Corona Effect: ಚನ್ನಪಟ್ಟಣದ ವೀಳ್ಯದೆಲೆ ಪಾಕಿಸ್ತಾನಕ್ಕೆ ಹೋಗ್ತಿತ್ತಂತೆ, ಈಗ ಊರಲ್ಲೇ ಕೊಳ್ಳುವವರಿಲ್ಲ !

ಒಂದು ಕಾಲದಲ್ಲಿ ವೀಳ್ಯದೆಲೆಯನ್ನು ಬೇರೆ ದೇಶಗಳು ಕಾದು ಕೊಳ್ಳುತ್ತಿದ್ದವು. ಆದ್ರೆ ಕೊರೊನಾ ಕಷ್ಟಕಾಲದಿಂದ ಬಳ್ಳಿಗಳಲ್ಲೇ ಎಲೆ ಉಳಿದುಹೋಗುವಂತಾಗಿದೆ. ವರ್ಷವಿಡೀ ಶ್ರಮವಹಿಸಿ ಬೆಳೆದರೂ ಕೈಗೆ ಏನೂ ಸಿಗುತ್ತಿಲ್ಲ ಎನ್ನುವ ಸಂಕಷ್ಟ ರೈತರದ್ದು.

ಬೆಳೆಯೊಂದಿಗೆ ರೈತ

ಬೆಳೆಯೊಂದಿಗೆ ರೈತ

  • Share this:
ಚನ್ನಪಟ್ಟಣ : ನಮ್ಮ ಸಂಸ್ಕೃತಿಯ ಪ್ರಕಾರವಾಗಿ ಯಾವುದೇ ಶುಭ ಮತ್ತು ಅಶುಭ ಸಮಾರಂಭದಲ್ಲಿ ವೀಳ್ಯದೆಲೆ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ವೀಳ್ಯದೆಲೆ ಇದ್ದರೆ ಸಾಕು ಆ ಕಾರ್ಯಕ್ರಮಕ್ಕೆ ಒಂದು ಘನತೆ. ಆದರೆ ಈಗ ಅದೇ ವೀಳ್ಯದೆಲೆಯನ್ನ ಮಾರಾಟ ಮಾಡಲಾಗದೇ ಬೆಳೆಗಾರರು ಕಂಗಾಲಾಗಿದ್ದಾರೆ. ವ್ಯಾರಸ್ಥರು ಸಹ ಖರೀದಿ ಮಾಡಲು ಮುಂದೆ ಹೋಗ್ತಿಲ್ಲ. ಇದಕ್ಕೆಲ್ಲಾ ಕಾರಣ ಕೊರೋನಾ ಮಹಾಮಾರಿ. ಈ ಕುರಿತ ವರದಿ ಇಲ್ಲಿದೆ.. 

ಹೌದು, ರೇಷ್ಮೆನಗರಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹತ್ತಕ್ಕೂ ಹೆಚ್ಚು  ಗ್ರಾಮಗಳಲ್ಲಿ ವೀಳ್ಯದೆಲೆ ಬೆಳೆಯುವುದರಲ್ಲಿ ಇಲ್ಲಿನ ರೈತರು ಬಹಳ ಹೆಸರುವಾಸಿ.‌ ಒಂದು ಕಾಲಕ್ಕೆ ಪಾಕಿಸ್ತಾನಕ್ಕೂ ಸಹ ಬೊಂಬೆನಗರಿಯ ವೀಳ್ಯದೆಲೆಗಳು ರಫ್ತಾಗುತ್ತಿತ್ತು ಅಂದರೆ ನಾವು ನೀವೆಲ್ಲರೂ ಸಹ ನಂಬಲೇಬೇಕು. ಚನ್ನಪಟ್ಟಣದ ಎಲೆಭೂಹಳ್ಳಿ, ಅರಳಾಳುಸಂದ್ರ, ಸಿಂಗರಾಜಪುರ, ನಾಗವಾರ, ಬೊಮ್ಮನಾಯಕನಹಳ್ಳಿ, ಬೇವೂರು, ಬೇವೂರುಮಂಡ್ಯ ಸೇರಿ ಇನ್ನು ಹಲವು ಗ್ರಾಮಗಳಲ್ಲಿ ವೀಳ್ಯದೆಲೆಯನ್ನ ಅತಿಹೆಚ್ಚಾಗಿ ಬೆಳೆಯಲಾಗುತ್ತೆ. ಇದರ ಜೊತೆಗೆ ರಾಜ್ಯದಲ್ಲಿಯೇ ಚನ್ನಪಟ್ಟಣ ತಾಲೂಕು ವೀಳ್ಯದೆಲೆ ಬೆಳೆಯುವುದರಲ್ಲಿ ನಂ.1 ಎಂದು ಸಹ ಹೇಳಲಾಗುತ್ತೆ. ಆದರೆ ಕೊರೋನಾ ಎರಡನೇ ಅಲೆ ಬಂದಾಗಿನಿಂದಲೂ ಸಹ ಇಲ್ಲಿನ ರೈತರು ಬೆಳೆಯುತ್ತಿರುವ ವೀಳ್ಯದೆಲೆಗೆ ಮಾರ್ಕೆಟ್ ನಲ್ಲಿ ಸೂಕ್ತ ಬೆಲೆಸಿಗುತ್ತಿಲ್ಲ. ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದ ಬೆಳೆಗೆ ಕೊರೋನಾ ಹೆಮ್ಮಾರಿ ಫುಲ್ ಬ್ರೇಕ್ ಹಾಕಿದೆ. ಹೊರದೇಶ, ಹೊರರಾಜ್ಯಕ್ಕೆ ಹೋಗ್ತಿದ್ದ ವೀಳ್ಯದೆಲೆಗೆ ಈಗ ಕರ್ನಾಟಕದಲ್ಲಿಯೇ ಬೇಡಿಕೆ ಕಡಿಮೆಯಾಗಿದೆ.

ಇದನ್ನೂ ಓದಿ: Money Tips: ನಿಮ್ಮ ಬಳಿ ಹಳೇ 2 ರೂಪಾಯಿ ನಾಣ್ಯ ಇದ್ಯಾ? 5 ಲಕ್ಷ ರೂಪಾಯಿ ಸಿಗುತ್ತೆ ನೋಡಿ !

ಕೊರೋನಾ ಲಾಕ್ ಡೌನ್ ಮುನ್ನ ಒಂದು ಪಿಂಡಿ ಅಂದರೆ 100 ಕಟ್ಟು ಎಲೆಗೆ ಬರೋಬ್ಬರಿ 6 ರಿಂದ 8 ಸಾವಿರ ರೂಪಾಯಿವರೆಗೆ ಬೆಲೆಯಿತ್ತು. ಆದರೆ ಎರಡನೇ ಅಲೆಯ ಕೊರೋನಾದಿಂದಾಗಿ ಕೇವಲ 1500 - 2000 ಸಾವಿರ ₹ ಗೆ ಬೆಲೆ ಕುಸಿತ ಕಂಡಿದೆ. ಇನ್ನು ಈ ಸಂದರ್ಭದಲ್ಲಿ ಯಾವುದೇ ಶುಭಸಮಾರಂಭಗಳು ನಡೆಯುತ್ತಿಲ್ಲ. ಜೊತೆಗೆ ಅಂಗಡಿಮುಂಗಟ್ಟುಗಳು ತೆರೆಯದ ಕಾರಣ ಜನರ ಜೊತೆಗೆ ಸಣ್ಣಪುಟ್ಟ ಅಂಗಡಿ ವ್ಯಾರಸ್ಥರು ಸಹ ಖರೀದಿ ಮಾಡ್ತಿಲ್ಲ. ಇನ್ನು ಹೊರರಾಜ್ಯಗಳಾದ ಕೇರಳಾ, ತಮಿಳುನಾಡು, ಆಂಧ್ರಪ್ರದೇಶಕ್ಕೆ ರಫ್ತಾಗುತ್ತಿದ್ದ ವೀಳ್ಯದೆಲೆ ಈಗ ನಮ್ಮ ರಾಜ್ಯದಲ್ಲಿಯೇ ವ್ಯಾಪಾರ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಮೊದಲನೇ ಅಲೆ ಬಂದಾಗಲೂ ಸಹ ವೀಳ್ಯದೆಲೆ ಬೆಳೆಗಾರರಿಗೆ ಇದೇ ಸಮಸ್ಯೆ ಎದುರಾಗಿತ್ತು. ಆದರೆ ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದಿಂದ ಯಾವುದೇ ನೆರವು ಸಿಗಲಿಲ್ಲ, ಹಾಗಾಗಿ ಈಗಲಾದರೂ ಸಹ ನಮ್ಮ ನೆರವಿಗೆ ಸರ್ಕಾರ ಬರಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: Weight Loss: ಅನ್ನ ತಿನ್ನೋದು ಬಿಟ್ರೆ ಸಣ್ಣಗಾಗ್ತಾರಾ? ಅನ್ನಕ್ಕೂ ದೇಹತೂಕಕ್ಕೂ ಇರೋ ನಂಟೇನು?


ಕೊಪ್ಪಳದಲ್ಲೂ ರೈತರದ್ದು ಇದೇ ಗೋಳು: ಕೊಪ್ಪಳ ಜಿಲ್ಲೆಯ ಡಂಬರಳ್ಳಿ, ಬೇಳೂರು,  ಮಡಿಕೆರಿ, ಯರಗೇರಾ, ಹನುಮಸಾಗರ ಸೇರಿದಂತೆ ಹಲವು ಕಡೆ ಸುಮಾರು 50 ಹೆಕ್ಟರ್ ಪ್ರದೇಶದಲ್ಲಿ ವಿಳ್ಯೆದೆಲೆ ಯನ್ನು ಬೆಳೆಯುತ್ತಾರೆ, ಅಧಿಕ ತೇವಾಂಶ, ಗೊಬ್ಬರ, ಎಲೆಗಳನ್ನು ಬೆಳೆಯಲು ವರ್ಷವಿಡೀ ದುಡಿಯುವ ರೈತನಿಗೆ ಉತ್ತಮ ಆದಾಯ ತರುವ ಬೆಳೆಯು ಆಗಿದೆ, ಆದರೆ ಕಳೆದ ವರ್ಷ ಹಾಗು ಈ ವರ್ಷ ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದು ಇದರಿಂದ ವಿಳ್ಯೆದೆಲೆ ಬೆಳೆದ ರೈತನಿಗೆ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಿದ್ದಾನೆ. ತೋಟದಲ್ಲಿಯೇ ಎಲೆಗಳು ಉಳಿಯುವಂತಾಗಿದೆ.  ಪ್ರತಿ ಎಕರೆಗೆ ಪ್ರತಿ ತಿಂಗಳು 10-15 ಪೆಂಡಿ ವಿಳ್ಯೆದೆಲೆ ಬೆಳೆದು ಮಾರುಕಟ್ಟೆಯಲ್ಲಿ 5-6 ಸಾವಿರ ರೂಪಾಯಿಗೆ ಮಾರಾಟ ಮಾಡಿ ಪ್ರತಿ ತಿಂಗಳು 50 ಸಾವಿರ ರೂಪಾಯಿಯಷ್ಟು ಆದಾಯ ಬರುತ್ತಿತ್ತು, ಈಗ ಮಾರುಕಟ್ಟೆಗೆ ಹೋದರೆ ಬಹಳಷ್ಟು ಕಡಿಮೆ ಕೇಳುತ್ತಾರೆ, ಕೇವಲ 1000-2000 ರೂಪಾಯಿ ಕೇಳುತ್ತಿದ್ದಾರೆ,ವಿಳ್ಯೆದೆಲೆ ಕೋಯ್ಲು ಮಾಡಲು ಕಾರ್ಮಿಕರಿಗೆ ಈ ಹಣ ಸಾಲುತ್ತಿಲ್ಲ, ತೋಟಗಾರಿಕೆ ಬೆಳೆಯಾಗಿರುವ ವಿಳ್ಯೆದೆಲೆ ಗೆ ಕಳೆದ ವರ್ಷ ಪರಿಹಾರ ಬಂದಿಲ್ಲ, ಈ ವರ್ಷವಾದರೂ ಸಮಿಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರ ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟರ್ ಗೆ 10 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ, ಕಳೆದ ವರ್ಷವೂ ಸಹ ತೋಟಗಾರಿಕೆ ಬೆಳೆಗೆ ಸರಕಾರದಿಂದ ಪರಿಹಾರ ಘೋಷಿಸಿ ನೀಡಿದೆ, ಆದರೆ ತೋಟಗಾರಿಕೆ ಬೆಳೆಗಾರರಿಗೆ ಸಿಕ್ಕ ಪರಿಹಾರ ಅತ್ಯಲ್ಪವಾಗಿದೆ. ಕಳೆದ ವರ್ಷ ವಿಳ್ಯೆದೆಲೆ ಬೆಳೆಗಾರರಿಗೆ ಪರಿಹಾರ ನೀಡಿಲ್ಲ, ಕಂದಾಯ ಇಲಾಖೆಯ ಅಧಿಕಾರಿಗಳು ವಿಳ್ಯೆದೆಲೆ ತೋಟಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ, ಆದರೆ ಪರಿಹಾರ ಮಾತ್ರ ನೀಡಿಲ್ಲ ಎಂದು ರೈತರು ದೂರಿದ್ದಾರೆ.ಜೀವನವನ್ನೇ ಕಟ್ಟಿಕೊಂಡಿದ್ದ ನೂರಾರು ಜನ ರೈತರು ವೀಳ್ಯದೆಲೆ ಬೆಳೆಯಲ್ಲಿಯೇ ತಮ್ಮ ಭವಿಷ್ಯವನ್ನ ಕಟ್ಟಿಕೊಂಡಿದ್ದಾರೆ.‌ ಬೇರ್ಯಾವುದೇ ಉದ್ಯೋಗವನ್ನ ಮಾಡದೇ ಇದೊಂದನ್ನೇ ನೆಚ್ಚಿಕೊಂಡು ಇದ್ದಾರೆ. ಆದರೆ ಕೊರೋನಾ ಮಹಾಮಾರಿ ಆ ನೂರಾರು ಜನರ ಜೀವನವನ್ನೇ ಹಾಳು ಮಾಡಿದೆ. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದ ರೈತರು ಈಗ ರೂಪಾಯಿಗೂ ಸಹ ಕಷ್ಟಪಡುವ ಹೀನಾಯ ಪರಿಸ್ಥಿತಿ ಬಂದಿದೆ. ಹಾಗಾಗಿ ಈ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕಿದೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಲಿ ಎಂದು ರೈತರು ಮನವಿ ಮಾಡಿದ್ದಾರೆ.
Published by:Soumya KN
First published: