇವಸ್ಥಾನದ ಮುಖ್ಯಸ್ಥರಿಗೆ ಈ ಕುರಿತಂತೆ ತಿಳಿಸಿ ಕೋವಿಡ್ ನಿಯಮ ಪಾಲಿಸಿ ನಿಯಮದಲ್ಲಿ ತಿಳಿಸಿರುವಂತೆ ಪೂಜಾ ಕೈಂಕರ್ಯಗಳನ್ನು ಮಾತ್ರ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ ಎಂದು ರಾಮನಗರ ತಹಶೀಲ್ದಾರ್ ವಿಜಯ್ ಕುಮಾರ್ ತಿಳಿಸಿದರು. ಇನ್ನು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವುದು ಕಡ್ಡಾಯ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಅವರು ನಿಗಾವಹಿಸಬೇಕು ಎಂದು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಅವರು ನಿರ್ದೇಶಿಸಿದರು.
ಕಳೆದ 15 ವರ್ಷದಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದ್ದ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಕಳೆದ 2 ವರ್ಷದಿಂದ ಕೊರೋನಾಯಿಂದಾಗಿ ಬ್ರೇಕ್ ಬಿದ್ದಿದೆ. ರಾಮನಗರದ ಚಾಮುಂಡೇಶ್ವರಿ ಕರ್ಗ ಮಹೋತ್ಸವ ಅಂದರೆ ಇಡೀ ರಾಜ್ಯದಲ್ಲಿಯೇ ಪ್ರಸಿದ್ಧಿ. ಅದರಲ್ಲಿಯೂ ಬೆಂಗಳೂರಿನ ಕರ್ಗದಂತೆಯೇ ವಿಜೃಂಭಣೆಯಿಂದ ರಾಮನಗರದ ಕರ್ಗ ಮಹೋತ್ಸವ ನಡೆಯುತ್ತದೆ ಎನ್ನುವುದು ಮತ್ತೊಂದು ವಿಶೇಷ. ಆದರೆ ಕಳೆದ ಎರಡು ವರ್ಷದಿಂದ ಕೊರೋನಾ ಮಾರಿಗೆ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ.
ಪ್ರತಿವರ್ಷವೂ ಸಹ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು. ಅದರಲ್ಲಿಯೂ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಕುಮಾರಸ್ವಾಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ದೊಡ್ಡಮಟ್ಟದಲ್ಲಿ ನಡೆಯುತ್ತಿತ್ತು. ಕನ್ನಡ ಚಲನಚಿತ್ರ ನಟರು, ನಟಿಯರು ಸೇರಿದಂತೆ ಸಿನಿಮಾ ಕಲಾವಿದರು ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದರು. ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯರಾತ್ರಿ 2 ಗಂಟೆಯವರೆಗೆ ನಡೆಯುತ್ತಿತ್ತು. ರಾತ್ರಿಯಿಡೀ ರಾಮನಗರದ ಬೀದಿ ಬೀದಿಗಳಲ್ಲಿ ಜನರು ಸದಾ ಓಡಾಡುತ್ತಿದ್ದರು. ರಾತ್ರಿಯೆಲ್ಲ ನಗರದ ಪ್ರಮುಖ ಬೀದಿಗಳಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಬಾರಿ ಅದೆಲ್ಲದಕ್ಕೂ ಕೊರೋನಾ ಮಹಾಮಾರಿ ತಡೆಯಾಗುವಂತೆ ಮಾಡಿದೆ. ಕೇವಲ ಭಕ್ತರ ದರ್ಶನಕ್ಕಾಗಿ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಅದರಲ್ಲಿಯೂ ಸಹ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ರಾಮನಗರ ಜಿಲ್ಲಾಡಳಿತ ಸೂಚಿಸಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ