HDK- ಚನ್ನಪಟ್ಟಣದಲ್ಲಿ ಪೊಲೀಸರು ರೈತರಿಂದ ಹಣ ವಸೂಲಿ ನಿಲ್ಲಿಸಬೇಕು: ಹೆಚ್.ಡಿ. ಕುಮಾರಸ್ವಾಮಿ

ರೈತರು, ವೃದ್ಧರು ಹೆಚ್ಚಾಗಿ ಅಡ್ಡಾಡುವ ಚನ್ನಪಟ್ಟಣದ ಕೆಲ ರಸ್ತೆಗಳಲ್ಲಿ ಪೊಲೀಸರು ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೆ ಭಾರೀ ದಂಡ ವಿಧಿಸುತ್ತಿದ್ಧಾರೆ. ಇದು ನಿಲ್ಲಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ರಾಮನಗರ: ಚನ್ನಪಟ್ಟಣದಲ್ಲಿ ರೈತರಿಂದ ಕೆಲ ಪೊಲೀಸ್ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ವಿಚಾರದ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ತಾಲೂಕಿನ ಕೆಲ ಪೊಲೀಸ್ ಅಧಿಕಾರಿಗಳು ರೈತರಿಂದ 1 ಸಾವಿರ, 2 ಸಾವಿರ ಹಣ ವಸೂಲಿ ಮಾಡ್ತಿದ್ದಾರೆ. ಹೆಲ್ಮೆಟ್ ಹಾಗೂ ಇತರೆ ಸಣ್ಣಪುಟ್ಟ ಕಾರಣಕ್ಕೆ ಹಣ ವಸೂಲಿ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ರಾಮನಗರ ಎಸ್ಪಿ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾತನಾಡಿದ ಅವರು, ಈಗಿನ ಸಿಎಂ ಬೊಮ್ಮಾಯಿ ಜೊತೆಗೆ ಮಾತನಾಡುತ್ತೇನೆ. ಚನ್ನಪಟ್ಟಣಕ್ಕೆ ಒಳ್ಳೆಯ ಅಧಿಕಾರಿಗಳನ್ನ ಹಾಕಲು ಮನವಿ ಮಾಡ್ತೇನೆ. ಕೆಲವರು ನನ್ನ ಬಗ್ಗೆ ಮಾತನಾಡುತ್ತಿದ್ದರು. ಕುಮಾರಸ್ವಾಮಿ ಎಲ್ಲದಕ್ಕೂ ಮಧ್ಯಸ್ಥಿಕೆ ವಹಿಸುತ್ತಾರೆ, ಅವರದ್ದೇ ಮಾತು ನಡೆಯುತ್ತೆ ಎನ್ನುತ್ತಿದ್ದರು. ಆದರೆ ಆ ಮಹಾನುಭಾವರೇ ಹಾಕಿಸಿಕೊಂಡಿರುವ ಅಧಿಕಾರಿಗಳು ಇವರು. ಅವರ ಸೇವಾರ್ಥದಿಂದಲೇ ಹೀಗೆ ನಡೆಯುತ್ತಿದೆ. ಆದರೆ ಇದೆಲ್ಲವನ್ನು ಮುಂದೆ ತಡೆಯುವ ಪ್ರಯತ್ನ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎಲ್ಲೂ ಇಲ್ಲದ ಕಾನೂನು ಚನ್ನಪಟ್ಟಣದಲ್ಲಿ ಯಾಕೆ, ಜನರ ಪ್ರಶ್ನೆ ?! - ರಾಮನಗರ ಜಿಲ್ಲೆಯ ಕನಕಪುರ, ಮಾಗಡಿ, ರಾಮನಗರ ತಾಲೂಕಿನಲ್ಲಿ ಇಲ್ಲದ ಕಾನೂನು ಚನ್ನಪಟ್ಟಣಕ್ಕೆ ಇದೆಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ. ಜಿಲ್ಲೆಯ ಮೂರು ತಾಲೂಕಿನಲ್ಲಿ ಇಲ್ಲದ ವಿಶೇಷ ಕಾನೂನು ಚನ್ನಪಟ್ಟಣದಲ್ಲಿ ಯಾಕೆ ಎಂಬುದು ಹಲವರ ಪ್ರಶ್ನೆ. ವಾಹನ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಜಾಗ್ಱತಿ ಮೂಡಿಸುವ ಕೆಲಸವನ್ನ ಮಾಡಬೇಕಿರುವ ಪೊಲೀಸ್ ಅಧಿಕಾರಿಗಳು ನೇರವಾಗಿ 1 ರಿಂದ 2 ಸಾವಿರದಷ್ಟು ದೊಡ್ಡ ಮೊತ್ತದ ಫೈನ್ ಹಾಕುವ ಮೂಲಕ ಸಾರ್ವಜನಿಕರು, ರೈತರಿಂದ ಹಣ ವಸೂಲಿ ಮಾಡ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಬೆನ್ನಿಗೆ ಬಿದ್ದ ಬೇತಾಳದಿಂದ ಸಚಿವ ಸ್ಥಾನ ಕೈತಪ್ಪಿತು; ಅಪ್ಪಚ್ಚು ರಂಜನ್

ಇನ್ನು ಕಳೆದ ಎರಡು ವರ್ಷದಿಂದ ಕೊರೋನಾ ಮಾರಿಗೆ ಜನರು ಕಂಗಾಲಾಗಿದ್ದಾರೆ. ಆದರೆ ಇದರ ನಡುವೆ ಮಾನವೀಯತೆ ಇಲ್ಲದೇ ಸಾವಿರಾರು ರೂಪಾಯಿ ಹಣವನ್ನ ಜನರಿಂದ ದಂಡದ ಹೆಸರಿನಲ್ಲಿ ವಸೂಲಿ ಮಾಡೋದು ಸರಿಯೇ ಎಂದು ಪ್ರಜ್ಞಾವಂತರು ಪ್ರಶ್ನೆ ಮಾಡಿದ್ದಾರೆ. ಚನ್ನಪಟ್ಟಣ ನಗರದಲ್ಲಿ ಎಲ್ಲಾ ಪೊಲೀಸರು ತಪ್ಪು ಮಾಡ್ತಿದ್ದಾರೆಂದು ಹೇಳಲು ಆಗದಿದ್ದರು ಸಹ ಕೆಲ ಅಧಿಕಾರಿಗಳು ಮಾತ್ರ ಯಾವುದೇ ಮುಲಾಜಿಲ್ಲದೇ ಸಾರ್ವಜನಿಕರಿಂದ ಹಣ ಪೀಕುತ್ತಿದ್ದಾರೆ. ನಗರ ಪೊಲೀಸ್ ಠಾಣೆ ಸರ್ಕಲ್, ಡಿ.ಟಿ.ರಾಮು ಸರ್ಕಲ್, ಕೋಟೆ ಸರ್ಕಲ್, ಎಂ.ಜಿ ರಸ್ತೆಯನ್ನ ಹೊರತು ಪಡಿಸಿದರೆ ಚನ್ನಪಟ್ಟಣ ನಗರದ ಬೇರ್ಯಾವ ಕಡೆಯೂ ಪೊಲೀಸರು ಚೆಕಿಂಗ್ ಮಾಡ್ತಿಲ್ಲ. ಈ ಸರ್ಕಲ್​ನಲ್ಲಿ ಪ್ರಮುಖವಾಗಿ ವಯಸ್ಸಾದವರು, ರೈತರು ಓಡಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಅಧಿಕಾರಿಗಳು 500 ರಿಂದ 2000 ರೂ ವರೆಗೆ ಫೈನ್ ಬರೆದು ಬಲವಂತವಾಗಿ ಹಣ ವಸೂಲಿ ಮಾಡ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಶೇರೂ ಹೋಟೆಲ್ ಸರ್ಕಲ್, ಸಾತನೂರು ಸರ್ಕಲ್, ಮದೀನಾ ಚೌಕ್, ದಾರೇಕೇರಿ ಸೇರಿದಂತೆ ಇನ್ನು ಹಲವು ಕಡೆಗಳಲ್ಲಿ ಹೆಚ್ಚಿನದಾಗಿ ಅಪ್ರಾಪ್ತ ವಯಸ್ಕರು ಬೈಕ್ ನಲ್ಲಿ ಅಡ್ಡಾ ದಿಡ್ಡಿ ಓಡಾಡುತ್ತಾರೆ. ಆದರೆ ಈ ಸರ್ಕಲ್ ಗಳಲ್ಲಿ ಪೊಲೀಸರು ಮುಖ ಕೂಡ ಹಾಕಲ್ಲ ಎಂದು ಚನ್ನಪಟ್ಟಣ ಜನರು ಚರ್ಚೆ ಮಾಡ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಯಾವುದೋ ಬೈಕ್​ನ ನಂಬರ್​ಗೆ ಫೈನ್ ಹಾಕಿ, ಇನ್ಯಾರೋ ವ್ಯಕ್ತಿಯಿಂದ ಹಣ ಪಡೆದಿರುವ ಪ್ರಕರಣವೂ ನಡೆದಿದೆ. ಬೈಕ್ ಹಿಡಿಯೋದು ಒಂದು, ಆದರೆ ಫೈನ್ ಹಾಕೋದು ಬೇರಾವುದೋ ಬೈಕ್​ಗೆ ಎಂಬ ಟೀಕೆ ಇದೆ. ಹಾಗಾಗಿ ಹೇಳಿಕೇಳಿ ಇದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ವಕ್ಷೇತ್ರವಾಗಿದ್ದು ಇಲ್ಲಿಯೇ ಜನರ ಪರಿಸ್ಥಿತಿ ಹೀಗಾಗಿರುವುದು ನಿಜಕ್ಕೂ ಬೇಸರದ ವಿಚಾರ. ಆದರೆ ಈ ಬಗ್ಗೆ ಹೆಚ್.ಡಿ.ಕೆ ಸೂಕ್ತ ಕ್ರಮವಹಿಸಬೇಕಾಗಿದೆ.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: