ರಾಮನಗರ/ಹಾಸನ: ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ದಳಪತಿಗಳ ನಡುವೆ ವಾಕ್ಸಮರ ಮುಂದುವರೆದಿದೆ. ಜೆಡಿಎಸ್ ಮುಳುಗುವ ಹಡಗು ಎಂಬ ಅರುಣ್ ಸಿಂಗ್ ಹೇಳಿಕೆ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೆಂಡಮಂಡಲರಾಗಿ ತಿರುಗೇಟು ನೀಡಿದ್ದಾರೆ. ದೇಶವನ್ನ ಆಳುತ್ತಿರೋ ಪಕ್ಷ ಬಿಜೆಪಿ, ಎರಡನೇ ಬಾರಿಗೆ ದೇಶವನ್ನ ಆಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಲಘುವಾಗಿ ಮಾತನಾಡುವುದನ್ನ ನಿಲ್ಲಿಸಬೇಕು. ನನಗೆ ಬುದ್ದಿ ಹೇಳುವ ಮೊದಲು ಅವರ ನಡುವಳಿಕೆ ಏನೆಂಬುದನ್ನ ನೋಡಿಕೊಳ್ಳಲಿ. ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಳಿದುಕೊಳ್ಳಲಿ. ನನ್ನ ಬಗ್ಗೆ, ನಮ್ಮ ಪಕ್ಷದ ಮಾಹಿತಿ ಇಲ್ಲ ಅಂದ್ರೆ ಪ್ರಧಾನಮಂತ್ರಿ ಅವರ ಹತ್ತಿರ ಕೇಳಿ ತಿಳಿದುಕೊಳ್ಳಲಿ ಎಂದು ಕುಟುಕಿದರು.
ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ
ತೈಲ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನರು ಈ ಬಗ್ಗೆ ಅರ್ಥ ಮಾಡಿಕೊಳ್ಳಲಿ. ಬಡ ಜನರ ಮೇಲೆ ಹೊರೆ ಏರಿಕೆ ಮಾಡಿದ್ದಾರೆ. ಕೂಲಿ ಕಾರ್ಮಿಕ ಕೂಡ ವರ್ಷಕ್ಕೆ ಒಂದು ಲಕ್ಷ ತೆರಿಗೆ ಕಟ್ಟುತ್ತಾನೆ. ಬಿಜೆಪಿ ಸರ್ಕಾರ ನಾಡಿನ ಬಡವರಿಗೆ ನೀಡುತ್ತಿರೋ ಕೊಡುಗೆ ಇದು. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಮ್ಯಾಪ್ ಇದಿಯೋ ಕಿತ್ತಾಕಿದರೋ ಗೊತ್ತಿಲ್ಲ. ರಾಜ್ಯಕ್ಕೆ ಏನು ತೊಂದರೆ ಆಗುತ್ತಿದ್ದೆ, ಅನ್ಯಾಯವಾಗಿದೆ ಎಂಬುದುನ್ನು ಉಸ್ತುವಾರಿಗಳು ಗಮನಿಸಿ ಪರಿಹಾರ ನೀಡಬೇಕು. ಬರೀ ಪಕ್ಷ ಸಂಘಟನೆ ಮಾಡುವುದಲ್ಲ. ಕೇಂದ್ರ ಸರ್ಕಾರ ಜನರ ಸಾಮಾನ್ಯರಿಗೆ ಎಷ್ಟು ಸ್ವಂದಿಸಿದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆಸಿದರು.
ಬಿಜೆಪಿಗೆ ರೇವಣ್ಣ ಸವಾಲು
ಇನ್ನು ಅರುಣ್ ಸಿಂಗ್ ಹೇಳಿಕೆ ವಿರುದ್ಧ ಹಾಸನದಲ್ಲಿ ಜೆಡಿಎಸ್ ಮುಖಂಡ ರೇವಣ್ಣ ಸಹ ಕಿಡಿಕಾರಿದರು. 2023 ರವರೆಗೆ ಇವರೇ ಇದ್ದರೆ ಜೆಡಿಎಸ್ ಮುಳುಗುತ್ತೋ ಯಾವುದು ಮುಳುಗುತ್ತೋ ನೋಡೋಣ. ಅವರನ್ನೇ ಮುಂದುವರಿಸಬೇಕೆಂದು ಕೇಂದ್ರ ನಾಯಕರನ್ನು ಮನವಿ ಮಾಡುತ್ತೇನೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ 150 ಸೀಟ್ ಗೆಲ್ಲಿಸುತ್ತೇನೆ ಎನ್ನುತ್ತಿದ್ದಾರೆ. ಇವರು ಅವರ ಜೊತೆ ಸೇರಿ ಇನ್ನೂ 30 ಸೀಟ್ ಜಾಸ್ತಿ ಗೆಲ್ಲಿಸಲಿ, ಇವರೇ ಉಸ್ತುವಾರಿವಾಗಿ ಮುಂದುವರಿಯಬೇಕು. ಈಗಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅವರು 2023 ರವರೆಗೆ ಇದ್ದು ಜೆಡಿಎಸ್ ಮುಳುಗಿಸಲಿ ಎಂದು ಸವಾಲೆಸೆದರು.
ಮುಳುಗುತ್ತೆ ಅನ್ನುವುದು ಲೂಸ್ ಟಾಕ್ ಅಲ್ವಾ?
ನಾವೇನು ಬಿಜೆಪಿಗೆ ಬರುತ್ತೀವಿ ಎಂದು ಅರ್ಜಿ ಹಾಕಿಕೊಂಡಿದ್ದೆವಾ, ನಮ್ಮ ಕುಟುಂಬ ಅಧಿಕಾರಕ್ಕೆ ಆಸೆ ಪಡುವುದಿಲ್ಲ. ಕಳೆದ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಹಿಂದಿನ ದಿನ ನೀನೆ ಐದು ವರ್ಷ ಮುಖ್ಯಮಂತ್ರಿಯಾಗಿರು ಎಂದು ಪ್ರಧಾನಮಂತ್ರಿ ಹೇಳಿದ್ದರು.ನರೇಂದ್ರಮೋದಿ ಅವರೇ ಹೇಳಿದ್ದರು. ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮುಂದುವರೆಯಬಹುದಿತ್ತು. ಇದನ್ನು ರಾಜ್ಯ ಉಸ್ತುವಾರಿ ವಿಚಾರಣೆ ಮಾಡಲಿ. ಮುಳುಗುತ್ತೆ ಅನ್ನುವುದು ಲೂಸ್ ಟಾಕ್ ಅಲ್ವಾ. ಮುಳುಗುತ್ತೆ ಅಂತಾ ಭವಿಷ್ಯ ಹೇಳಲು ಇವರ್ಯಾರು. ದೇವೇಗೌಡರು ಬದುಕಿರುವವರೆಗೂ ಪಕ್ಷ ಮುಳುಗಲು ಸಾಧ್ಯವಿಲ್ಲ ಎಂದರು.
ಬೊಮ್ಮಾಯಿ ಮನೆ ಬಾಗಿಲಿಗೆ ಹೋಗಿಲ್ಲ
ನಾನು ಯಾವತ್ತು ಸಿಎಂ ಬಸವರಾಜ ಬೊಮ್ಮಾಯಿ ಮನೆ ಬಾಗಿಲಿಗೆ ಹೋಗಿಲ್ಲ. ಏನು ಹೆದರಿಕೊಂಡು ಓಡಿ ಹೋಗುವುದಿಲ್ಲ. ಅವರೇ ಬಾಯಿಬಿಟ್ಟು ಸಪೋರ್ಟ್ ಮಾಡಿ ಎಂದು ಹೇಳಿದಾಗ ಬೆಂಬಲ ನೀಡುವುದು ತಪ್ಪಾ. ಕಷ್ಟ ಬಂದಾಗ ನಿಮಗೆ ಸಹಾಯ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ ಎಂದು ಸಿಎಂ-ಮಾಜಿ ಪ್ರಧಾನಿ ದೇವೇಗೌಡರ ಭೇಟಿಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: Arun Singh: ತೆರಿಗೆ ಸಂಗ್ರಹಕ್ಕೆ ಬೆಲೆ ಏರಿಕೆ ಅನಿವಾರ್ಯ; ಕೇಂದ್ರದ ನಿರ್ಧಾರ ಸಮರ್ಥಿಸಿಕೊಂಡ ರಾಜ್ಯ ಉಸ್ತುವಾರಿ ಅರುಣ್ಸಿಂಗ್
ಜಿ.ಟಿ.ದೇವೇಗೌಡಗೆ ಭಗವಂತ ಒಳ್ಳೆಯದು ಮಾಡಲಿ
ಜೆ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಿ.ಟಿ.ದೇವೇಗೌಡರು ದೊಡ್ಡವರಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ಅವರಿಗೆ ಕುಮಾರಣ್ಣ ದೊಡ್ಡ ಹುದ್ದೆ ಕೊಡಲು ಆಗಲಿಲ್ಲ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ. ಜಿಟಿಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ಹೈಕಮಾಂಡ್ ಗೆ ಹೇಳಿ ಬೇಗ ಅವರಿಗೆ ಹುದ್ದೆ ಕೊಡಲಿ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ವ್ಯಂಗ್ಯವಾಗಿ ಹೇಳಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ