Exclusive – ಅಪಾಯದಲ್ಲಿ ಚನ್ನಪಟ್ಟಣದ ಈ ಸರ್ಕಾರಿ ಶಾಲೆ; ಆತಂಕದಲ್ಲಿ ಪೋಷಕರು

ಒಂದೆಡೆ ಶಾಲೆಗಳನ್ನ ಆರಂಭಿಸಲು ಸರ್ಕಾರ ಪ್ಲಾನ್ ಮಾಡುತ್ತಿದೆ. ಇನ್ನೊಂದೆಡೆ ಸರ್ಕಾರಿ ಶಾಲೆಗಳ ಕೊಠಡಿಗಳು ಸಂಪೂರ್ಣ ಶಿಥಿತಗೊಂಡ ಸ್ಥಿತಿಯ್ಲಿವೆ. ಮಕ್ಕಳಿಗೆ ಈ ಕೊಠಡಿಗಳೇ ಮಾರಕವಾಗಿವೆ. ಚನ್ನಪಟ್ಟಣದ ಸರ್ಕಾರಿ ಶಾಲೆಯ ದುಃಸ್ಥಿತಿಯ Exclusive ವರದಿ ಇಲ್ಲಿದೆ.

ಚನ್ನಪಟ್ಟಣದ ಕೂಡ್ಲೂರು ಸರ್ಕಾರಿ ಶಾಲೆಯ ದುಃಸ್ಥಿತಿ

ಚನ್ನಪಟ್ಟಣದ ಕೂಡ್ಲೂರು ಸರ್ಕಾರಿ ಶಾಲೆಯ ದುಃಸ್ಥಿತಿ

  • Share this:
ರಾಮನಗರ: ಹಾಳಾಗಿರೋ ಕೊಠಡಿಗಳು. ಬಿರುಕು ಬಿಟ್ಟಿರೋ ಗೋಡೆಗಳು. ಹಾರಿ ಹೋಗಿರೋ ಹಂಚುಗಳು. ಮುರಿದು ಬಿದ್ದಿರೋ ಬಾಗಿಲುಗಳು. ಶಿಥಿಲಗೊಂಡ ಸರ್ಕಾರಿ ಶಾಲೆ.ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಕೂಡ್ಲೂರು ಗ್ರಾಮದ ಸರ್ಕಾರಿ ಶಾಲೆ ಸಂಪೂರ್ಣವಾಗಿ ಶಿಥಿತಗೊಂಡಿದೆ. ಶಾಲೆಗಳು ಆರಂಭಗೊಂಡರೇ ಮಕ್ಕಳನ್ನ ಹೇಗೆ ಶಾಲೆಗೆ ಕಳುಹಿಸುವುದು ಎಂಬ ಚಿಂತೆ ಒಂದೆಡೆ ಪೋಷಕರನ್ನ ಕಾಡುತ್ತಿದೆ. ಅಂದಹಾಗೆ ಕಳೆದ ಎರಡು ವರ್ಷಗಳಿಂದ ಬಂದ್ ಆಗಿರೋ ತರಗತಿಗಳನ್ನ ಮತ್ತೆ ಆರಂಭಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಕೋವಿಡ್ ನಿಂದಾಗಿ ಶಾಲೆಗಳು ಬಂದ್ ಆಗಿವೆ. ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿರೋ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ಶಾಲೆಗಳು ಆರಂಭಗೊಳ್ಳುತ್ತವೆ ಎಂದು ಹೇಳಲಾಗುತ್ತಿದೆ. ಆದರೆ, ಶಾಲೆಗಳು ಆರಂಭಗೊಂಡರೆ ಮಕ್ಕಳನ್ನ ಎಲ್ಲಿ ಕೂರಿಸುವುದು ಎಂಬ ಚಿಂತೆ ಈ ಶಾಲೆಯ ಶಿಕ್ಷಕರನ್ನ ಕಾಡುತ್ತಿದೆ. ಅಂದಹಾಗೆ ಕೂಡ್ಲೂರು ಗ್ರಾಮದ ಸರ್ಕಾರಿ ಶಾಲೆ ಸಂಪೂರ್ಣವಾಗಿ ಹಾಳಾಗಿದೆ. ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಕೊಠಡಿಗಳು ಗಬ್ಬು ನಾರುತ್ತಿವೆ. ಇನ್ನು ಹಂಚುಗಳು ಹಾರಿಹೊಗಿದ್ದು, ಮಳೆ ಬಂದರೆ ನೀರೆಲ್ಲ ಕೊಠಡಿಯ ಒಳಗೇ ಹೋಗುತ್ತದೆ. ಅಲ್ಲದೆ ಕೊಠಡಿಗಳ ಬಾಗಿಲುಗಳು ಮುರಿದು ಹೋಗಿವೆ. ಇಂತಹ ಶಾಲೆಗೆ ಮಕ್ಕಳನ್ನ ಹೇಗೆ ಕಳುಹಿಸುವುದು ಎಂಬ ಚಿಂತೆ ಪೋಷಕರನ್ನಕಾಡುತ್ತಿದೆ.

ಅಂದಹಾಗೆ ಕೂಡ್ಲೂರು ಗ್ರಾಮದ ಸರ್ಕಾರಿ ಶಾಲೆ 1924ರಲ್ಲೇ ಆರಂಭವಾಗಿದೆ. ಸದ್ಯ 1 ರಿಂದ 7ನೇ ತರಗತಿವರೆಗೂ 141 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ ಎಲ್ ಕೆ ಜಿ ಹಾಗೂ ಯುಕೆಜಿ ತರಗತಿಗಳಿಗೆ ಈಗಾಗಲೇ 80 ಮಕ್ಕಳು ದಾಖಲಾಗಿದ್ದಾರೆ. ಸದ್ಯ ಶಾಲೆಯಲ್ಲಿ ಎಂಟು ಕೊಠಡಿಗಳು ಇದ್ದು, ಅದರಲ್ಲಿ ಆರು ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿವೆ. ಕೊಠಡಿಗಳ ಬಹುತೇಕ ಹಂಚುಗಳು ಹಾರಿ ಹೋಗಿವೆ. ಎರಡು ಕೊಠಡಿಗಳು ಮಾತ್ರ ಸರಿಯಾಗಿದ್ದಾವೆ. ಇನ್ನುಳಿದವುಗಳ ಬಾಗಿಲುಗಳು ಮುರಿದು ಬಿದ್ದಿವೆ. ಇನ್ನು ಶಾಲೆಯ ಆವರಣದಲ್ಲಿಯೇ ದೊಡ್ಡದಾದ ನೀರಿನ ಹೆಡ್ ಟ್ಯಾಂಕ್ ಇದ್ದು, ಅದು ಕೂಡ ಶಿಥಿಲಗೊಂಡಿದೆ. ಯಾವಾಗ ಬೇಕಾದರೂ ಬೀಳುವಂತಿದೆ. ಏನಾದರೂ ಮಕ್ಕಳು ಆಟವಾಡುವಾಗ ಬಿದ್ದರೆ ಯಾರು ಹೊಣೆ ಎಂಬ ಆತಂಕ ಕೂಡ ಶಿಕ್ಷಕರು ಹಾಗೂ ಪೋಷಕರನ್ನ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಹೀಗಾಗಿ ಶಾಲೆಗೆ ಕೊಠಡಿಗಳ ನಿರ್ಮಾಣ ಮಾಡಿಕೊಡಿ ಎಂದು ಶಿಕ್ಷಕರು ಕೂಡ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Viral Post - ಬೆಳ್ಳಿ ಪದಕ ಗೆದ್ದ ಚಾನು ಅವರವನ್ನು ಅನುಕರಿಸಿ ಭೇಷ್ ಎನಿಸಿಕೊಂಡ ಪುಟಾಣಿ

ಒಟ್ಟಾರೆ ಸರ್ಕಾರ, ತರಗತಿಗಳನ್ನ ಆರಂಭಿಸುವ ಮೊದಲು ಶಾಲೆಗಳ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಂಡು ಶಾಲೆಗಳನ್ನ ಆರಂಭಿಸಿದರೆ ಮಕ್ಕಳಿಗೆ ಉತ್ತಮ ಶಿಕ್ಷಣಸಿಗಲಿದೆ. ಇಲ್ಲವಾದರೆ ಶಿಥಿಲಗೊಂಡ ಶಾಲೆಗಳಲ್ಲೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಬರಲಿದೆ. ಸದ್ಯ ಮಕ್ಕಳನ್ನ ಶಾಲೆಯ ಆವರಣದಲ್ಲಿಯೇ ಕೂರಿಸಲಾಗುತ್ತಿದೆ. ಮಾಜಿ‌ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮದ ಜನರು ಒತ್ತಾಯಿಸಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: