ಬಾನಂದೂರು, ವೀರಾಪುರ ಗ್ರಾಮಾಭಿವೃದ್ಧಿಗೆ ಕುಮಾರಸ್ವಾಮಿ ಕೊಡುಗೆ ಅಪಾರ: ನಿರ್ಮಲಾನಂದ ಸ್ವಾಮೀಜಿ

ರಾಮನಗರದ ಬಿಡದಿಯಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರಾದ ಬಾಂದೂರು ಗ್ರಾಮವನ್ನು ವಿಶ್ವ ದರ್ಜೆ ಪಾರಂಪರಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡುವ ಯೋಜನೆಗೆ ನಿನ್ನೆ ಶಂಕು ಸ್ಥಾಪನೆ ಮಾಡಲಾಗಿದೆ.

ನಿರ್ಮಲಾನಂದ ಸ್ವಾಮೀಜಿ

ನಿರ್ಮಲಾನಂದ ಸ್ವಾಮೀಜಿ

  • Share this:
ರಾಮನಗರ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯನ್ನ ನಿರ್ಮಲಾನಂದನಾಥ ಸ್ವಾಮೀಜಿ ಹಾಡಿಹೊಗಳಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು ಬಾನಂದೂರು ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮಿಗಳು ಶಂಕುಸ್ಥಾಪನೆಯನ್ನ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ರೂಪಿತವಾಗಿರುವ ಯೋಜನೆಗೆ ಮುಖ್ಯ ಕಾರಣ ಹೆಚ್.ಡಿ. ಕುಮಾರಸ್ವಾಮಿ. ಬಾನಂದೂರು ಮತ್ತು ವೀರಾಪುರ ಗ್ರಾಮಾಭಿವ್ಱದ್ಧಿಗೆ ಕುಮಾರಸ್ವಾಮಿ ಯೋಜನೆ ರೂಪಿಸಿದ್ದರು. ಬಾನಂದೂರು ಗ್ರಾಮ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು. ವೀರಾಪುರವು ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರು. ಈ ಎರಡೂ ಗ್ರಾಮದ ಅಭಿವೃದ್ಧಿಗೆ ಕುಮಾರಸ್ವಾಮಿ ಯೋಜನೆ ರೂಪಿಸಿಸ್ದರು. ಅವರ ಸರ್ಕಾರ ಇದ್ದಾಗಲೇ ಈ ಯೋಜನೆಗೆ ಶಂಕುಸ್ಥಾಪನೆ ಆಗಬೇಕಿತ್ತು. ಆದರೆ ಅಷ್ಟರಲ್ಲಿ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿತು. ಆದರೆ ಈ ಯೋಜನೆ ಮುಗಿದ ನಂತರ ಉದ್ಘಾಟನೆಗೆ ಅವರು ಬರಲಿದ್ದಾರೆಂದು ವೇದಿಕೆಯಲ್ಲಿ ಹೇಳಿಕೆ ನೀಡಿದರು.

ಬಾನಂದೂರಿನಲ್ಲಿ ನಿರ್ಮಾಣಗೊಳ್ಳಲಿರುವ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಬಾನಂದೂರಿನ ಜನರು ಹಾಗೂ ಸಾರ್ವಜನಿಕರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಇದೇ ವೇಳೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದರು. ಅವರು ನಿನ್ನೆ ಸೋಮವಾರ ಬಾನಂದೂರಿನಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್.  ಅಶ್ವಥ್ ನಾರಾಯಣ ಅವರ ಜತೆ ಪಾರಂಪರಿಕ ಕೇಂದ್ರದ  ಶಂಕುಸ್ಥಾಪನೆ ನೆರವೇರಿಸಿ ವಿಶ್ವ ಪಾರಂಪರಿಕ ಕೇಂದ್ರದ  ಪರಿಕಲ್ಪನೆಯ ಸಾಕ್ಷ್ಯ ಚಿತ್ರ ವೀಕ್ಷಿಸಿದ ನಂತರ ಮಾತನಾಡಿದರು. ಶ್ರೀ  ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಿನಲ್ಲಿ ನಿರ್ಮಾಣವಾಗುತ್ತಿರುವ ಪಾರಂಪರಿಕ ಕೇಂದ್ರ ಉತ್ತಮ ಪ್ರವಾಸಿ ತಾಣವಾಗಬೇಕು. ಸ್ವಾಮೀಜಿ ಅವರ ಜೀವನಚರಿತ್ರೆ ಹಾಗೂ ಅವರು ಮಾಡಿರುವಂತಹ ಸಾಧನೆಯನ್ನು ಪಾರಂಪರಿಕ ಕೇಂದ್ರಕ್ಕೆ ಬರುವ ಪ್ರವಾಸಿಗರು ನೆನಪಿನ ಬುಟ್ಟಿಯಲ್ಲಿ ತುಂಬಿಕೊಂಡು ಹೋಗುವ ರೀತಿ ನಿರ್ಮಾಣ ಮಾಡವ ಸದ್ದುದೇಶ ಇಲಾಖೆಗೆ ಇದೆ ಎಂದರು.

ಪಾರಂಪರಿಕ ಕೇಂದ್ರವು ವಿಶ್ವದರ್ಜೆಯಲ್ಲಿ ರೂಪುಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಯೋಜನೆಗೆ 25 ಕೋಟಿ ಅನುದಾನ ನಿಗದಿ ಮಾಡಿದೆ. ಶ್ರೀ ನಿರ್ಮಲನಾಂದ ಸ್ವಾಮೀಜಿ ಅವರು ಇಲ್ಲಿ ನಿರ್ಮಿಸಲು ನೀಡಿರುವ ಪರಿಕಲ್ಪನೆ ನೋಡಿದರೆ 25 ಕೋಟಿ ರೂ. ಅನುದಾನ ಸಾಕಾಗುವುದಿಲ್ಲ ಎಂದು ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.

ಇದನ್ನೂ ಓದಿ: ಚನ್ನಪಟ್ಟಣದ ತಮಿಳು ಕಾಲೋನಿಯಲ್ಲಿ ಮನೆಗಳ ತೆರವಿಗೆ ರೈಲ್ವೆ ಇಲಾಖೆ ನೋಟೀಸ್

ಶ್ರೀ ಆದಿಚುಂಚನಗಿರಿ ಮಠದಿಂದ 5 ಕೋಟಿ ಸಸಿಗಳನ್ನು ನೆಟ್ಟು ಬೆಳಸುವ‌ ಕಾರ್ಯಕ್ರಮವನ್ನು ಬಾಲಗಂಗಾಧರನಾಥ ಸ್ವಾಮೀಜಿ ಅವರು ಕೈಗೆತ್ತಿಕೊಂಡಿದ್ದರು. ಇಂತಹ ಸದ್ದುದೇಶ ಹೊಂದಿರುವ ಕಾರ್ಯಗಳಿಂದ ಕರ್ನಾಟಕದ ಹಸಿರು ಹೊದಿಕೆ 13% ಯಿಂದ 23% ಕ್ಕೆ ಹೆಚ್ಚಳವಾಗಿದೆ. ಕೊರೋನ ಸಂದರ್ಭದಲ್ಲಿ ಆಮ್ಲಜನಕವನ್ನು ಖರೀದಿಸುವ ಪರಿಸ್ಥಿತಿ ಬಂದಿದೆ. ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಇಂತಹ ಸಮಾಜಮುಖಿ ಕಾರ್ಯಗಳು ಇಂದಿಗೆ ಅವಶ್ಯಕವಾಗಿದೆ ಎಂದರು.

ವಿಶ್ವ ಪಾರಂಪರಿಕ ಕೇಂದ್ರ ಒಂದು ಸಮಾಜ ಮುಖಿ ಕೆಲಸವಾಗಿದ್ದು, ಇದಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಶ್ರೀ ಆದಿಚುಂಚನಗಿರಿ ಮಠದವರು ಸಹಕಾರ ನೀಡಲಿದ್ದಾರೆ. ಬಾನಂದೂರು ಗ್ರಾಮ ಬಿಡದಿ ಪುರಸಭೆ ವ್ಯಾಪ್ತಿಗೆ ಸೇರಿದ್ದು, ಬಿಡದಿ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಬಾನಂದೂರು ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವ ಬಗ್ಗೆ ಚರ್ಚಿಸಿದ್ದೇನೆ ಎಂದರು.

ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಬೆಲೂರು ಮಠದ ಮಾದರಿಯಲ್ಲಿ ಬಾನಂದೂರಿನಲ್ಲೂ ಸಹ ಪಾರಂಪರಿಕ ಕೇಂದ್ರ ಸ್ಥಾಪಿಸುವ ಕಲ್ಪನೆಯನ್ನ ಇಲಾಖೆ ಹೊಂದಿದೆ. ಗ್ರಾಮಸ್ಥರು ಸಹ ತಮ್ಮ ಕಲ್ಪನೆಯನ್ನು ಇಲ್ಲಿ ವ್ಯಕ್ತಪಡಿಸಬೇಕು. ಆಗ ಮಾತ್ರ ಪಾರಂಪರಿಕ ಕೇಂದ್ರ ಉತ್ತಮವಾಗಿ ರೂಪುಗೊಳ್ಳಲಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ. ಅಶ್ವತ್ಥ ನಾರಾಯಣ ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಠ ಎಲ್ಲಾ ಜಾತಿ ಜನಾಂಗಕ್ಕೆ ಸ್ಪಂದಿಸಿ ವೈಜ್ಞಾನಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ವೈದ್ಯಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸಮಾಜ ಮುಖಿ ಕೆಲಸ ಮಾಡುತ್ತಿದೆ. ಎಲ್ಲರೂ ಸಹ ಈ‌ ಪಾರಂಪರಿಕ ಕೇಂದ್ರದ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಉಪಮುಖ್ಯಮಂತ್ರಿಗಳು ಕರೆ ನೀಡಿದರು.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: