Elephant Attack: ಚನ್ನಪಟ್ಟಣದಲ್ಲಿ ಮುಂದುವರೆದ ಕಾಡಾನೆಗಳ ದಾಳಿ; ಟೊಮ್ಯಾಟೊ, ಮಾವು, ತೆಂಗು ನಾಶ

ಆನೆಗಳ ದಾಳಿಯಿಂದಾಗಿ ಬೆಳೆ ಕಳೆದುಕೊಂಡವರಿಗೆ ಸರ್ಕಾರದಿಂದ 1.45 ಕೋಟಿ ರೂ. ಪರಿಹಾರ ನೀಡಿದ್ದೇವೆಂದು ಅರಣ್ಯ ಇಲಾಖೆಯ ಅಧಿಕಾರಿ ನ್ಯೂಸ್ 18 ಗೆ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಸರ್ಕಾರದಿಂದ ಕೋಟಿ ಕೋಟಿ ಪರಿಹಾರ ಕೊಡುವ ಬದಲಾಗಿ, ಅದೇ ಹಣದಿಂದ ಆನೆಗಳು ಬರದಂತೆ ತಂತಿ ಬೇಲಿ ಕಾರಿಡಾರ್  ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ.

ಕಾಡಾನೆ ದಾಳಿಗೆ ನಾಶವಾಗಿರುವ ಮಾವು.

ಕಾಡಾನೆ ದಾಳಿಗೆ ನಾಶವಾಗಿರುವ ಮಾವು.

  • Share this:
ರಾಮನಗರ: ಕಾಡಾನೆಗಳ ದಾಳಿಗೆ (Elephant Attack) ರೈತನ ಬೆಳೆ ನಾಶವಾಗಿರುವ ಘಟನೆ ರಾಮನಗರ ಜಿಲ್ಲೆಯ (Ramanagara District) ಚನ್ನಪಟ್ಟಣದ ಭೈರಾಶೆಟ್ಟಿಹಳ್ಳಿ ಗ್ರಾಮದಲ್ಲಿ (Bairashetty Village) ನಡೆದಿದೆ. ರೈತ ಉಮೇಶ್ ಎಂಬುವರಿಗೆ ಸೇರಿದ ತೆಂಗು, ಮಾವು, ಟೊಮ್ಯಾಟೊ ಬೆಳೆ ನಾಶವಾಗಿದ್ದು 3 ಕಾಡಾನೆಗಳ ಹಿಂಡಿನಿಂದ ನಡೆದಿರುವ ದಾಳಿ ಎಂದು ಹೇಳಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಬಗ್ಗೆ ನೊಂದ ರೈತ ಉಮೇಶ್ ಮಾತನಾಡಿ, ನಷ್ಟವನ್ನ ಭರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜೊತೆಗೆ ಈ ಭಾಗದಲ್ಲಿ ಕಾಡಾನೆಗಳ ದಾಳಿಯನ್ನ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.

ಹೌದು, ರೇಷ್ಮೆನಗರಿ ರಾಮನಗರ ಜಿಲ್ಲೆಯ ರೈತರು ಕಾಡಾನೆಗಳ ದಾಳಿಯಿಂದಾಗಿ ವ್ಯವಸಾಯವೇ ಬೇಡ ಎನ್ನುವ ದುಸ್ಥಿತಿಗೆ ಬಂದಿದ್ದಾರೆ. ಜಿಲ್ಲೆಯ ಕನಕಪುರ, ರಾಮನಗರ, ಚನ್ನಪಟ್ಟಣದಲ್ಲಿ ಹೆಚ್ಚಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದು, ಮಾಗಡಿಯಲ್ಲಿಯೂ ಸಹ ಈಗೀಗ ಹೆಚ್ಚಾಗಿದೆ. ಇನ್ನು ಕಳೆದ ತಿಂಗಳುಗಳ ಹಿಂದೆ ಹಾಸನದ ಸಕಲೇಶಪುರದಿಂದ ವಲಸೆ ಬಂದಿದ್ದ ಮೌಂಟೇನ್ ಹೆಸರಿನ ಸಲಗವನ್ನ ಚನ್ನಪಟ್ಟಣದ ಗುಡ್ಡೆಅವ್ವೇರಹಳ್ಳಿ ಗ್ರಾಮ ವ್ಯಾಪ್ತಿಯ ಕಾಡಿನಲ್ಲಿ ಸೆರೆ ಹಿಡಿಯಲಾಗಿತ್ತು. ಆದರೆ ಇದನ್ನ ಹೊರತುಪಡಿಸಿ ಕನಕಪುರ, ರಾಮನಗರ, ಚನ್ನಪಟ್ಟಣ ಭಾಗದಲ್ಲಿ 48 ಕಾಡಾನೆಗಳ ದಂಡು ಬೀಡುಬಿಟ್ಟಿವೆ ಎಂದು ಬಲ್ಲಮೂಲಗಳಿಂದ ನ್ಯೂಸ್ 18 ಗೆ ಮಾಹಿತಿ ಲಭ್ಯವಾಗಿದೆ.

ಇನ್ನು ಚನ್ನಪಟ್ಟಣ - ಕನಕಪುರ ಭಾಗದಲ್ಲಿ ಹೆಚ್ಚು ನೀರಾವರಿ ಇರುವ ಕಾರಣ ಆಹಾರ ಮತ್ತು ನೀರನ್ನ ಹರಸಿಕೊಂಡು ಆನೆಗಳು ರೈತರ ಕೃಷಿ ಭೂಮಿಯ ಮೇಲೆ ದಾಳಿ ಮಾಡ್ತಿವೆ. ಆದರೆ ಈ ವಿಚಾರವಾಗಿ ಆಡಳಿತ ನಡೆಸುವ ಯಾವ ರಾಜ್ಯ ಸರ್ಕಾರಗಳು ಸಹ ಶಾಶ್ವತ ಪರಿಹಾರ ನೀಡ್ತಿಲ್ಲ. ಬದಲಾಗಿ ಪರಿಹಾರ ಎಂದು ಸಂತ್ರಸ್ತರಿಗೆ ಕವಡೆ ಕಾಸು ನೀಡ್ತಿದ್ದಾರೆ. ಇದರಿಂದಲೇ ರೈತರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಸದ್ಯ ರಾಮನಗರ ಜಿಲ್ಲೆಯಲ್ಲಿ ಒಟ್ಟು 29 ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಪ್ರಮುಖವಾಗಿ ಕಬ್ಬಾಳು, ಸಾತನೂರು, ಅಚ್ಚಲು, ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿವೆ. ಬನ್ನೇರುಘಟ್ಟ, ಕಾವೇರಿ ವನ್ಯಜೀವಿ ಧಾಮದಿಂದ ಜಿಲ್ಲೆಗೆ ಆನೆಗಳು ಬರುತ್ತಿವೆ. ನಾವು ಸಹ ಅವುಗಳನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರು. ಇನ್ನು ಕಳೆದ ವರ್ಷ ರಾಮನಗರ ಜಿಲ್ಲೆಯ ರೈತರಿಗೆ ಆನೆಗಳ ದಾಳಿಯಿಂದಾಗಿ ಬೆಳೆ ಕಳೆದುಕೊಂಡವರಿಗೆ ಸರ್ಕಾರದಿಂದ 1.45 ಕೋಟಿ ರೂ. ಪರಿಹಾರ ನೀಡಿದ್ದೇವೆಂದು ಅರಣ್ಯ ಇಲಾಖೆಯ ಅಧಿಕಾರಿ ನ್ಯೂಸ್ 18 ಗೆ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಸರ್ಕಾರದಿಂದ ಕೋಟಿ ಕೋಟಿ ಪರಿಹಾರ ಕೊಡುವ ಬದಲಾಗಿ, ಅದೇ ಹಣದಿಂದ ಆನೆಗಳು ಬರದಂತೆ ತಂತಿ ಬೇಲಿ ಕಾರಿಡಾರ್  ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: Elephant Attack: 6 ಸಾವಿರ ಟೊಮ್ಯಾಟೊ ಗಿಡ ನಾಶ ಮಾಡಿದ ಕಾಡಾನೆಗಳು; ಕಂಗಾಲಾದ ಚನ್ನಪಟ್ಟಣದ ರೈತ!

ಕಳೆದ ಎರಡು ವಾರಗಳ ಹಿಂದೆ ಚನ್ನಪಟ್ಟಣದ ನೀಲಸಂದ್ರ ಗ್ರಾಮದಲ್ಲಿ (Channapattana Neelasandra Village) ಕಾಡಾನೆಗಳ ಹಿಂಡು (Elephant Attack) ರೈತನ ಕೃಷಿ ಭೂಮಿಗೆ ಲಗ್ಗೆಯಿಟ್ಟು ಬೆಳೆ ನಾಶಪಡಿಸಿದ್ದವು. ಗ್ರಾಮದ ಲೋಕೇಶ್ ಬಾಬು ಎಂಬುವವರು 1.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 6 ಸಾವಿರ  ಟೊಮ್ಯಾಟೊ ಗಿಡಗಳನ್ನು ಕಾಡಾನೆಗಳ ಹಿಂಡು ತುಳಿದು ಹಾಕಿದ್ದವು. ಸುಮಾರು 80 ಸಾವಿರ ಹಣ ಖರ್ಚು ಮಾಡಿದ್ದ ರೈತ ಲೋಕೇಶ್ ಬಾಬುಗೆ ಈಗ ಸಂಪೂರ್ಣ ನಷ್ಟವಾಗಿದೆ. ಇನ್ನು ಈ ಬೆಳೆಯಿಂದ 2 ರಿಂದ 3 ಲಕ್ಷ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ ಒಂದೇ ಒಂದು ಕೂಯ್ಲು ಕಟಾವ್  ಮಾಡದ ರೈತ ಲೋಕೇಶ್ ಅವರ ಆದಾಯವನ್ನು ಕಾಡಾನೆಗಳು ಒಂದೇ ರಾತ್ರಿ ಹಾಳು ಮಾಡಿದ್ದವು.

ವರದಿ : ಎ.ಟಿ.ವೆಂಕಟೇಶ್
Published by:HR Ramesh
First published: