CP Yogeshwar- ಈಗಲ್ಲ, ಮುಂದೆ ನಾನು ಮಾತನಾಡುತ್ತೇನೆ: ಸಿ.ಪಿ. ಯೋಗೇಶ್ವರ್

ಸರ್ಕಾರದಲ್ಲಿ ಸ್ಥಾನ ಸಿಕ್ಕಾಗ ಮಾತ್ರ ಸಾಮಾನ್ಯವಾಗಿ ಚನ್ನಪಟ್ಟಣದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಿ.ಪಿ. ಯೋಗೇಶ್ವರ್ ಅವರು ನಿನ್ನೆ ತಮ್ಮ ಹುಟ್ಟುಹಬ್ಬದ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಸಿ ಪಿ ಯೋಗೇಶ್ವರ್

ಸಿ ಪಿ ಯೋಗೇಶ್ವರ್

  • Share this:
ಚನ್ನಪಟ್ಟಣ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (C P Yogeshwar) ಅವರು ನಿನ್ನೆ ಕಾರ್ಯಕರ್ತರೊಂದಿಗೆ ಚನ್ನಪಟ್ಟಣದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ತಮ್ಮ ಮನೆಯಲ್ಲಿ ಕೇಕ್ ಕಟ್ ಮಾಡಿ ಆಚರಣೆ ಮಾಡಿಕೊಂಡ ಯೋಗೇಶ್ವರ್ ಅವರಿಗೆ ಕಾರ್ಯಕರ್ತರು ಶುಭಕೋರಿದರು. ಹೂವಿನ ಹಾರ ಹಾಕಿ, ಕೇಕ್ ಕಟ್ ಮಾಡಿಸಿ ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರು ತಮ್ಮ ನಾಯಕನಿಗೆ ಶುಭಾಶಯ ತಿಳಿಸಿದರು. ಈ ವೇಳೆ ಮಾಧ್ಯಮದವರನ್ನ ಕಂಡು ಮನೆಯೊಳಗೆ ಹೊರಟ ಯೋಗೇಶ್ವರ್, ತಾನು ಯಾವುದೇ ವಿಚಾರದ ಬಗ್ಗೆ ಮಾತನಾಡಲ್ಲ, ಮುಂದೆ ನಾನೇ ಕರೆಯುತ್ತೇನೆ, ಆಗ ಮಾತನಾಡೋಣ ಎಂದು ಪ್ರತಿಕ್ರಿಯಿಸಿದರು.

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಿಪಿವೈ; ಕಾರ್ಯಕರ್ತರು ಕಂಗಾಲು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೇರೆಬೇರೆ ಕಾರಣದಿಂದಾಗಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಪಕ್ಷದಲ್ಲಿ ಹಿರಿಯ ಶಾಸಕರಿದ್ದರೂ ಸಹ, ಚುನಾವಣೆಯಲ್ಲಿ ಸೋತಿದ್ದ ಯೋಗೇಶ್ವರ್​ಗೆ ಮಂತ್ರಿ ಸ್ಥಾನ ‌ಸಿಕ್ಕಿತ್ತು. ಆದರೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆಯೇ ಯೋಗೇಶ್ವರ್ ಗೂ ಸಹ ಅಧಿಕಾರ ನಷ್ಟವಾಗಿದೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗದೇ ಇರುವುದು ಯೋಗೇಶ್ವರ್ ಅವರಿಗೆ ನುಂಗಲಾರಾದ ತುತ್ತಾಗಿದೆ. ಇನ್ನು ಕಾರ್ಯಕರ್ತರು ಸಹ ಫುಲ್ ಡಲ್ ಆಗಿದ್ದಾರೆ. ಆದರೆ ಯೋಗೇಶ್ವರ್ ಮಾತ್ರ ಈಗಲೂ ಸಹ ತನ್ನ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಲೇ ಇದ್ದಾರೆ. ದೆಹಲಿಗೂ ಹೋಗಿ ಬಂದಿರುವ ಯೋಗೇಶ್ವರ್ ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ಕೂಡ ನಡೆಸಿದ್ದರು.

ಅಧಿಕಾರ ಇಲ್ಲದಿದ್ದರೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಯೋಗೇಶ್ವರ್:

ಸಿ. ಪಿ. ಯೋಗೇಶ್ವರ್ ಅವರು ಸಾಮಾನ್ಯವಾಗಿ ಯಾವುದೇ ಅಧಿಕಾರ ಇಲ್ಲದಿದ್ದಾಗ ಚನ್ನಪಟ್ಟಣದಲ್ಲಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಮಾಧ್ಯಮದವರ ಕೈಗೂ ಸಿಗಲ್ಲ, ಸಿಕ್ಕರೂ ಸಹ ಯಾವುದೇ ವಿಚಾರವಾಗಿ ಪ್ರತಿಕ್ರಿಯೆ ನೀಡಲ್ಲ. ಆದರೆ ಸರ್ಕಾರದ ಮಟ್ಟದಲ್ಲಿ ಅಧಿಕಾರ ಸಿಕ್ಕರೆ ಸಾಕು ಜನರ ಮಧ್ಯೆ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಜೊತೆಗೆ ವಿಚಾರ ಇಲ್ಲದಿದ್ದರೂ ಸಹ ಮಾಧ್ಯಮದಲ್ಲಿ ಹೆಚ್ಚಾಗಿ ಸುದ್ದಿಯಾಗ್ತಾರೆ. ಇದೊಂದು ವಿಶೇಷತೆಯನ್ನ ಯೋಗೇಶ್ವರ್ ಅವರಲ್ಲಿ ಕಾಣಬಹುದಾಗಿದೆ. ಇನ್ನು ಚನ್ನಪಟ್ಟಣದಲ್ಲಿಯೂ ಹೆಚ್ಚು ಶ್ರಮವಹಿಸದ ಯೋಗೇಶ್ವರ್ ತಮ್ಮ ಶ್ರಮವನ್ನೆಲ್ಲ ಸಚಿವ ಸ್ಥಾನ ಪಡೆಯುವ ಕಡೆಗೆ ವ್ಯಯಿಸುತ್ತಿರುವುದು ಸುಳ್ಳಲ್ಲ.

ಇದನ್ನೂ ಓದಿ: 2 ಎ ಮೀಸಲಾತಿ ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 1 ರಿಂದ ಮತ್ತೆ ಧರಣಿ

ಪಕ್ಷ ಸಂಘಟನೆಗೆ ಮುಂದಾಗದ ಮಾಜಿ ಸಚಿವ; ಪಕ್ಷದ ವಿರುದ್ಧ ಬೇಸರ:

ಸಚಿವ ಸ್ಥಾನ ಸಿಗದ ಕಾರಣ ಸಿ.ಪಿ.ಯೋಗೇಶ್ವರ್ ಬಿಜೆಪಿ ಪಕ್ಷದ ಸಂಘಟನೆ ವಿಚಾರದಲ್ಲಿ ಹಿಂದೆ ಉಳಿದಿದ್ದಾರೆ. ಪ್ರಮುಖವಾಗಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನ ಸಂಘಟನೆ ಮಾಡ್ತೇನೆಂದು ಬಿಜೆಪಿ ಪಕ್ಷದಲ್ಲಿ ಬಿಂಬಿಸಿಕೊಂಡಿರುವ ಯೋಗೇಶ್ವರ್ ಈಗ ಇದರಿಂದಾಗಿ ಸಂಪೂರ್ಣ ಹಿಂದೆ ಸರಿದ್ದಿದ್ದಾರೆ. ಈ ಹಿನ್ನೆಲೆ ಇದು ಮುಂದೆ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು ಎಂಬ ಚರ್ಚೆ ಒಂದೆಡೆ ಇದ್ದರೆ. ಮತ್ತೊಂದು ಕಡೆ ಯೋಗೇಶ್ವರ್ ಭವಿಷ್ಯದಲ್ಲಿ ಬಿಜೆಪಿಯಲ್ಲಿ ಉಳಿಯಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನ ಕಾಲವೇ ಉತ್ತರಿಸಬೇಕು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: