Ramanagara: ಸ್ವಂತ ಮನೆ, ವಿದ್ಯುತ್, ಶೌಚಾಲಯ ಕೂಡ ಇಲ್ಲದೆ ಕಾಡುಪ್ರಾಣಿಗಳಂತೆ ಬದುಕುತ್ತಿರುವ ಇರುಳಿಗರು

ಕೂಲಿ‌ ಕೆಲಸ ಮಾಡಿಕೊಂಡು ಜೀವನ ಮಾಡುವ ಈ ಸಮುದಾಯದ ಜನರು ತಮ್ಮ ಜೀವನಕ್ಕೆ ಯಾವುದೇ ರೀತಿಯ ಭದ್ರತೆ ಇಲ್ಲದೆ ಬದುಕುತ್ತಿದ್ದಾರೆ. ಆದರೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸಹ ಹಾಗೆಯೇ ಇದ್ದಾರೆ. ಇನ್ನು ಮುಂದಾದರು ಈ ಜನರ ಕಷ್ಟಕ್ಕೆ ಸ್ಪಂದಿಸಲಿ ಎಂಬುದು ನಮ್ಮ ಆಶಯ.

ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ರಾಮನಗರದ ಇರುಳಿಗ ಸಮುದಾಯದ ಜನರು.

ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ರಾಮನಗರದ ಇರುಳಿಗ ಸಮುದಾಯದ ಜನರು.

  • Share this:
ರಾಮನಗರ: ತಮಿಳುನಾಡಿನಲ್ಲಿ ಇರುಳಿಗ ಸಮುದಾಯದ (Eruliga Community) ಜನರು ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಕತೆಯನ್ನು ಆಧರಿಸಿದ ತಾಲಿವುಡ್​ನ ಜೈ ಭೀಮ್ (Jai Bhim Movie) ಹೆಸರಿನ ಸಿನಿಮಾ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ತಮಿಳು ಚಿತ್ರರಂಗದ ಸೂಪರ್​ಸ್ಟಾರ್ ನಟ ಸೂರ್ಯ (Tamil Actor Surya) ಅವರು ಇಲ್ಲಿ ವಕೀಲನಾಗಿ ಇರುಳಿಗ ಸಮುದಾಯದ ಅನ್ಯಾಯಕ್ಕೆ ಒಳಗಾಗ ಜನರಿಗೆ ನ್ಯಾಯವನ್ನು ಒದಗಿಸಿಕೊಡುವ ಕಥಾ ಹಂದರ ಚಿತ್ರ ಎಲ್ಲ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಬುಡಕಟ್ಟು ಜನರ ಕಷ್ಟ- ಕೋಟಲೆಗಳನ್ನು ಚಿತ್ರದಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಅದು ಸತ್ಯ ಕೂಡ. ಎಲ್ಲ ರಾಜ್ಯಗಳಲ್ಲೂ ಬುಡಕಟ್ಟು ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಅದಕ್ಕೆ ರಾಜ್ಯದ ರಾಮನಗರ ಜಿಲ್ಲೆ ಕೂಡ ಹೊರತಾಗಿಲ್ಲ.

ರಾಮನಗರ (Ramanagara)ತಾಲೂಕಿನ ಕೂಟಗಲ್‌ ಇರುಳಿಗ ಕಾಲೊನಿಯಲ್ಲಿ (Eruliga Community) 25–26 ಕುಟುಂಬಗಳು ದಶಕಗಳಿಂದ ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಯಾವೊಂದು ಮೂಲ ಸೌಕರ್ಯವೂ ಈ ನಿವಾಸಿಗಳಿಗೆ ಇಲ್ಲ. ಕನಿಷ್ಠ ಶೌಚಾಲಯದ ವ್ಯವಸ್ಥೆಯೂ ಕೂಡ ಇಲ್ಲ. ಇಂದಿಗೂ ಈ ಕುಟುಂಬಗಳು ಸ್ನಾನ ಹಾಗೂ ಶೌಚಕ್ಕೆ ಬಯಲನ್ನೇ ಅವಲಂಬಿಸಿವೆ. ಗುಡಿಸಲುಗಳ ಪಕ್ಕದಲ್ಲೇ ಚರಂಡಿ ಹರಿಯುತ್ತದೆ. ಮಳೆ ಬಂದರೆ ನೀರು ಒಳಗೆ ನುಗ್ಗುತ್ತದೆ. ಪ್ರತಿ ಬಾರಿ ಮಳೆ ಬಂದ ಸಂದರ್ಭವೂ ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಇರುವ ಕೆಲಸ ಬಿಟ್ಟು ಮನೆಮಂದಿಯಲ್ಲ ಮನೆಯಲ್ಲಿನ ಸಾಮಗ್ರಿಗಳನ್ನು ಕಾಪಾಡಿಕೊಳ್ಳಬೇಕಿರುವ ಪರಿಸ್ಥಿತಿ ಇದೆ.

ವಸತಿ ರಹಿತ ಇರುಳಿಗ ಕುಟುಂಬಗಳಿಗಾಗಿ ನಿವೇಶನ ನೀಡಲು ಕೂಟಗಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆ ಜಾಗ ಗುರುತಿಸಲಾಗಿದೆ. ಹೀಗಿದ್ದೂ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ನಿವೇಶನ ನೀಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಸದ್ಯ ಕೂಟಗಲ್ ನ ಸರ್ವೆ ನಂ.117 ರಲ್ಲಿ ಇವರೆಲ್ಲರೂ ಗುಡಿಸಲುಗಳನ್ನ ಹಾಕಿಕೊಂಡು ವಾಸ ಮಾಡ್ತಿದ್ದಾರೆ. ಆದರೆ ಇವರಿಗೆ ಅದೇ ವ್ಯಾಪ್ತಿಯ 94 ನೇ ಸರ್ವೆ ನಂ.ನಲ್ಲಿ 2 ಎಕರೆ ಜಾಗವನ್ನ ನೀಡಲು ಗುರುತಿಸಲಾಗಿದೆ. ಆದರೆ ಈವರೆಗೂ ಸಹ ಆ ಭೂಮಿಯನ್ನ ಜಿಲ್ಲಾಡಳಿತ ನೀಡಿಲ್ಲ.‌

ಕಾಡುಪ್ರಾಣಿಗಳಂತೆ ಬದುಕುತ್ತಿರುವ ನೊಂದ ಅಮಾಯಕ ಜನರು

ಹೌದು, ರಾಮನಗರ ತಾಲೂಕಿನ ಕೂಟಗಲ್ ನಲ್ಲಿರುವ ಇರುಳಿಗರು ಕಾಡುಪ್ರಾಣಿಗಳ ರೀತಿಯಲ್ಲಿ ಈ ಆಧುನಿಕ ಯುಗದಲ್ಲಿಯೂ ಬದುಕುತ್ತಿದ್ದಾರೆ ಅಂದರೆ ನಾವು ನೀವು ನಂಬಲೇಬೇಕಿದೆ. ಕುಡಿಯುವ ನೀರಿಲ್ಲ, ಯಾರಿಗೂ ಮನೆಯಿಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಶೌಚಾಲಯ ಇಲ್ಲ, ವಿದ್ಯುತ್ ಸಂಪರ್ಕವೂ ಇಲ್ಲದೇ ಬದುಕುತ್ತಿರುವ ಈ ಅಮಾಯಕ ಜನರ ಬಗ್ಗೆ ಸ್ಥಳೀಯ ಶಾಸಕರು, ಅಧಿಕಾರಿಗಳ ವರ್ಗ ಏನ್ಮಾಡ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಇದನ್ನು ಓದಿ: ಭಿನ್ನಾಭಿಪ್ರಾಯಗಳಿಗೆ ಇತಿಶ್ರೀ ಹಾಡಿ, ಪಕ್ಷ ಸಂಘಟನೆಗೆ ಒತ್ತು ನೀಡಿ; JDS ಮುಖಂಡರಿಗೆ HDK ಖಡಕ್ ಸೂಚನೆ

ನಿಜಕ್ಕೂ ರೇಷ್ಮೆನಗರಿ ರಾಮನಗರ ಜಿಲ್ಲೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೇವಲ 57 KM ದೂರದಲ್ಲಿದೆ. ಅದು ಅಲ್ಲದೇ ರಾಮನಗರ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಡಳಿತ ನಡೆಸಿದ್ದಾರೆ. ಈಗ ಅವರ ಪತ್ನಿ ಶಾಸಕಿ ಅನಿತಾಕುಮಾರಸ್ವಾಮಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಈ ಕುಟುಂಬಕ್ಕೆ ತನ್ನದೇ ಆದ ಹಿನ್ನೆಲೆ ಇದೆ. ಆದರೆ ಇವರ ಕ್ಷೇತ್ರದಲ್ಲಿಯೇ ಇಂತಹದೊಂದು ಘಟನೆ ನಮಗೆ ಕಾಣುತ್ತಿದೆ ಅಂದರೆ ನಿಜಕ್ಕೂ ಬೇಸರ, ಆಶ್ಚರ್ಯ ತರುತ್ತದೆ. ಕಳೆದ 15 ವರ್ಷಕ್ಕೂ ಹೆಚ್ಚಿಗೆ ಇಲ್ಲಿ ವಾಸ ಮಾಡುತ್ತಿರುವ ಈ ಇರುಳಿಗ ಸಮುದಾಯದ ಜನರು ದಿನನಿತ್ಯ ನರಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಕೂಲಿ‌ ಕೆಲಸ ಮಾಡಿಕೊಂಡು ಜೀವನ ಮಾಡುವ ಈ ಸಮುದಾಯದ ಜನರು ತಮ್ಮ ಜೀವನಕ್ಕೆ ಯಾವುದೇ ರೀತಿಯ ಭದ್ರತೆ ಇಲ್ಲದೆ ಬದುಕುತ್ತಿದ್ದಾರೆ. ಆದರೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸಹ ಹಾಗೆಯೇ ಇದ್ದಾರೆ. ಇನ್ನು ಮುಂದಾದರು ಈ ಜನರ ಕಷ್ಟಕ್ಕೆ ಸ್ಪಂದಿಸಲಿ ಎಂಬುದು ನಮ್ಮ ಆಶಯ.

ವರದಿ : ಎ.ಟಿ. ವೆಂಕಟೇಶ್
Published by:HR Ramesh
First published: