ನಿತ್ಯಾನಂದ ವಿರುದ್ಧ ಬಂಧನ ವಾರೆಂಟ್​; ರಾಮನಗರ ಸತ್ರ ನ್ಯಾಯಾಲಯ ಆದೇಶ

ವಿವಾದಗಳಿಂದಲೇ ಹೆಸರಾಗಿರುವ ಸ್ವಾಮಿ ನಿತ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಅವರು ಗುಜರಾತ್​ನ ಅಹಮದಾಬಾದ್​ನಲ್ಲಿರುವ ತಮ್ಮ ಆಶ್ರಮದ ಇನ್ನೊಂದು ಬ್ರಾಂಚ್​ಗೆ ಶಿಫ್ಟ್​ ಆಗಿದ್ದರು. ಅವರ ಆಶ್ರಮದ ಆಡಳಿತ ಮಂಡಳಿಯೂ ಅಹಮದಾಬಾದ್​ಗೆ ಸ್ಥಳಾಂತರವಾಗಿತ್ತು. ನಂತರ ಅವರು ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ಕಾಣಿಸಿಕೊಂಡಿರಲೇ ಇಲ್ಲ.

MAshok Kumar | news18-kannada
Updated:February 19, 2020, 4:43 PM IST
ನಿತ್ಯಾನಂದ ವಿರುದ್ಧ ಬಂಧನ ವಾರೆಂಟ್​; ರಾಮನಗರ ಸತ್ರ ನ್ಯಾಯಾಲಯ ಆದೇಶ
ನಿತ್ಯಾನಂದ.
  • Share this:
ರಾಮನಗರ (ಫೆ. 19); ಅತ್ಯಾಚಾರ, ಬಾಲಕಿಯರ ಅಪಹರಣ ಸೇರಿದಂತೆ ರಾಜ್ಯದಲ್ಲಿ ಹತ್ತಾರು ಪ್ರಕರಣಗಳ ಗಂಭೀರ ಆರೋಪ ಎದುರಿಸುತ್ತಿರುವ ಬಿಡದಿ ನಿತ್ಯಾನಂದ ವಿರುದ್ಧ ರಾಮನಗರ ಸತ್ರ ನ್ಯಾಯಾಲಯ ಬಂಧನ ವಾರೆಂಟ್​ ಹೊರಡಿಸಿದೆ.

ಬಿಡದಿಯ ನಿತ್ಯಾನಂದ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಳೆದ ಫೆಬ್ರವರಿ. 05ರಂದು ಬೆಂಗಳೂರು ಹೈಕೋರ್ಟ್​ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಆದೇಶ ಹೊರಡಿಸಿರುವ ರಾಮನಗರ ಸತ್ರ ನ್ಯಾಯಾಲಯ ಶೀಘ್ರದಲ್ಲಿ ನಿತ್ಯಾನಂದನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ರಾಜ್ಯ ಪೊಲೀಸ್​ ಇಲಾಖೆಗೆ ನಿರ್ದೇಶನ ನೀಡಿದೆ.

ಗುಜರಾತ್​ನಲ್ಲೂ ಮಠ ಹೊಂದಿರುವ ನಿತ್ಯಾನಂದ ವಿರುದ್ಧ ಅಲ್ಲಿಯೂ ಸಹ ಗಂಭೀರ ಆರೋಪಗಳಿದ್ದು, ಆತನ ಬಂಧನಕ್ಕೆ ಸ್ವತಃ ಅಹಮದಾಬಾದ್ ನ್ಯಾಯಾಲಯ ವಾರೆಂಟ್​ ಹೊರಡಿಸಿದೆ. ಆದರೆ, ಆತ ದೇಶದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕೆ ಗುಜರಾತ್​ ಪೊಲೀಸರು ಇಂಟರ್​ಪೋಲ್ ಸಹಯ ಹಸ್ತ ಕೋರಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ನಿತ್ಯಾನಂದ ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ; ಹೀಗಾಗಿ ನೋಟಿಸ್​​ ತಲುಪಿಸಲು ಸಾಧ್ಯವಿಲ್ಲ‘: ಹೈಕೋರ್ಟ್​ಗೆ ಪೊಲೀಸರು

ಹಿಂದಿನಿಂದಲೂ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ತಳ್ಳಿಹಾಕಿದ್ದ ಅವರ ಶಿಷ್ಯರು ನಿತ್ಯಾನಂದ ಸ್ವಾಮಿಗಳು ದೀರ್ಘಕಾಲದ ತಪಸ್ಸಿಗಾಗಿ ಉತ್ತರ ಭಾರತಕ್ಕೆ ತೆರಳಿದ್ದಾರೆ ಎಂದು ಹೇಳಿದ್ದರು. ಬಳಿಕ ವಿವಾದಿತ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಹೋಗಿರುವುದನ್ನು ಗುಜರಾತ್​ ಪೊಲೀಸರು ಸ್ಪಷ್ಟಪಡಿಸಿದ್ದರು.

ವಿವಾದಗಳಿಂದಲೇ ಹೆಸರಾಗಿರುವ ಸ್ವಾಮಿ ನಿತ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಅವರು ಗುಜರಾತ್​ನ ಅಹಮದಾಬಾದ್​ನಲ್ಲಿರುವ ತಮ್ಮ ಆಶ್ರಮದ ಇನ್ನೊಂದು ಬ್ರಾಂಚ್​ಗೆ ಶಿಫ್ಟ್​ ಆಗಿದ್ದರು. ಅವರ ಆಶ್ರಮದ ಆಡಳಿತ ಮಂಡಳಿಯೂ ಅಹಮದಾಬಾದ್​ಗೆ ಸ್ಥಳಾಂತರವಾಗಿತ್ತು. ನಂತರ ಅವರು ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ಕಾಣಿಸಿಕೊಂಡಿರಲೇ ಇಲ್ಲ.

ನಿತ್ಯಾನಂದ ಸ್ವಾಮಿ ಇತ್ತೀಚೆಗೆ ತಮ್ಮ ಪ್ರವಚನದ ಕೆಲವು ವಿಡಿಯೋ ತುಣುಕುಗಳನ್ನು ಕೂಡ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಆ ಯಾವ ವಿಡಿಯೋಗಳೂ ಈಗ ರೆಕಾರ್ಡ್​ ಮಾಡಿರುವುದಲ್ಲ. ನಿತ್ಯಾನಂದ ಸ್ವಾಮಿ ಬೆಂಗಳೂರಿಗೆ ಬಾರದೆ ಅನೇಕ ವರ್ಷಗಳಾಗಿವೆ. ಆತನ ಮೇಲೆ ರಂಜಿತಾ ಸೇರಿದಂತೆ ಇನ್ನೂ ಕೆಲವು ಶಿಷ್ಯರು ಅತ್ಯಾಚಾರದ ಆರೋಪ ಮಾಡಿದ ನಂತರ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಎಂದು ಅಹಮದಾಬಾದ್​ ಪೊಲೀಸರು ಹೇಳಿದ್ದರು.ಕೆಲವು ದಿನಗಳ ಹಿಂದಷ್ಟೆ ನಿತ್ಯಾನಂದ ಆಶ್ರಮದ ಸಿಬ್ಬಂದಿಯ ವಿರುದ್ಧ ನಿತ್ಯಾನಂದನ ಶಿಷ್ಯರೊಬ್ಬರು ಗಂಭೀರ ಆರೋಪ ಮಾಡಿದ್ದರು. ಆಶ್ರಮದ ಗುರುಕುಲದಲ್ಲಿರುವ ತಮ್ಮ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ, ಆಕೆಯನ್ನು ನೋಡಲು ಕೂಡ ಅವಕಾಶ ನೀಡುತ್ತಿಲ್ಲ ಎಂದು ಅಹಮದಾಬಾದ್​ ಆಶ್ರಮದ ಮುಂದೆ ಹೇಳಿಕೆ ನೀಡಿದ್ದರು. ನಂತರ ಈ ಪ್ರಕರಣ ಇನ್ನಷ್ಟು ತಿರುವುಗಳನ್ನು ಪಡೆದುಕೊಂಡಿತ್ತು.

2018ರಲ್ಲೇ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿತ್ತು. 2018ರ ಮಧ್ಯದಲ್ಲಿ ಪಾಸ್​ಪೋರ್ಟ್​ ನವೀಕರಣಕ್ಕೆ ರಾಮನಗರ ಪೊಲೀಸರಿಗೆ ಮನವಿ ಮಾಡಿದ್ದ. ಆದರೆ ಅಂದು ಎಸ್​ಪಿಯಾಗಿದ್ದ ರಮೇಶ್​ ಬಾನೋತ್​ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಕೋರ್ಟ್​ ಸಮನ್ಸ್​ ನೀಡಿದ ನಂತರವೂ ಕೋರ್ಟ್​ಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪಾಸ್​ಪೋರ್ಟ್​ ನವೀಕರಣಕ್ಕೆ ಪೊಲೀಸರು ಪರವಾನಗಿ ನೀಡಿರಲಿಲ್ಲ. ಅದರ ಬೆನ್ನಲ್ಲೇ ಅವರು ಗುಜರಾತ್​ಗೆ ಹೋಗಿದ್ದರು.

ದೇಶದಿಂದ ಹೇಗೆ ಪರಾರಿ?: ಮೂಲಗಳ ಪ್ರಕಾರ, ನಿತ್ಯಾನಂದ ದೇಶದಿಂದ ಪರಾರಿಯಾಗಲು ಒಂದೋ ನಕಲಿ ಪಾಸ್​ಪೋರ್ಟ್​ ಮತ್ತು ಐಡೆಂಟಿಟಿ ಬಳಕೆ ಮಾಡಿರಬೇಕು. ಇಲ್ಲವಾದಲ್ಲಿ ಬೇರೆ ದೇಶದ ಪಾಸ್​ಪೋರ್ಟ್​ ಪಡೆದು ಭಾರತದಿಂದ ಆಚೆ ಹೋಗಿರಬೇಕು. ಅಥವಾ ರಾಮನಗರ ಪೊಲೀಸರು ನವೀಕರಣಕ್ಕೆ ಅವಕಾಶ ನೀಡದ ನಂತರವೂ ಇನ್ನಾವುದಾದರೂ ಮಾರ್ಗದಿಂದ ಪಾಸ್​ಪೋರ್ಟ್​ ನವೀಕರಿಸಿಕೊಂಡಿರಬೇಕು.

ಇದನ್ನೂ ಓದಿ : ಅತ್ಯಾಚಾರ ಆರೋಪಿ ನಿತ್ಯಾನಂದ ಜಾಮೀನು ರದ್ದು: ಕರ್ನಾಟಕ ಹೈಕೋರ್ಟ್​ ಆದೇಶ
First published: February 19, 2020, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading