ರಾಮನಗರ: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳು ಸಂಗಮವಾದ ಅಪರೂಪದ ಘಟನೆ ನಡೆಯಿತು. ನಗರದ ಅಂಬೇಡ್ಕರ್ ಭವನದಲ್ಲಿ ಕವಿ ಸಿದ್ದಲಿಂಗಯ್ಯ ಅವರ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್, ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಸಿ. ಪಿ. ಯೋಗೇಶ್ವರ್ ಮತ್ತು ಡಿ. ಕೆ. ಸುರೇಶ್ ನಗುನಗುತ್ತಲೇ ಮಾತನಾಡಿದರು. ಈ ವೇಳೆ ಕುಮಾರಸ್ವಾಮಿ ನೋಡಿ ಕಣ್ಣೊಡೆದು ನಕ್ಕ ಯೋಗೇಶ್ವರ್ ಡಿ. ಕೆ. ಸುರೇಶ್ ಅವರಿಗೆ ಸನ್ನೆ ಮಾಡಿದರು. ಯೋಗೇಶ್ವರ್ ರಿಯಾಕ್ಷನ್ಗೆ ಡಿ.ಕೆ. ಸುರೇಶ್ ಸಹ ನಕ್ಕರು. ಈ ವೇಳೆ ಕುಮಾರಸ್ವಾಮಿ ಗರಂ ಆಗಿ ಕಾರ್ಯಕ್ರಮ ಆಯೋಜಕರಿಗೆ ಆಕ್ರೋಶ ವ್ಯಕ್ತಪಡಿಸಿದರು. ಕೆಲಸವಿಲ್ಲದೇ ತಾನು ಇಲ್ಲಿಗೆ ಬಂದಿಲ್ಲ. ಬೇಗ ಕಾರ್ಯಕ್ರಮ ನಡೆಸಿ ಎಂದು ಹೆಚ್ಡಿಕೆ ತಾಕೀತು ಮಾಡಿದರು. ನಂತರ ಡಿ.ಕೆ. ಸುರೇಶ್ ಜೊತೆಗೆ ಕುಮಾರಸ್ವಾಮಿ ಮಾತನಾಡಿದರು.
ಇನ್ನು ವೇದಿಕೆ ಭಾಷಣ ಮುಗಿಸಿ ಪಕ್ಷದ ಕಾರ್ಯಕ್ರಮವಿದ್ದ ಹಿನ್ನೆಲೆ ಕಾರ್ಯಕ್ರಮದಿಂದ ಅರ್ಧಕ್ಕೆ ಹೆಚ್ಡಿಕೆ ನಿರ್ಗಮಿಸಿದರು. ಡಿ.ಕೆ. ಸುರೇಶ್ ಮತ್ತು ಸಿ.ಪಿ. ಯೋಗೇಶ್ವರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು. ಕಾರ್ಯಕ್ರಮದಿಂದ ಹೊರಹೋಗುವ ಮುನ್ನ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ತಿರುಗೇಟು ನೀಡಿದರು. ದೇಶವನ್ನ ಆಳುತ್ತಿರೋ ಪಕ್ಷ ಬಿಜೆಪಿ. ಎರಡನೇ ಬಾರಿಗೆ ದೇಶವನ್ನ ಆಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನ ನಿಲ್ಲಿಸಬೇಕು. ನನಗೆ ಬುದ್ದಿ ಹೇಳುವ ಮೊದಲು ಅವರ ನಡುವಳಿಕೆ ಏನೆಂಬುದನ್ನ ನೋಡಿಕೊಳ್ಳಲಿ. ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ಕೇಳಿ ತಿಳಿದುಕೊಳ್ಳಲಿ. ನನ್ನ ಬಗ್ಗೆ, ನಮ್ಮ ಪಕ್ಷದ ಮಾಹಿತಿ ಇಲ್ಲ ಅಂದ್ರೆ ಪ್ರಧಾನಮಂತ್ರಿ ಅವರ ಹತ್ತಿರ ಕೇಳಿ ತಿಳಿದುಕೊಳ್ಳಲಿ ಎಂದು ಅರುಣ್ ಸಿಂಗ್ ಅವರನ್ನ ಕುಮಾರಸ್ವಾಮಿ ಕುಟುಕಿದರು.
ತೈಲಬೆಲೆ ಏರಿಕೆ ವಿಚಾರಕ್ಕೆ ಹೆಚ್ಡಿಕೆ ಮಾತನಾಡಿ, ಜನರು ಈ ಬಗ್ಗೆ ಅರ್ಥ ಮಾಡಿಕೊಳ್ಳಲಿ, ಬಡ ಜನರ ಮೇಲೆ ಹೊರೆ ಏರಿಕೆ ಮಾಡಿದ್ದಾರೆ. ಕೂಲಿ ಕಾರ್ಮಿಕ ಕೂಡ ವರ್ಷಕ್ಕೆ ಒಂದು ಲಕ್ಷ ತೆರಿಗೆ ಕಟ್ಟುತ್ತಾನೆ. ಬಿಜೆಪಿ ಸರ್ಕಾರ ನಾಡಿನ ಬಡವರಿಗೆ ನೀಡುತ್ತಿರೋ ಕೊಡುಗೆ ಇದು ಎಂದು ಟೀಕಿಸಿದರು.
ಇದನ್ನೂ ಓದಿ: ಗೊತ್ತಿಲ್ಲದೆ ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿದ ವೃದ್ಧೆ; ಮುಂದೇನಾಯ್ತು ಗೊತ್ತಾ?
ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂಬ ವಿಚಾರಕ್ಕೆ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಮ್ಯಾಪ್ ಇದೆಯೋ, ಕಿತ್ತಾಕಿದರೋ ಗೊತ್ತಿಲ್ಲ. ರಾಜ್ಯಕ್ಕೆ ಏನು ತೊಂದರೆ ಆಗುತ್ತಿದೆ, ಅನ್ಯಾಯವಾಗಿದೆ ಎಂಬುದನ್ನು ಉಸ್ತುವಾರಿಗಳು ಗಮನಿಸಿ ಪರಿಹಾರ ನೀಡಬೇಕು. ಬರೀ ಪಕ್ಷ ಸಂಘಟನೆ ಮಾಡುವುದಲ್ಲ ಎಂದು ತಿಳಿಹೇಳಿದ ಅವರು, ಕೇಂದ್ರ ಸರ್ಕಾರ ಜನರ ಸಾಮಾನ್ಯರಿಗೆ ಎಷ್ಟು ಸ್ವಂದಿಸಿದೆ ಎಂದು ಪ್ರಶ್ನೆ ಮಾಡಿದರು.
ವೇದಿಕೆಯಲ್ಲಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಯೋಗೇಶ್ವರ್ ಮತ್ತೆ ಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿ ಗಮನ ಸೆಳೆದರು. “ಯೋಗೇಶ್ವರ್ ಮಂತ್ರಿ ಆಗ್ತಿದ್ದಾರೆ. ಅವರಿಗೆ ಹಾಗೂ ಅವರ ಬೆಂಬಲಿಗರಿಗೆ ಶುಭಕೋರುತ್ತೇನೆ. ನಾನು ಇನ್ನು ಹೆಚ್ಚು ಮಾತನಾಡಲ್ಲ. ಯಾಕೆಂದರೆ ನಾಳೆ ಅವರು ಮಂತ್ರಿ ಆದರೆ ಕಷ್ಟ ಆಗ್ತದೆ” ಎಂದು ವೇದಿಕೆಯಲ್ಲಿ ಮಾತನಾಡುತ್ತ ಡಿ.ಕೆ. ಸುರೇಶ್ ನಕ್ಕರು.
ವೇದಿಕೆ ಮೇಲಿನ ಹೇಳಿಕೆ ವಿಚಾರವಾಗಿ ಸಂಸದ ಡಿ. ಕೆ. ಸುರೇಶ್ ಸ್ಪಷ್ಟನೆ ನೀಡಿದರು. “ಯೋಗೇಶ್ವರ್ ಸಚಿವರಾಗ್ತಾರೆ ಅಂತ ನಾನು ಹೇಳಿದ್ದಲ್ಲ. ವೇದಿಕೆಯಲ್ಲಿ ಸ್ವಾಮೀಜಿಗಳು ಅಂದ್ರು. ನಾನು ಶುಭಾಶಯ ಹೇಳಿದೆ ಅಷ್ಟೇ. ನಾನು ಭಯ ಅಂದಿದ್ದು, ಎಲ್ಲೆಲ್ಲಿ ಏನೇನೂ ಬಿಡ್ತಾರೋ ಅಂತಾ ಹಾಗೇಳಿದೆ” ಎಂದರು. ಡಿ.ಕೆ.ಸುರೇಶ್ ಹೇಳಿಕೆಗೆ ಸಿ.ಪಿ. ಯೋಗೇಶ್ವರ್ ನೋ ರಿಯಾಕ್ಷನ್ ಸಿಗ್ನಲ್ ಕೊಟ್ಟರು. ನನಗೆ ಏನು ಗೊತ್ತಿಲ್ಲಪ್ಪ ಅದರ ಬಗ್ಗೆ ಎಂದು ಕೈ ಮುಗಿದು ಯೋಗೇಶ್ವರ್ ಹೊರಟರು.
ವರದಿ: ಎ.ಟಿ.ವೆಂಕಟೇಶ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ