ಬೆಂಗಳೂರು ಸಮೀಪದ ಈ ಹಲಸಿನ ಮರಕ್ಕೆ ಹೆರಿಟೇಜ್ ಸ್ಥಾನಕ್ಕೆ ವಿಜ್ಞಾನಿಗಳ ಯತ್ನ; ಏನಿದೆ ವಿಶೇಷತೆ ಈ ಮರದಲ್ಲಿ?

ಮಾಗಡಿಯ ಈ ಹಲಸಿನ ಮರ ಬಹಳ ಖ್ಯಾತ; ಮೈಸೂರು ಮಹಾರಾಜರಿಗೆ ಬಲುಪ್ರಿಯವಾಗಿದ್ದ, ಇಂದಿರಾ ಗಾಂಧಿ ಆಗಾಗ್ಗೆ ತರಿಸಿಕೊಳ್ಳುತ್ತಿದ್ದ ಹಲಸಿನ ಹಣ್ಣು ಇದೇ ಮರದ್ದು. ಎರಡು ಶತಮಾನದಷ್ಟು ಹಳೆಯದ ಈ ಮರಕ್ಕೆ ಪಾರಂಪರಿಕ ಸ್ಥಾನ ಕೊಡಿಸಲು ವಿಜ್ಞಾನಿಗಳು ಶ್ರಮಿಸುತ್ತಿದ್ಧಾರೆ.

ಹಲಸಿನ ಹಣ್ಣು (ಇದು ಜಾಣಗೆರೆ ಹಲಸಿನ ಮರದ ಹಣ್ಣಲ್ಲ. ಸಾಂದರ್ಭಿಕ ಚಿತ್ರ ಮಾತ್ರ)

ಹಲಸಿನ ಹಣ್ಣು (ಇದು ಜಾಣಗೆರೆ ಹಲಸಿನ ಮರದ ಹಣ್ಣಲ್ಲ. ಸಾಂದರ್ಭಿಕ ಚಿತ್ರ ಮಾತ್ರ)

  • Share this:
ಬೆಂಗಳೂರು: ಉದ್ಯಾನನಗರಿಯಿಂದ ತುಸು ದೂರದಲ್ಲಿರುವ ಮಾಗಡಿಯಲ್ಲಿ ದೊಡ್ಡ ಆಲದಮರ ಬಹಳ ಖ್ಯಾತಿ ಹೊಂದಿದೆ. ಇದೇ ಮಾಗಡಿಯಲ್ಲಿ ಮತ್ತೊಂದು ಬೃಹತ್ ಮರ ವಿಖ್ಯಾತವಾಗಿದೆ. ಇದು 250 ವರ್ಷ ಹಳೆಯ ಹಲಸಿನ ಮರ. ಬೆಂಗಳೂರಿನಿಂದ ಕೇವಲ 40 ಕಿ ಮೀ ದೂರದಲ್ಲಿರುವ ಸ್ಥಳವೊಂದರಲ್ಲಿ ಹಲಸಿನ ಮರವಿದ್ದು (Jackfruit Tree), ರಾಜ್ಯದ ಆ ತಳಿಯಲ್ಲೇ ಅತ್ಯಂತ ಹಳೆಯದೆನಿಸದ ಮತ್ತು ಇಡೀ ದೇಶದಲ್ಲೇ ಅತ್ಯಂತ ಪುರಾತನ ಹಲಸಿನ ಹಣ್ಣಿನ ಮರವೆಂದು ನಂಬಲಾಗಿದೆ. ಮಾಗಡಿ ತಾಲೂಕಿನ ಜಾಣಗೆರೆ (Janagere Village of Magadi) ಗ್ರಾಮದಲ್ಲಿರುವ ಈ ಹಲಸಿನ ಮರಕ್ಕೆ ‘ಪರಂಪರೆ ಮರ’ (Heritage Tree) ಸ್ಥಾನಮಾನ ಪಡೆಯಲು ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳು ಶ್ರಮಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಈ ಹಲಸಿನ ಮರವು ಬೃಹತ್ ಮೇಲಾವರಣವನ್ನು (Canopy) ಹೊಂದಿದೆ. 19.5 ಮೀಟರ್ ಎತ್ತರ ಇರುವ ಈ ಮರದ ಕಾಂಡವು 6.5 ಮೀ ಸುತ್ತಳತೆ ಹೊಂದಿದೆ. ಬೇಸಿಗೆಯಲ್ಲಿ ಈ ಮರದ ಹಣ್ಣುಗಳನ್ನು ಸವಿಯಲು ಗ್ರಾಮಕ್ಕೆ ಬರುವ ಜನರಿಗೆ ಬಹಳ ದೂರದಿಂದಲೇ ಈ ಮರ ಕಾಣ ಸಿಗುತ್ತದೆ.

ಸಂರಕ್ಷಣೆ ಗ್ರಾಮಸ್ಥರೆಲ್ಲರೂ ಭಾಗಿ:

ಈ ಮರದ ಮಾಲೀಕರಾದ ರವೀಶ್ ಜೆ ಆರ್ ಇದರ ರಕ್ಷಣೆಗಾಗಿ ಬೇಲಿ ಹಾಕಿದ್ದಾರೆ. ಅವರು ಈ ಮರದ 10ನೇ ತಲೆಮಾರಿನ ಮಾಲೀಕ. ಮತ್ತು ಕೇವಲ ಆ ಕುಟುಂಬಸ್ಥರು ಮಾತ್ರವಲ್ಲ ಇಡೀ ಸಮುದಾಯವೇ ಈ ಮರವನ್ನು ರಕ್ಷಣೆ ಮಾಡುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ವಯಸ್ಸು ಒಂದೇ ಈ ಮರದ ವಿಶೇಷತೆ ಅಲ್ಲ, ಈ ಮರದ ಹಣ್ಣು ಅತ್ಯಂತ ರುಚಿಕರವಾಗಿದ್ದು, ಮರವು ನಿರಂತರವಾಗಿ ಅಧಿಕ ಸಂಖ್ಯೆಯಲ್ಲಿ ಗುಣಮಟ್ಟದ ಹಣ್ಣುಗಳನ್ನು ನೀಡುವ ಸಾಮರ್ಥ್ಯ ಹೊಂದಿರುವುದು ಕೂಡ ಒಂದು ವಿಷೇಶತೆಯೇ ಸರಿ. “ಮರವು ವರ್ಷಕ್ಕೆ 8 ಕೆಜಿ ಹಾಗೂ 20 ಕೆಜಿ ನಡುವಿನ ತೂಕದ, 250 - 300 ಹಣ್ಣುಗಳನ್ನು ನೀಡುತ್ತದೆ. ಹಣ್ಣಿನ ಗಾತ್ರದ ಆಧಾರದ ಮೇಲೆ ಪ್ರತಿ ಹಣ್ಣು 300 ರೂ.ಗಳಿಂದ 500 ರೂ.ಗಳ ವರೆಗೆ ಆದಾಯ ನೀಡುತ್ತದೆ” ಎನ್ನುತ್ತಾರೆ ಬೆಂಗಳೂರು ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿ ಕೆ. ನಾರಾಯಣ ಗೌಡ.

ಮರಕ್ಕೆ ಸಾಂಸ್ಕೃತಿಕ ಸ್ಥಾನಮಾನ ಕೊಡಿಸುವ ಪ್ರಯತ್ನದಲ್ಲಿ, ಅದರ ಗುಣಲಕ್ಷಣಗಳನ್ನು ವೈಜ್ಞಾನಿಕವಾಗಿ ನಿರ್ಣಯಿಸಲು ಪರಿಶೀಲನೆ ನಡೆಸಿದ ನಾಲ್ವರು ಸದಸ್ಯರ ತಂಡದಲ್ಲಿ ಅವರು ಕೂಡ ಒಬ್ಬರು.

ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಅಧ್ಯಯನ ಕಡ್ಡಾಯದ ವಿರುದ್ಧ PIL; ಕೇಂದ್ರಕ್ಕೆ High Court ಮಹತ್ವದ ಸೂಚನೆ

ಮಾಗಡಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ವಿಕಾಸ್, ಖ್ಯಾತ ತೋಟಗಾರಿಕಾ ವಿಜ್ಞಾನಿ ಹಿತ್ತಲಮನಿ ಮತ್ತು ನರ್ಸರಿ ಉದ್ಯಮಿ ಕರಿಯಣ್ಣರನ್ನು ಒಳಗೊಂಡಿದ್ದ ತಂಡವು, ಈ ಮರ ಮತ್ತು ಅದರ ಹಣ್ಣುಗಳ ವಿವಿಧ ಗುಣಲಕ್ಷಣಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿದೆ.

ಮೊಳಕೆ ಮತ್ತು ನಾಟಿ:

ಮರವು ಲಕ್ಷಗಟ್ಟಲೆ ಮೊಳಕೆ ಮತ್ತು ನಾಟಿಗಳಿಗೆ ಯೋಗದಾನ ನೀಡಿದೆ. 1960ರಲ್ಲಿ ಆಗಿನ ತೋಟಗಾರಿಕ ನಿರ್ದೇಶಕ ಎಂ.ಎಚ್. ಮರಿಗೌಡ ಅವರೇ ಸ್ವತಃ ಜಾಣಗೆರೆ ಹಲಸಿನ ಮರದ ಸಸಿಗಳ ಸಂಖ್ಯಾವೃದ್ಧಿ ಮಾಡುವ ಕಾರ್ಯಕ್ಕೆ ಮುಂದೆ ಬಂದಿದ್ದರು ಎನ್ನುತ್ತಾರೆ ಡಾ. ನಾರಾಯಣ ಗೌಡ.

ಮರಕ್ಕೆ ಪಾರಂಪರಿಕ ಸ್ಥಾನಮಾನ ಪಡೆಯಲು ವಿಜ್ಞಾನಿಗಳು, ವೈಜ್ಞಾನಿಕ ದತ್ತಾಂಶಗಳ ಜೊತೆಗೆ ಕೇಂದ್ರದ ಅಧಿಕಾರಿಗಳಿಂದ ಪ್ರಸ್ತಾವನೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Bitcoin Scam: ಶ್ರೀಕಿಗೆ ಕಾಂಗ್ರೆಸ್​ನವರೆ ಏನಾದರು ಮಾಡಿ ಸರ್ಕಾರದ ಮೇಲೆ ಹಾಕುತ್ತಾರಾ ಎಂಬ ಆತಂಕವಿದೆ; ಗೃಹ ಸಚಿವ ಅರಗ ಜ್ಞಾನೇಂದ್ರ

ನಾಲ್ವಡಿ ಕೃಷ್ಣರಾಜ ಒಡೆಯರ್​ಗೆ ಪ್ರಿಯವಾಗಿದ್ದ ಹಣ್ಣು: 

20ನೇ ಶತಮಾನದ ಮೊದಲಾರ್ಧದಲ್ಲಿ ಹಿಂದಿನ ಮೈಸೂರು ಸಾಮ್ರಾಜ್ಯವನ್ನು ಆಳಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ದಿಷ್ಟವಾಗಿ ಜಾಣಗೆರೆ ಹಲಸಿನ ಹಣ್ಣಿನ ವಿಶೇಷ ಗುಣಗಳು ಮತ್ತು ಅತ್ಯುತ್ತಮ ರುಚಿಯಿಂದ ಪ್ರಭಾವಿತರಾಗಿದ್ದರು ಎಂದು ಹೇಳುತ್ತಾರೆ ಗ್ರಾಮಸ್ಥರು. ಈ ಹಣ್ಣುಗಳನ್ನು ಆಗಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೂ ಕಳುಹಿಸಲಾಗುತ್ತಿತ್ತು ಎನ್ನುತ್ತಾರೆ ಅವರು.

ಬೆಂಗಳೂರನ್ನು 16ನೇ ಶತಮಾನದಲ್ಲಿ ಆಳಿದ, ಮಾಗಡಿ ತಾಲೂಕಿನವರೇ ಆದ ಕೆಂಪೇಗೌಡರು ಆಗ ಈ ಪ್ರದೇಶದಲ್ಲಿ ಪರಿಚಯಿಸಿದ ಹಲಸಿನ ಹಣ್ಣಿನ ಆರಂಭಿಕ ಮೊಳಕೆ ಸಂತತಿಗಳಲ್ಲಿ ಇದು ಕೂಡ ಒಂದಾಗಿರಬಹುದು ಎಂಬುವುದು ಕೆಲವು ಗ್ರಾಮಸ್ಥರ ನಂಬಿಕೆ. ಆದರೆ, ಈ ನಂಬಿಕೆ ವೈಜ್ಞಾನಿಕವಾಗಿ ಮತ್ತು ಐತಿಹಾಸಿಕವಾಗಿ ಮಾನ್ಯತೆ ಪಡೆದಿಲ್ಲ.

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: