ಕನಕಪುರ: ಸಂಸದ ಡಿ.ಕೆ.ಸುರೇಶ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಸುರೇಶ್ ಪತ್ರಕರ್ತರ ವಿಚಾರವಾಗಿ ವಿಸ್ತೃತವಾಗಿ ಮಾತನಾಡಿದರು. ನಮ್ಮ ನಾಗರೀಕ ಸಮಾಜ ಅಚ್ಚುಕಟ್ಟಾಗಿ ಇರಬೇಕಾದರೆ ಪತ್ರಕರ್ತರು ಮಾತ್ರವಲ್ಲದೇ ಪ್ರಜಾಪ್ರಭುತ್ವದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗವೂ ಸಹ ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕೆಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಪ್ರಶ್ನೆ ಮಾಡುವ ಅಧಿಕಾರ ಪತ್ರಕರ್ತರಿಗೆ ಇದೇ. ಹಾಗಾಗಿ ಪತ್ರಕರ್ತ ವೃತ್ತಿ ಬಹಳ ದೊಡ್ಡ ಜವಾಬ್ದಾರಿ ಎಂದು ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ನಮ್ಮ ಮೇಲೂ ಸಹ ಅನೇಕ ವರದಿ ಮಾಡುತ್ತೀರಿ. ನಕಾರಾತ್ಮಕ, ಸಕಾರಾತ್ಮಕ ಸುದ್ದಿಗಳು ಬರುತ್ತವೆ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ ನಾವೇ ಮೊದಲು ಎಂಬ ಆತುರದಿಂದ ಕೆಲವೊಮ್ಮೆ ತಪ್ಪು ಸುದ್ದಿಗಳು ಸಹ ಬಿತ್ತರವಾಗುತ್ತವೆ. ಈ ವಿಚಾರವಾಗಿ ಪತ್ರಿಕೋದ್ಯಮದಲ್ಲಿ ಕೆಲ ಬದಲಾವಣೆಯಾಗಬೇಕಿದೆ ಎಂದರು. ಇನ್ನು ಯಾವುದೇ ವಿಚಾರವಾಗಲಿ ಸಮಾಜದ ಹಿತಕ್ಕಾಗಿ ಪತ್ರಕರ್ತರು ಕೆಲಸ ಮಾಡಬೇಕಿದೆ. ಹಾಗಾಗಿ ಎಲ್ಲಾ ಪತ್ರಕರ್ತರಿಗೂ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ ಡಿ.ಕೆ.ಸುರೇಶ್, ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸರಿಯಲ್ಲ. ಮೋದಿ ಸರ್ಕಾರದಲ್ಲಿ ಎಲ್ಲವೂ ನಾವೇ ಮಾಡಿದ್ದು ಎನ್ನುವುದು ನಡೆಯುತ್ತಿದೆ. ಈ ವ್ಯವಸ್ಥೆ ಬದಲಾಗಬೇಕು. ಈ ಬಗ್ಗೆ ಸೂಕ್ತವಾಗಿ ಚಿಂತನೆ ನಡೆಸಬೇಕಿದೆ. ಈಗ ಕೋವಿಡ್ ನಿಂದಾಗಿ ಯಾವ ಶಾಲೆಗಳು ನಡೆದಿಲ್ಲ, ಈ ಹೊತ್ತಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯಕತೆ ಬಗ್ಗೆ ಚರ್ಚೆ ನಡೆಸಬೇಕು. ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದರೆ ಇಲ್ಲಿ ಹಿಂದುತ್ವದ ವಿಚಾರ ಬೇಕಿಲ್ಲ ಎಂದರು.
ಕೋವಿಡ್ ಇದ್ದರೂ ಬಿಜೆಪಿ ಪಕ್ಷದ ದರ್ಬಾರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುರೇಶ್ ಬಿಜೆಪಿಯವರಿಗೆ ಕೋವಿಡ್ ಬಗ್ಗೆ ಯಾವುದೇ ಗಮನವಿಲ್ಲ. ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಬೇರೆ ಬೇರೆ ಕಾಯಿಲೆಗಳು ಬರುತ್ತಿವೆ. ಯುವಕರಿಗೆ ಬ್ಲಾಕ್ ಫಂಗಸ್ ಹಾಗೂ ಇತರೆ ಕಾಯಿಲೆ ಕಾಣಿಸಿಕೊಳ್ತಿದೆ. ಆದರೆ ಇವರಿಗೆ ಯಾವುದೇ ಜವಾಬ್ದಾರಿ ಇಲ್ಲ. ಬರೀ ಕಾರ್ಯಕ್ರಮ, ರ್ಯಾಲಿಗಳನ್ನ ಮಾಡ್ತಿದ್ದಾರೆಂದು ಬಿಜೆಪಿ ನಾಯಕರ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ದಾರೆ ಅಷ್ಟೇ. ಕಳೆದ ಏಳು ವರ್ಷದಲ್ಲಿ ಇದನ್ನೇ ಇವರು ಮಾಡಿದ್ದು ಎಂದು ಸಂಸದ ಕಿಡಿ ಕಾರಿದರು.
ಇದನ್ನು ಓದಿ: NEP ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ನಾಗ್ಪುರ ಶಿಕ್ಷಣ ನೀತಿ: ಡಿ.ಕೆ. ಶಿವಕುಮಾರ್ ಆಕ್ರೋಶ
ಇನ್ನು ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಇಂದು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಸಹ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿರುವ NEP ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ಅದು ನಾಗ್ಪುರ ಶಿಕ್ಷಣ ನೀತಿ ಎಂದು ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚೆ ಆಗದೇ ಇರುವ ನೀತಿಯನ್ನು ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ನೀವು ಏನೇ ತಿಪ್ಪರಲಾಗ ಹಾಕಿದರೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ಯಾಗದೇ ಇದನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಖಡಾಖಂಡಿತವಾಗಿ ಹೇಳಿದ್ದಾರೆ.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ