Elephant Death- ಕಬ್ಬಾಳು ಅರಣ್ಯದಲ್ಲಿ ಕಬೀರನ ಸಾವು, ಕಣ್ಣೀರಿಟ್ಟ ಅಧಿಕಾರಿಗಳು, ಜನಸಾಮಾನ್ಯರು

ಕನಕಪುರದ ಕಬ್ಬಾಳು ಅರಣ್ಯಪ್ರದೇಶದಲ್ಲಿ 35 ವರ್ಷದ ಆನೆಯೊಂದು ಹೃದಯಾಘಾತದಿಂದ ಮೃತಪಟ್ಟ ವಿಚಾರ ಈ ಭಾಗದ ಜನರನ್ನ ರೊಚ್ಚಿಗೇಳಿಸಿದೆ. ಕಾಡಿನಿಂದ ಆನೆಗಳು ನಾಡಿಗೆ ಬರುವಂತಹ ಸ್ಥಿತಿಗೆ ಸರ್ಕಾರವೇ ಹೊಣೆ ಎಂದು ಇವರು ದೂರಿದ್ಧಾರೆ.

ಕನಕಪುರದ ಕಬ್ಬಾಳು ಅರಣ್ಯದಲ್ಲಿ ಮೃತಪಟ್ಟ ಆನೆ

ಕನಕಪುರದ ಕಬ್ಬಾಳು ಅರಣ್ಯದಲ್ಲಿ ಮೃತಪಟ್ಟ ಆನೆ

  • Share this:
ರಾಮನಗರ: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ (Kabbalu Forest Area) ಆನೆಯೊಂದು ಸಾವನ್ನಪ್ಪಿರುವ (Elephant Death) ಘಟನೆ ನಡೆದಿದೆ. ಮೂಲಗಳ ಪ್ರಕಾರ ಆನೆ ಸಾವನ್ನಪ್ಪಿ ಒಂದು ವಾರ ಕಳೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಸಾವನ್ನಪ್ಪಿರುವ ಆನೆ ಗಂಡಾನೆಯಾಗಿದ್ದು ಅಂದಾಜು 35 ವರ್ಷ ವಯಸ್ಸು ಎಂದು ಹೇಳಲಾಗ್ತಿದೆ. ಜೊತೆಗೆ ಈ ಆನೆಗೆ ಕಬೀರ ಎನ್ನುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಆನೆ ಸಾವಿಗೆ ಹ್ಱದಯಾಘಾತ ಎಂದು ಹೇಳಲಾಗ್ತಿದೆ. ಆನೆ ಕುಳಿತುಕೊಳ್ಳುವ ಸಂದರ್ಭದಲ್ಲಿ ಎದೆಯ ಭಾಗಕ್ಕೆ ಪೆಟ್ಟಾಗಿರುವ ಕಾರಣ ಮತ್ತೆ ಮೇಲಕ್ಕೆ ಏಳಲಾಗದೇ ಹ್ಱದಯಾಘಾತವಾಗಿರುವ ಸಾಧ್ಯತೆ ಹೆಚ್ಚು ಎಂದು ಆನೆಗಳ ತಜ್ಞ ನಿಶಾಂತ್ ತಿಳಿಸಿದ್ದಾರೆ.

ಎಸಿಎಫ್ ಸೀಮಾ ಈ ವಿಚಾರವಾಗಿ ಮಾತನಾಡಿ ಈ ಭಾಗದಲ್ಲಿ 15 ಕ್ಕೂ ಹೆಚ್ಚು ಆನೆಗಳು ಇದ್ದಾವೆ. ಈಗ ಸ್ಥಳದಲ್ಲೇ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗುತ್ತೆ. ನಂತರ ಆನೆಯ ಸಾವಿಗೆ ನಿಖರವಾಗಿ ಕಾರಣ ತಿಳಿಯಲು ಆನೆ ದೇಹದ ಕೆಲ ಭಾಗಗಳನ್ನ ಸಂಗ್ರಹಾಲಯಕ್ಕೆ ಕಳುಹಿಸಲಾಗುತ್ತೆ. ನಂತರ ವರದಿಯಲ್ಲಿ ಯಾವ ಕಾರಣದಿಂದ ಆನೆ ಸಾವನ್ನಪ್ಪಿದೆ ಎಂಬ ಮಾಹಿತಿ ಸಿಗಲಿದೆ ಎಂದು ಹೇಳಿದ್ಧಾರೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಆನೆ ಸಾವನ್ನಪ್ಪಿರುವುದರಿಂದ ದೇಹ ಕೊಳೆತಿದೆ. ಸ್ಥಳದಲ್ಲಿ ಕೆಟ್ಟ ವಾಸನೆ ಪ್ರಾರಂಭವಾಗಿರುವ ಕಾರಣ ಜನರು ಸಹ ಹೆಚ್ಚಾಗಿ ಆನೆಯನ್ನ ನೋಡಲು
ಬರಲಿಲ್ಲ.

ಇದನ್ನೂ ಓದಿ: ಬಿಜೆಪಿಗೆ ಮತ್ತೊಮ್ಮೆ ‘ಲಿಂಗಾಯತ’ ತಲೆನೋವು; ವಿಜಯೇಂದ್ರ ಬಗ್ಗೆ ಸ್ವಾಮೀಜಿಗಳದ್ದೂ ತಗಾದೆ

ಕಾಡಾನೆಗಳ ರಕ್ಷಣೆಯಲ್ಲಿ ಆಡಳಿತ ನಡೆಸುವ ಸರ್ಕಾರಗಳು ವಿಫಲ:

ಇನ್ನು ಈ ಕುರಿತಾಗಿ ಸ್ಥಳದಲ್ಲಿದ್ದ ಜನರು ಆಡಳಿತ ನಡೆಸುವ ಸರ್ಕಾರಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ರೈತರು ನೆಮ್ಮದಿಯಾಗಿ ಬೆಳೆಗಳನ್ನ ಬೆಳೆಯಲು ಸಾಧ್ಯವಾಗುತ್ತಿಲ್ಲ. ಆದರೆ ಕಾಡಲ್ಲಿ ಆನೆಗಳಿಗೆ ಸೂಕ್ತ ಆಹಾರದ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡುವಲ್ಲಿ ಈವರೆಗೆ ಆಡಳಿತ ನಡೆಸುವ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಜನರು ಕಿಡಿಕಾರಿದ್ದಾರೆ.

ರಾಮನಗರ, ಚನ್ನಪಟ್ಟಣ, ಕನಕಪುರ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರ ಜಮೀನಿಗೆ ನುಗ್ಗಿ ದಾಂದಲೆ ಮಾಡುತ್ತಿರುತ್ತವೆ. ಯಾಕೆಂದರೆ ಕಾಡಿನಲ್ಲಿ ಆನೆಗಳಿಗೆ ಸೂಕ್ತ ಆಹಾರ, ನೀರಿನ ವ್ಯವಸ್ಥೆ ಇಲ್ಲದಿರುವ ಪ್ರಮುಖ ಕಾರಣದಿಂದಾಗಿ ಈ ಸಮಸ್ಯೆ ಎದುರಾಗುತ್ತಿದೆ. ಕಾಡಲ್ಲಿ ಆಹಾರ, ನೀರು ಸಮರ್ಪಕವಾಗಿ ಸಿಗದ ಹಿನ್ನೆಲೆ ಆನೆಗಳು ನಾಡಿನತ್ತ ಮುಖಮಾಡ್ತಿವೆ. ಇನ್ನು ಆಹಾರ, ನೀರಿನ ಕೊರತೆ ಎದುರಿಸುತ್ತಿರುವ ಕಾಡಾನೆಗಳು ನಿತ್ರಾಣಗೊಂಡು ಹೀಗೆ ಸಾವನ್ನಪ್ಪುತ್ತಿವೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕುರಿತಾಗಿ ಸೂಕ್ತ ಕ್ರಮವಹಿಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಡಾನೆಗಳ ಸ್ಥಿತಿ ಚಿಂತಾಜನಕವಾಗಲಿದೆ. ಜೊತೆಗೆ ನಾಡಿನ ಜನರೂ ಕೂಡ ಕಾಡುಮೃಗಗಳ ಭಯದಲ್ಲೇ ನಿತ್ಯವೂ ಕಾಲಕಳೆಯಬೇಕಾಗುತ್ತದೆ. ಹಾಗಾಗಿ ಈ ಬಗ್ಗೆ ವಿಶೇಷ ಗಮನಹರಿಸುವುದು ಅತ್ಯವಶ್ಯಕ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: